Advertisement
ಬಹುತೇಕ ಎಲ್ಲ ಸಮೀಕ್ಷೆಗಳೂ ರಾಜ್ಯದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲುವುದಾಗಿ ಹೇಳಿರುವುದರಿಂದ ಸಂತಸದಲ್ಲಿರುವ ಬಿಜೆಪಿ ನಾಯಕರು, ಬಹುತೇಕ ಸಮೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿವೆ ಎಂದಿದ್ದು, ಇದೇ ರೀತಿಯ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಚುನಾವಣೋತ್ತರ ಸಮೀಕ್ಷೆಯಂತೆಯೇ ಫಲಿತಾಂಶ ಬಂದರೆ ರಾಜ್ಯ ಮೈತ್ರಿ ಸರ್ಕಾರದ ಮೇಲೆ ಉಂಟಾಗುವ ಪರಿಣಾಮ ಆಧರಿಸಿ ಮುಂದಿನ ರಾಜಕೀಯ ದಾಳ ಉರುಳಿಸಲು ಸಿದ್ದತೆ ನಡೆಸಿದ್ದಾರೆ.
Related Articles
Advertisement
ಆಂತರಿಕ ಸಮೀಕ್ಷೆಯಲ್ಲಿತ್ತು ಸುಳಿವು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮೊದಲ ಸುತ್ತಿನ ಮತದಾನಕ್ಕೂ ಕೆಲ ದಿನ ಬಾಕಿ ಇರುವಂತೆ ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲೇ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವ ಸುಳಿವು ಸಿಕ್ಕಿತ್ತು. ಹಾಲಿ 2-3 ಸಂಸದರು ಪರಾಭವಗೊಂಡರೂ ಹೊಸ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಬಗ್ಗೆ ಸಮೀಕ್ಷಾ ವರದಿಯಲ್ಲಿ ದಾಖಲಾಗಿತ್ತು.
ಹಾಗಾಗಿ, ಗೆಲ್ಲುವ ಸಾಧ್ಯತೆ ಶೇ.50ರಷ್ಟಿರುವ ಕ್ಷೇತ್ರಗಳಲ್ಲೂ ಹೆಚ್ಚು ಶ್ರಮ ವಹಿಸಿ ಮತದಾರರನ್ನು ಸೆಳೆಯುವ ಕಸರತ್ತು ಮಾಡಿತ್ತು. ಈ ಪ್ರಯತ್ನಗಳೆಲ್ಲಾ ಕೈಹಿಡಿದಿವೆಯೇ ಎಂಬುದು ಫಲಿತಾಂಶ ಪ್ರಕಟವಾದ ನಂತರವಷ್ಟೇ ಗೊತ್ತಾಗಲಿದೆ.
ರಾಜಕೀಯ ಲೆಕ್ಕಾಚಾರ ಶುರು: ರಾಜ್ಯ ಬಿಜೆಪಿ ನಾಯರು ನಿರೀಕ್ಷಿಸಿದಂತೆಯೇ ಸದ್ಯ ಪ್ರಕಟವಾಗಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಸಾಧ್ಯತೆ ಕಂಡು ಬಂದಿದೆ. ಈ ಸಮೀಕ್ಷಾ ವರದಿಗಳ ಜತೆಗೆ ಪಕ್ಷದ ಆಂತರಿಕ ಸಮೀಕ್ಷಾ ವರದಿಗಳನ್ನು ತಾಳೆ ಹಾಕಿ ಪರಿಶೀಲಿಸಲು ಬಿಜೆಪಿ ಸಜ್ಜಾಗಿದೆ. ಇನ್ನೊಂದೆಡೆ, ಜೆಡಿಎಸ್‌ನೊಂದಿಗಿನ ಮೈತ್ರಿಯಿಂದ ಕಾಂಗ್ರೆಸ್‌ಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ.
ಇದು ಫಲಿತಾಂಶದ ಮೇಲೂ ಪರಿಣಾಮ ಬೀರಲಿದೆ ಎಂಬುದಾಗಿ ರಾಜ್ಯ ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಬಳಿ ಅಹವಾಲು ತೋಡಿಕೊಂಡಿದ್ದಾರೆ. ಇದು ಮುಂದೆ ಮೈತ್ರಿ ಸರ್ಕಾರದ ಮೇಲೆ ಬೀರುವ ಪರಿಣಾಮಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚಿಸಿ ಮುಂದುವರಿಯಲು ಬಿಜೆಪಿ ನಾಯಕರು ಚಿಂತಿಸಿದ್ದಾರೆ ಎನ್ನಲಾಗಿದೆ.