ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಹೆಚ್ಚಳ ಸಂಬಂಧ ಹಿಂದಿನಿಂದಲೂ ಹೋರಾಟಗಳು ನಡೆಯುತ್ತಾ ಬಂದಿದ್ದು, ಸದ್ಯ ಒಂದು ತಾರ್ಕಿಕ ಅಂತ್ಯಕ್ಕೆ ತಲುಪಿದೆ. ಇತ್ತೀಚೆಗಷ್ಟೇ ರಾಜ್ಯ ಸರಕಾರ ಎಸ್‌ಸಿಯವರ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ ಶೇ.17ಕ್ಕೆ ಮತ್ತು ಎಸ್‌ಟಿಯವರ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಏರಿಕೆ ಮಾಡಲು ನಿರ್ಧರಿಸಿದೆ. ಇದಕ್ಕೂ ಮುನ್ನ ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಕೈಗೊಂಡು ಸಮ್ಮತ ನಿರ್ಧಾರ ತೆಗೆದುಕೊಂಡಿರುವುದು ಉತ್ತಮವಾದ ಬೆಳವಣಿಗೆಯಾಗಿದೆ.
ಇದಾದ ಮೇಲೆ, ಮೀಸಲಾತಿ ಬದಲಾವಣೆಗಾಗಿ ಮತ್ತು ತಮ್ಮ ಪಾಲಿನ ಮೀಸಲಾತಿ ಹೆಚ್ಚಳಕ್ಕೆ ಬೇರೆ ಬೇರೆ ಸಮುದಾಯಗಳು ಸರಕಾರಕ್ಕೆ ಒತ್ತಡ ಹೇರುತ್ತಿವೆ. ಬಹು ಹಿಂದಿನಿಂದಲೂ ಪಂಚಮಸಾಲಿ ಸಮುದಾಯವು 2ಎ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಸದ್ಯ ಈ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ. ಹಾಗೆಯೇ, ಕುರುಬ ಸಮುದಾಯವೂ ಎಸ್‌ಟಿ ಸಮುದಾಯಕ್ಕೆ ಸೇರಿಸುವಂತೆ ಪಟ್ಟು ಹಿಡಿದಿದೆ.
ರಾಜಕೀಯ ವಿಶ್ಲೇಷಕರು ಹೇಳುವ ಪ್ರಕಾರ ರಾಜ್ಯ ಸರಕಾರ ಮೀಸಲಾತಿ ಎಂಬ ಜೇನುಗೂಡಿಗೆ ಕೈಹಾಕಿದೆ. ಇಲ್ಲಿ ಯಾರಿಗೆ ಕೊಟ್ಟರೂ ಕಷ್ಟ, ಯಾರನ್ನು ಬಿಟ್ಟರೂ ನಷ್ಟವೇ. ತುಂಬಾ ಸೂಕ್ಷ್ಮವಾಗಿ ಹೇಳುವುದಾದರೆ ಮೀಸಲಾತಿ ವಿಚಾರದಲ್ಲಿ ಸರಕಾರ ತೀರಾ ಎಚ್ಚರಿಕೆಯ ನಡೆ ಇಡಬೇಕು.
ಮತ್ತೆ ಎಸ್‌ಸಿ ಹಾಗೂ ಎಸ್‌ಟಿ ಮೀಸಲಾತಿ ವಿಚಾರಕ್ಕೆ ಬಂದರೆ ರಾಜ್ಯ ಸರಕಾರದ ಮೇಲೆ ಬಹುದೊಡ್ಡ ಜವಾಬ್ದಾರಿಯೇ ಇದೆ. ಏಕೆಂದರೆ ಇಲ್ಲಿನ ಸರಕಾರ ಒಪ್ಪಿಕೊಂಡ ಮಾತ್ರಕ್ಕೆ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಏರಿಕೆಯಾಗುವುದಿಲ್ಲ. ಏಕೆಂದರೆ ಇದಕ್ಕೆ ಕೇಂದ್ರ ಸರಕಾರ ಸಂಸತ್‌ನಲ್ಲಿ ಒಪ್ಪಿಗೆ ನೀಡಬೇಕು. ಅಲ್ಲದೆ ಈಗಿನ ಲೆಕ್ಕಾಚಾರದಂತೆ ರಾಜ್ಯದ ಒಟ್ಟಾರೆ ಮೀಸಲಾತಿ ಪ್ರಮಾಣ ಶೇ.56ಕ್ಕೆ ತಲುಪುತ್ತದೆ. ಸದ್ಯ ಇದು ಶೇ.50ರಷ್ಟಿದೆ.
