Advertisement

ವೈದ್ಯಕೀಯ ಸ್ನಾತಕೋತ್ತರ ಪದವಿ ಶುಲ್ಕ ಹೆಚ್ಚಿಸಿ

06:25 AM Jan 07, 2018 | |

ಬೆಂಗಳೂರು: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕ ಹೆಚ್ಚಳ ಮಾಡುವಂತೆ ಕಾಮೆಡ್‌- ಕೆ, ಅಲ್ಪಸಂಖ್ಯಾತ ಹಾಗೂ ಧಾರ್ಮಿಕ ಭಾಷಾ ಅಲ್ಪಸಂಖ್ಯಾತ ವೈದ್ಯಕೀಯ ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ಹೇರಿವೆ.

Advertisement

ವಿಧಾನಸೌಧದಲ್ಲಿ ಶನಿವಾರ ರಾಜ್ಯ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳು,  ರಾಜ್ಯ ಅಲ್ಪಸಂಖ್ಯಾತ ವೃತ್ತಿಪರ  ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಕಾಮೆಡ್‌-ಕೆ ಮುಖ್ಯಸ್ಥರೊಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್‌ಪ್ರಕಾಶ ಪಾಟೀಲ್‌ ಸಭೆ ನಡೆಸಿದ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಶುಲ್ಕ ಹೆಚ್ಚಿಸುವಂತೆ ಆಗ್ರಹಿಸಿವೆ.

ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಡಾ.ಶರಣ್‌ಪ್ರಕಾಶ ಪಾಟೀಲ್‌, ಶುಲ್ಕ ಹೆಚ್ಚಳ ಮನವಿ ಬಂದಿರುವುದು ಹೌದು. ಆದರೆ, ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಳೆದ 10 ವರ್ಷಗಳಿಂದ ನಡೆದು ಬಂದಂತಹ ಸಹಮತದ ಒಪ್ಪಂದ ಈ ವರ್ಷವೂ ಮುಂದುವರಿಯಲಿದೆ. ಶಿಷ್ಯ ವೇತನ ಹೆಚ್ಚಳದ ಜತೆಗೆ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಶುಲ್ಕ ದುಬಾರಿ ಇದೆ ಎಂದು ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ತಿಳಿಸಿವೆ. ಜತೆಗೆ ಇಡೀ ದೇಶದಲ್ಲೇ ಕರ್ನಾಟಕದಲ್ಲಿ ವೈದ್ಯ ಕೋರ್ಸ್‌ ಶುಲ್ಕ ಕಡಿಮೆಯಿದ್ದು, ಹೆಚ್ಚಳ ಮಾಡುವಂತೆ ಮನವಿ ಮಾಡಿವೆ. ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಶುಲ್ಕ ಹೆಚ್ಚಳಕ್ಕೆ ಕೋರಿದ್ದು, ವಿದ್ಯಾರ್ಥಿಗಳ ಹಿತ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಭಾನುವಾರ ಅಖೀಲ ಭಾರತ ಮಟ್ಟದಲ್ಲಿ ಪಿಜಿ ನೀಟ್‌ ನಡೆಯಲಿದ್ದು, ಮಾಸಾಂತ್ಯಕ್ಕೆ ಫ‌ಲಿತಾಂಶ ಪ್ರಕಟವಾಗಲಿದೆ. ಮಾರ್ಚ್‌ನಲ್ಲಿ ಪ್ರವೇಶ ಪ್ರಕ್ರಿಯೆ ಶುರುವಾಗಲಿದೆ. ಮೇ ಅಂತ್ಯದ ವೇಳೆಗೆ ವಿದ್ಯಾರ್ಥಿಗಳ ದಾಖಲಾತಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದ್ದು, ಆ ಹಿನ್ನೆಲೆಯಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ತಿಳಿಸಿದರು.

Advertisement

ರಾಜ್ಯ ಸರ್ಕಾರದಿಂದ ಪತ್ರ
ಉದ್ದೇಶಿತ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ ಕುರಿತಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಕೇಳಿಲ್ಲ. ಆದರೆ ರಾಜ್ಯ ಸರ್ಕಾರದ ವತಿಯಿಂದ ಒಂದಿಷ್ಟು ಅಂಶಗಳ ಕುರಿತು ಅಭಿಪ್ರಾಯ ಕ್ರೋಡೀಕರಿಸಿ ಪತ್ರ ಬರೆಯಲು ನಿರ್ಧರಿಸಲಾಗಿದೆ. ಅನ್ಯ ವೈದ್ಯ ಪದ್ಧತಿಯಲ್ಲಿ ಅಧ್ಯಯನ ನಡೆಸಿ ಅಲೋಪಥಿ ಚಿಕಿತ್ಸೆ ಕೊಡಲು ಅವಕಾಶ ಕಲ್ಪಿಸುವ ಬಗ್ಗೆ ವಿಧೇಯಕದಲ್ಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಒಂದೊಮ್ಮೆ ಆ ಅಂಶವಿದ್ದರೆ ಅದು ಸೂಕ್ತ  ಎನಿಸದು ಎಂದು ಹೇಳಿದರು.

