Advertisement

ಏರ್‌ಪೋರ್ಟ್‌ ಮಾರ್ಗದ ಟೋಲ್‌ ಶುಲ್ಕ ಹೆಚ್ಚಳ

12:18 AM Apr 02, 2019 | Lakshmi GovindaRaju |

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರ ಸಾದಹಳ್ಳಿ ಗೇಟ್‌ ಬಳಿ ಇರುವ ನವಯುಗ ಟೋಲ್‌ ಸಂಸ್ಥೆ, ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಟೋಲ್‌ ಶುಲ್ಕ ಹೆಚ್ಚಿಸಿದೆ. ಈ ನಿರ್ಧಾರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಈಗಾಗಲೇ ದುಬಾರಿ ಟೋಲ್‌ ಶುಲ್ಕ ಪಾವತಿಸುತ್ತಿರುವ ಬಗ್ಗೆ ವಾಹನ ಚಾಲಕರು, ಪ್ರಯಾಣಿಕರು ಸಮಾಧಾನಗೊಂಡಿದ್ದಾರೆ. ಈ ನಡುವೆ ಇತ್ತೀಚೆಗಷ್ಟೇ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಟಿಕೆಟ್‌ ದರ ಶೇ.8ರಷ್ಟು ಹೆಚ್ಚಾಗಿದೆ. ಈ ನಡುವೆ ಟೋಲ್‌ ಶುಲ್ಕ ಕೂಡ ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಕಾರಣ ಈ ರಸ್ತೆಯಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತವೆ. ಪ್ರಸ್ತುತ ದರ ಏರಿಕೆ ಪ್ರಕಾರ ಕಾರುಗಳ ಟೋಲ್‌ ಶುಲ್ಕದಲ್ಲಿ 5ರಿಂದ 10 ರೂ. ಏರಿಕೆ ಮಾಡಲಾಗಿದೆ. ಅದರಂತೆ, ಈ ಮೊದಲು 130 ರೂ. ಇದ್ದ ಕಾರು ಟೋಲ್‌ ಶುಲ್ಕ ಒಮ್ಮುಖ ಪ್ರಯಾಣಕ್ಕೆ (ಸಿಂಗಲ್‌ ಟ್ರಿಪ್‌) 135 ರೂ. ಮತ್ತು ರೌಂಡ್‌ ಟ್ರಿಪ್‌ಗೆ 140 ರೂ. ಆಗಲಿದೆ.

ವಿನಾಯ್ತಿ ನೀಡದ ಸಂಸ್ಥೆ: ಹೆದ್ದಾರಿ ಕಾಮಗಾರಿ ಈಗಾಗಲೇ ಶೇ.80ರಷ್ಟು ಮುಗಿದಿದೆ ಎಂದು 2012ರ ಸೆಪ್ಟೆಂಬರ್‌ನಲ್ಲಿ ಹೈಕಪೊರ್ಟ್‌ಗೆ ಸುಳ್ಳು ಮಾಹಿತಿ ನೀಡಿದ್ದ ಆಂಧ್ರ ಮೂಲದ ಟೋಲ್‌ ಸಂಸ್ಥೆ, ಕಾಮಗಾರಿ ಪೂರ್ಣಗೊಳ್ಳದಿದ್ದರೂ ವಾಹನ ಮಾಲೀಕರಿಂದ ಹಣ ವಸೂಲಿ ಮಾಡಿತ್ತು.

ಅಷ್ಟೇ ಅಲ್ಲದೆ, ಟೋಲ್‌ ಕೇಂದ್ರದಿಂದ 10.ಕಿ.ಮೀ ವ್ಯಾಪ್ತಿಯಲ್ಲಿರುವ ಗ್ರಾಮಗಳ ನಿವಾಸಿಗಳಿಗೆ ಟೋಲ್‌ ಶುಲ್ಕದಿಂದ ವಿನಾಯ್ತಿ ನೀಡುವುದಾಗಿ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದ ಸಂಸ್ಥೆ, ಈವರೆಗೂ ಗ್ರಾಮಸ್ಥರಿಗೆ ವಿನಾಯ್ತಿ ನೀಡುತ್ತಿಲ್ಲ.

