Advertisement
ಸರ್ಕಾರಿ ಹಾಗೂ ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರೆಕಾಲಿಕ ಉಪನ್ಯಾಸಕರ ಮಾಸಿಕ ಗೌರವಧನವನ್ನು 10 ಸಾವಿರ ರೂ.ಗಳಿಂದ 15 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಎರಡು ವಿಭಾಗದ ಅರೆಕಾಲಿಕ ಉಪನ್ಯಾಸಕರಿಗೂ ತಲಾ 5 ಸಾವಿರ ರೂ. ಗೌರವಧನ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.
Related Articles
Advertisement
ನಿರ್ದೇಶಕರಿಂದ ಪತ್ರ: ಸರ್ಕಾರವು 2008ರ ಡಿ.1ರಿಂದ ಜಾರಿಗೆ ಬರುವಂತೆ ಅರೆಕಾಲಿಕ ಉಪನ್ಯಾಸಕರ ಮಾಸಿಕ ಗೌರವಧನವನ್ನು ಪಾಲಿಟೆಕ್ನಿಕ್ ವಿಭಾಗದ ಅರೆಕಾಲಿಕ ಉಪನ್ಯಾಸಕರಿಗೆ 7500 ಹಾಗೂ ಎಂಜಿನಿಯರಿಂಗ್ ವಿಭಾಗದ ಅರೆಕಾಲಿಕ ಉಪನ್ಯಾಸಕರಿಗೆ 10 ಸಾವಿರ ರೂ. ನಿಗದಿ ಮಾಡಿ ಆದೇಶ ಹೊರಡಿಸಿತ್ತು.
ಈ ಆದೇಶ ಹೊರಡಿಸಿ 10 ವರ್ಷ ಕಳೆದರೂ ಅರೆಕಾಲಿಕ ಉಪನ್ಯಾಸಕರ ವೇತನ ಹೆಚ್ಚಳ ಮಾಡಿರಲಿಲ್ಲ. ಇದರಿಂದ ಬಹುತೇಕ ಕಾಲೇಜುಗಳಲ್ಲಿ ಉಪನ್ಯಾಸಕರ ನಿರ್ವಹಣೆಯೇ ಇಲಾಖೆಗೆ ಕಗ್ಗಂಟಾಗಿತ್ತು. ಗೌರವ ಧನ ಹೆಚ್ಚಳ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ನಿರ್ದೇಶಕರ ಪತ್ರಕ್ಕೆ ಸ್ಪಂದಿಸಿರುವ ಸರ್ಕಾರ, ಈ ಸಂಬಂಧ ಆದೇಶ ಹೊರಡಿಸಿದೆ.
ಜೀವನ ನಡೆಸಲು ಸಾಧ್ಯವೇ?: ರಾಜ್ಯದಲ್ಲಿ ತಲಾ 11 ಸರ್ಕಾರಿ ಹಾಗೂ ಅನುದಾನಿತ ಎಂಜಿನಿಯರಿಂಗ್, 82 ಸರ್ಕಾರಿ ಪಾಲಿಟೆಕ್ನಿಕ್, 44 ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಿವೆ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಮಂಜೂರಾಗಿರುವ 646 ಬೋಧಕ ಹುದ್ದೆಗಳಲ್ಲಿ 348 ಭರ್ತಿಯಾಗಿದ್ದು, 298 ಬೋಧಕ ಹುದ್ದೆ ಖಾಲಿಯಿದೆ.
ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ 2812 ಬೋಧಕ ಹುದ್ದೆ ಮಂಜೂರಾಗಿದ್ದು, 2060 ಹುದ್ದೆ ಭರ್ತಿಯಾಗಿದ್ದು, 752 ಬೋಧಕ ಹುದ್ದೆ ಖಾಲಿಯಿದೆ. ಅನುದಾನಿತ ಎಂಜಿನಿಯರಿಂಗ್ ಕಾಲೇಜಿಗೆ 998 ಬೋಧಕ ಹುದ್ದೆ ಮಂಜೂರಾಗಿದ್ದು, ಅದರಲ್ಲಿ 307 ಹುದ್ದೆ ಖಾಲಿಯಿದೆ. ಅನುದಾನಿತ ಪಾಲಿಟೆಕ್ನಿಕ್‌ಗಳಿಗೆ ಮಂಜೂರಾದ 1314 ಹುದ್ದೆಯಲ್ಲಿ 418 ಹುದ್ದೆ ಖಾಲಿಯಿದೆ.
ಒಟ್ಟಾರೆಯಾಗಿ ಸರ್ಕಾರಿ, ಅನುದಾನಿತ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಸುಮಾರು 1500ಕ್ಕೂ ಅಧಿಕ ಅರೆಕಾಲಿಕ ಉಪನ್ಯಾಸಕರಿದ್ದರು, ಅವರಿಗೆ ಕನಿಷ್ಠ ವೇತನವನ್ನು ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ದಶಕದಿಂದ ಬೇಡಿಕೆ ಇಡುತ್ತಾ ಬಂದಿದ್ದರೂ, ಸೂಕ್ತ ಗೌರವಧನ ನೀಡುವಲ್ಲಿ ಸರ್ಕಾರ ಮುನ್ನಡೆ ಇಟ್ಟಿಲ್ಲ. ಪ್ರಸ್ತುತ ದಿನಗಳಲ್ಲಿ 10 ಸಾವಿರ, 15 ಸಾವಿರ ಮಾಸಿಕ ವೇತನದಲ್ಲಿ ಜೀವನ ನಡೆಸಲು ಸಾಧ್ಯವೇ ಎಂದು ಅರೆಕಾಲಿಕ ಉಪನ್ಯಾಸಕರೊಬ್ಬರು ಪ್ರಶ್ನಿಸುತ್ತಾರೆ.
ಯಾರಿಗೆ ಎಷ್ಟು?-ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರ ಮಾಸಿಕ ಗೌರವಧನ 7,500ರೂ.ಗಳಿಂದ 12,500 ರೂ.ಗಳಿಗೆ ಹೆಚ್ಚಳ -ಸರ್ಕಾರಿ ಹಾಗೂ ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರೆಕಾಲಿಕ ಉಪನ್ಯಾಸಕರ ಮಾಸಿಕ ಗೌರವಧನ 10 ಸಾವಿರ ರೂ.ಗಳಿಂದ 15 ಸಾವಿರ ರೂ.ಗಳಿಗೆ ಏರಿಕೆ * ರಾಜು ಖಾರ್ವಿ ಕೊಡೇರಿ