ಐದೂವರೆ ವರ್ಷ ವೈದ್ಯ ಪದವಿ ಪಡೆದವರಿಗೂ ಬ್ರಿಡ್ಜ್ ಕೋರ್ಸ್‌ ಮೂಲಕ ಅಲೋಪಥಿ ಚಿಕಿತ್ಸೆ ನೀಡುವುದು ಏಕಪ್ರಕಾರವಾಗಿರುತ್ತದೆ ಎನ್ನಲು ಸಾಧ್ಯವೇ. ಹಾಗೆಯೇ ವೈದ್ಯ ಪದವಿ ಪೂರ್ಣಗೊಳಿಸಿದವರು ನಂತರ ಎಕ್ಸಿಟ್‌ ಪರೀಕ್ಷೆ ಉತ್ತೀರ್ಣರಾಗಬೇಕು ಎಂಬ ನಿಯಮದ ಬಗ್ಗೆ ವಿಧೇಯಕದಲ್ಲಿ ಪ್ರಸ್ತಾಪವಿದ್ದು, ಒಂದೊಮ್ಮೆ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ ಒಂದು ವರ್ಷ ನಿರೀಕ್ಷಿಸಿ ಮತ್ತೂಮ್ಮೆ ಪರೀಕ್ಷೆ ಬರೆಯಬೇಕೆ, ಪರೀಕ್ಷಾ ಪ್ರಯತ್ನಗಳ ಸಂಖ್ಯೆ ಇತರೆ ಅಂಶಗಳ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹೇಳಿದರು.

ಸದ್ಯ ಶೇ.80ರಷ್ಟು ವೈದ್ಯಕೀಯ ಸೀಟುಗಳ ಶುಲ್ಕವನ್ನು ಸರ್ಕಾರಗಳೇ ನಿಗದಿಪಡಿಸುತ್ತವೆ. ಆದರೆ ಉದ್ದೇಶಿತ ವಿಧೇಯಕದಲ್ಲಿ ಶೇ.40ರಷ್ಟು ಸೀಟುಗಳಿಗಷ್ಟೇ ಸರ್ಕಾರಗಳು ಶುಲ್ಕ ನಿಗದಿಪಡಿಸುವ ಪ್ರಸ್ತಾವವಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. ವೈದ್ಯಕೀಯ ಶಿಕ್ಷಣದಲ್ಲಿ ಗಂಭೀರ ಬದಲಾವಣೆ ತರುವ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆದಿದ್ದರೆ ಸೂಕ್ತವೆನಿಸುತ್ತಿತ್ತು. ಹಾಗಾಗಿ ಕೇಂದ್ರ ಆರೋಗ್ಯ ಸಚಿವರು, ವಿಧೇಯಕವನ್ನು ಒಪ್ಪಿಸಿರುವ ಸ್ಥಾಯಿ ಸಮಿತಿಗೆ ಪ್ರತಿಕ್ರಿಯೆ ನೀಡಲಾಗುವುದು ಎಂದು ತಿಳಿಸಿದರು.

ಹೊಸ ಕಾಲೇಜು ಆರಂಭ: ಚರ್ಚಿಸಿ ನಿರ್ಧಾರ
ಮುಖ್ಯಮಂತ್ರಿಗಳು ಸಾಧನಾ ಸಮಾವೇಶ ನಡೆಯುತ್ತಿರುವ ಪ್ರದೇಶಗಳಲ್ಲಿ ಸದ್ಯದಲ್ಲೇ ವೈದ್ಯಕೀಯ ಕಾಲೇಜು ಆರಂಭಿಸುವುದಾಗಿ ಘೋಷಿಸುತ್ತಿದ್ದಾರೆ. ಒಂದು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆರಂಭಿಕ ಕನಿಷ್ಠ 200 ಕೋಟಿ ರೂ. ಅನುದಾನ ಅಗತ್ಯವಿದೆ. ಸದ್ಯದಲ್ಲೇ ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next