Advertisement

ಇದರ ವಿರುದ್ಧ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಎಲ್ಲ ಟೋಲ್‌ಗ‌ಳ ಬಳಿ ಸುಂಕರಹಿತ ಸೇವಾ ರಸ್ತೆ (ಸರ್ವೀಸ್‌ ರೋಡ್‌) ನಿರ್ಮಿಸಿರುತ್ತಾರೆ. ಆದರೆ, ನವಯುಗ ಟೋಲ್‌ ಸಂಸ್ಥೆ, ಸರ್ವೀಸ್‌ ರಸ್ತೆಗಳನ್ನು ನಿರ್ಮಿಸಿಲ್ಲ ಎಂದು ಪ್ರಯಾಣಿಕರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಆರೋಪಿಸಿದ್ದಾರೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿ ದಿನ ಈ ಮಾರ್ಗವಾಗಿ 9 ಸಾವಿರಕ್ಕೂ ಹೆಚ್ಚು ಟ್ಯಾಕ್ಸಿಗಳು ಸಂಚರಿಸುತ್ತಿವೆ. ಇದರೊಂದಿಗೆ ಇದು ಬೆಂಗಳೂರು-ಹೈದರಾಬಾದ್‌ ಹೆದ್ದಾರಿಯಾಗಿರುವ ಕಾರಣ ಪ್ರತಿ ದಿನ ಸಾವಿರಾರು ಕಾರು, ಬಸ್‌ ಹಾಗೂ ಭಾರೀ ವಾಹನಗಳು ಸಂಚರಿಸುತ್ತವೆ. ಈಗ ಏಕಾಏಕಿ ಟೋಲ್‌ ಶುಲ್ಕ ಹೆಚ್ಚಳದಿಂದ ವಾಹನ ಸವಾರರ ಜೇಬಿಗೆ ಹೆಚ್ಚುವರಿ ಹೊರೆ ಬಿದ್ದಂತಾಗಿದೆ.

ಪರಿಷ್ಕೃತ ಟೋಲ್‌ ಶುಲ್ಕ
-ವಾಹನ ಸಿಂಗಲ್‌ ಟ್ರಿಪ್‌ ರೌಂಡ್‌ ಟ್ರಿಪ್‌
-ಕಾರು/ಜೀಪು/ವ್ಯಾನ್‌ 90 135
-ಮಿನಿ ಬಸ್‌ 140 210
-ಬಸ್‌/ಲಾರಿ 280 420
-ಎಚ್‌.ಸಿ.ಎಂ/ ಎಂಎವಿ ¬425 635
-ಹೆಚ್ಚು ಗಾತ್ರದ ವಾಹನಗಳು 555 830
-ಸ್ಥಳೀಯ ಬಳಕೆದಾರರಿಗೆ ತಿಂಗಳಿಗೆ 265 ರೂ.

ಟೋಲ್‌ ಶುಲ್ಕ ಹೆಚ್ಚಳದಿಂದ ಈ ಭಾಗದ ರೈತರ ಮೇಲೆ ಹೆಚ್ಚುವರಿ ಹೊರೆ ಬಿದ್ದಂತಾಗಿದೆ. ಬೆಳೆದ 2, 3 ಮೂಟೆ ಧಾನ್ಯವನ್ನು ಬಸ್‌ಗಳಲ್ಲಿ ಕೊಂಡೊಯ್ಯಲು ಈಗ ಹೆಚ್ಚುವರಿ ದರ ತೆರಬೇಕು. ಬಂದ ಹಣವನ್ನೆಲ್ಲಾ ಟೋಲ್‌ ಕಟ್ಟಿದರೆ ಹೊಟ್ಟೆಗೇನು ಮಾಡಬೇಕು?
-ಚಿಕ್ಕನಹಳ್ಳಿ ವಿ. ಸುಬ್ಬಣ್ಣ, ಪ್ರಗತಿಪರ ರೈತ

ಟೋಲ್‌ ಶುಲ್ಕ ಹೆಚ್ಚಳದಿಂದ ಟ್ಯಾಕ್ಸಿ ಚಾಲಕರಿಗೆ ಮಾತ್ರವಲ್ಲದೆ ಸಾರ್ವಜನಿಕರ ಜೇಬಿಗೂ ಹೆಚ್ಚಿನ ಹೊರೆ ಬಿದ್ದಂತಾಗಿದೆ. ಈಗಾಗಲೇ ದುಡಿದ ಹಣದಲ್ಲಿ ಬಹು ಪಾಲು ಟೋಲ್‌ ರೂಪದಲ್ಲಿ ವೆಚ್ಚವಾಗುತ್ತಿದ್ದು, ಬೀದಿ ಪಾಲಾಗುವ ಸ್ಥಿತಿಯಿದೆ.
-ನಟರಾಜ್‌, ಟ್ಯಾಕ್ಸಿ ಚಾಲಕ

* ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next