ಸುಪ್ರೀಂಕೋರ್ಟ್ ಇಂದಿರಾ ಸಹಾನಿ ಪ್ರಕರಣದಲ್ಲಿ ತೀರ್ಪು ನೀಡಿರುವಂತೆ ಮೀಸಲಾತಿ ಶೇ.50 ಅನ್ನು ದಾಟುವಂತೆ ಇಲ್ಲ. ಆದರೆ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಮೀಸಲಾತಿ ಮಿತಿ ದಾಟಬಹುದು ಎಂದಿದೆ. ಈ ವಿಶೇಷ ಪ್ರಕರಣದಲ್ಲಿ ದಾಟಬೇಕು ಎಂದಾದರೆ ಶೆಡ್ನೂಲ್ 9ಕ್ಕೆ ತಿದ್ದುಪಡಿ ತರಬೇಕು. ಇದು ಕೂಡ ಕೇಂದ್ರ ಸರಕಾರದ ಕೈನಲ್ಲೇ ಇದೆ.
ಈಗ ರಾಜ್ಯದಲ್ಲಿ ವಿಪಕ್ಷ ನಾಯಕರು ಹೇಳುತ್ತಿರುವುದು ಇದೇ ವಿಚಾರ. ಏಕೆಂದರೆ ಈಗಾಗಲೇ ರಾಜ್ಯ ಬಿಜೆಪಿ ನಾಯಕರು ಮೀಸಲಾತಿ ವಿಚಾರದಲ್ಲಿ ಗೆದ್ದಂತೆ ವರ್ತಿಸುತ್ತಿದ್ದಾರೆ ಎಂಬುದು ಅವರ ಆರೋಪ. ಇದಕ್ಕಿಂತ ಮೊದಲು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಶೆಡ್ನೂಲ್ 9ರಲ್ಲಿ ತಿದ್ದುಪಡಿ ಮಾಡಿಸಿ.ಅನಂತರವಷ್ಟೇ ಎಸ್‌ಸಿ ಮತ್ತು ಎಸ್‌ಟಿಯವರಿಗೆ ನೀಡಿರುವ ಮೀಸಲಾತಿ ಏರಿಕೆ ಸೌಭಾಗ್ಯ ಜಾರಿಗೆ ಬರುತ್ತದೆ. ಒಂದು ವೇಳೆ ಶೆಡ್ನೂಲ್ 9ಕ್ಕೆ ತಿದ್ದುಪಡಿ ತರದೇ ಹೋದರೆ ಯಾರು ಬೇಕಾದರೂ ಸುಪ್ರೀಂಕೋರ್ಟ್‌ಗೆ ಹೋಗಿ ಈಗಿನ ನಿರ್ಧಾರವನ್ನು ರದ್ದು ಮಾಡಿಸುವ ಸಾಧ್ಯತೆ ಇದೆ. ಇದರತ್ತ ಮೊದಲು ಗಮನ ಕೊಡಿ ಎಂದು ಹೇಳುತ್ತಿದ್ದಾರೆ.
ಹೀಗಾಗಿ ಮೀಸಲಾತಿ ವಿಚಾರದಲ್ಲಿ ರಾಜಕಾರಣವನ್ನು ಬದಿಗೊತ್ತಿ, ತೆಗೆದುಕೊಂಡಿರುವ ನಿರ್ಧಾರವನ್ನು ಜಾರಿಗೆ ತರಲು ರಾಜ್ಯ ಸರಕಾರ ಪ್ರಯತ್ನಿಸಬೇಕು. ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸವನ್ನು ಮಾಡಬೇಕಾಗಿದೆ.