Advertisement

ವಾಲ್ಮೀಕಿ ಸಮಾಜದ ಮೀಸಲಾತಿ ಶೇ.7.5ಕ್ಕೆ ಹೆಚ್ಚಿಸಿ

05:58 PM Oct 16, 2021 | Team Udayavani |

ಹಾವೇರಿ: ರಾಜ್ಯದಲ್ಲಿನ ವಾಲ್ಮೀಕಿ ಸಮಾಜಕ್ಕೆ ಈವರೆಗೆ ನ್ಯಾಯವಾಗಿ ಸಿಗಬೇಕಾದ ಮೀಸಲಾತಿ ನೀಡಿಲ್ಲ. ರಾಜ್ಯ ಸರ್ಕಾರ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೂ ಮುನ್ನ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ ಶೇ.7.5ಕ್ಕೆ ಏರಿಸಬೇಕೆಂದು ವಾಲ್ಮೀಕಿ ಗುರುಪೀಠದ ಪೀಠಾ ಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ ಒತ್ತಾಯಿಸಿದರು.

Advertisement

ನಗರದಲ್ಲಿ ಗುರುವಾರ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ವಾಲ್ಮೀಕಿ ನಾಯಕ ಜನಾಂಗದ ಮೀಸಲಾತಿಯ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ ಪರಿಶಿಷ್ಟ ಪಂಗಡದವರ ಜನಸಂಖ್ಯೆ ಸುಮಾರು 50 ರಿಂದ 60 ಲಕ್ಷದಷ್ಟಿದೆ. ಡಾ.ಅಂಬೇಡ್ಕರ್‌ ಅವರು ಹೇಳಿರುವಂತೆ ಮತ್ತು ಸಂವಿಧಾನದ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಯಾವುದೇ ನಿರ್ಬಂಧವಿಲ್ಲ. ಹೀಗಾಗಿ, ಮೀಸಲಾತಿ ಹೆಚ್ಚಿಸಲೇಬೇಕು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ವಾಲ್ಮೀಕಿ ಜಯಂತಿಯ ಗಡುವು ನೀಡಲಾಗಿದೆ ಎಂದು ಹೇಳಿದರು. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದೇ ಹೋದರೆ ನಾಯಕರ ತಾಕತ್ತು ಎಂತಹದ್ದು ಎಂದು ಉಪಚುನಾವಣೆಯಲ್ಲಿ, ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತೋರಿಸಬೇಕಾಗುತ್ತದೆ ಎಂದು ವಾಲ್ಮೀಕಿ ಗುರುಪೀಠದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಸಮಾಜ ಬಾಂಧವರು ಎಚ್ಚರಿಕೆ ನೀಡಿದ್ದಾರೆ ಎಂದರು.

ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ 7.5ಕ್ಕೆ ಮೀಸಲಾತಿ ಹೆಚ್ಚಳ ಮಾಡಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಅವರ ಏಕ ಸದಸ್ಯ ಆಯೋಗ ರಚಿಸಿತ್ತು. ಸಮಿತಿ ವರದಿ ನೀಡಿ ವರ್ಷಗಳೇ ಕಳೆದರು ಸಹ ಈ ಬಗ್ಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಸಮಾಜದ ಶಾಸಕರು, ಮುಖಂಡರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪನವರನ್ನು ಭೇಟಿಯಾಗಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿದ್ದರು. ಆಗ ಅವರು ಸಚಿವ ಶ್ರೀರಾಮುಲು ಅವರ ಅಧ್ಯಕ್ಷತೆಯಲ್ಲಿ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರ ಉಪ ಸಮಿತಿ ರಚಿಸಿದ್ದರು. ಆದರೆ, ಮುಖ್ಯ ಮಂತ್ರಿಗಳು ಬದಲಾಗಿ ಅಂದು ಉಪಸಮಿತಿಯ ಸದಸ್ಯರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಇದೀಗ ಮುಖ್ಯಮಂತ್ರಿಯಾಗಿದ್ದಾರೆ. ಅವರನ್ನು ಸಹ ಇತ್ತೀಚೆಗೆ ಭೇಟಿ ಮಾಡಿ ಮೀಸಲಾತಿ ಹೆಚ್ಚಳಕ್ಕಾಗಿ ಆಗ್ರಹಿಸಲಾಗಿದೆ. ಮುಖ್ಯಮಂತ್ರಿಗಳು ಮೀಸಲಾತಿ ಹೆಚ್ಚಳಕ್ಕೆ ಸಂಬಂ ಧಿಸಿದಂತೆ ಸಮಾಜದ ಬೇಡಿಕೆ ಸ್ಪಂದಿಸುತ್ತಿಲ್ಲ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ದೂರಿದರು.

ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ, ಕೆಪಿಎಸ್‌ಸಿ ಮಾಜಿ ಸದಸ್ಯ ಜಿ.ಟಿ.ಚಂದ್ರ ಶೇಖರಪ್ಪ, ಮುಖಂಡರಾದ ಸಣ್ಣತಮ್ಮಪ್ಪ ಬಾರ್ಕಿ, ಎನ್‌.ಎಂ.ಈಟೇರ, ಫಕ್ಕೀರಪ್ಪ ವಾಲ್ಮೀಕಿ, ಛತ್ರದ, ಮಂಜುಳ ಕರಬಸಮ್ಮನವರ ಮತ್ತಿತರರು ಮಾತನಾಡಿ, ನಮ್ಮ ಸಮುದಾಯದ ಮಕ್ಕಳ ಅಭ್ಯುದಯಕ್ಕಾಗಿ ಮೀಸಲಾತಿ ಹೆಚ್ಚಳ ಮಾಡಲು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಮೀಸಲಾತಿ ಹೆಚ್ಚಿಸಲು ಆಗ್ರಹಿಸಿ ಈಗಾಗಲೇ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಸುಮಾರು 380 ಕಿ.ಮೀ. ಪಾದಯಾತ್ರೆ ನಡೆಸಿದ್ದಾರೆ. ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಸರ್ಕಾರ ಕಳೆದ 40 ವರ್ಷಗಳಿಂದ ಬರೀ ಶೇ.3 ರಷ್ಟು ಮಾತ್ರ ಮೀಸಲಾತಿ ನೀಡುತ್ತಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಮೀಸಲಾತಿ ಹೆಚ್ಚಿಸಬೇಕು ಎಂದರು. ಸಭೆಯಲ್ಲಿ ಶ್ರೀಧರ ದೊಡ್ಡಮನಿ, ಚಂದ್ರಣ್ಣ ಬೇಡರ, ಶೇಖರಪ್ಪ ಕಳ್ಳಿಮನಿ, ಬಸವರಾಜ ಹೊನ್ನೂರಪ್ಪನವರ, ಅಶೋಕ ತಳವಾರ, ಸೋಮನಗೌಡ ಪಾಟೀಲ, ಕೆ.ಮಂಜಪ್ಪ, ಅಶೋಕ ಹರನಗರಿ, ಹೊನ್ನಪ್ಪ ಮಾಳಗಿ, ನಾಗರಾಜ ಯರೆಮನಿ, ಬಸವರಾಜ ಹಾದಿಮನಿ, ಚಂದ್ರು ದೊಡ್ಡತಳವಾರ, ಯಮನಕ್ಕನವರ, ಬಸವರಾಜ ಭೀಮಕ್ಕನವರ, ಸದಾನಂದ ಸವೂರ, ತಳವಾ ರಸರ್‌. ಜಗದೀಶ ಕೊಂಡೆಮ್ಮನವರ, ನೀಲಪ್ಪ, ಮಂಜುನಾಥ ಇಟಗಿ, ಪ್ರಭು ಬಾಸೂರ ಇದ್ದರು. ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ ಸ್ವಾಗತಿಸಿ, ಶೇಖರ ಕಳ್ಳಿಮನಿ ನಿರೂಪಿಸಿದರು .

Advertisement

Udayavani is now on Telegram. Click here to join our channel and stay updated with the latest news.

Next