Advertisement

ಬಸ್‌ಗಳ ಸಂಖ್ಯೆ ಹೆಚ್ಚಳ: ಪ್ರಯಾಣಿಕರು ವಿರಳ

12:41 PM Jul 24, 2020 | mahesh |

ಉಡುಪಿ/ಕಾರ್ಕಳ: ಉಡುಪಿ ಜಿಲ್ಲೆಯಾದ್ಯಂತ ಲಾಕ್‌ಡೌನ್‌ ಮುಕ್ತಾಯಗೊಳ್ಳುತ್ತಿದ್ದಂತೆಯೇ ಸಾರಿಗೆ ಸಂಚಾರ ಆರಂಭವಾಗಿದ್ದು ಎರಡನೇ ದಿನ ಕೆಎಸ್ಸಾರ್ಟಿಸಿ, ಸಿಟಿ, ಸರ್ವಿಸ್‌, ಎಕ್ಸ್‌ಪ್ರೆಸ್‌ ಬಸ್‌ಗಳು ವಿವಿಧ ರೂಟ್‌ಗಳಲ್ಲಿ ಸಂಚಾರ ನಡೆಸಿವೆ. ಉಡುಪಿಯಿಂದ ಮಂಗಳೂರಿಗೆ 20, ಕುಂದಾಪುರಕ್ಕೆ 22, ಶಿವಮೊಗ್ಗ 4, ಹೆಬ್ರಿ 6, ಕಾರ್ಕಳಕ್ಕೆ 7 ಬಸ್‌ಗಳು ಓಡಾಟ ನಡೆಸುತ್ತಿವೆ. 20 ಸಿಟಿ ಬಸ್‌ಗಳು ಓಡಾಟ ನಡೆಸುತ್ತಿದ್ದು, ಶುಕ್ರವಾರ ಮತ್ತೆ 10 ಬಸ್‌ಗಳು ಸಂಚಾರ ಆರಂಭಿಸಲಿವೆ. ಕಾರ್ಕಳ – ಪಡುಬಿದ್ರಿ-ಮಂಗಳೂರು, ಕಾರ್ಕಳ ಮೂಡಬಿದಿರೆ- ಮಂಗಳೂರು ಮಾರ್ಗಗಳಲ್ಲಿ ಎರಡು ಖಾಸಗಿ ಬಸ್‌ಗಳು, ಕಾರ್ಕಳದಿಂದ ಬೆಳ್ತಂಗಡಿಗೆ 4 ಬಸ್‌ಗಳು ಸಂಚರಿಸಿವೆ. ಹೆಬ್ರಿಗೂ ಬಸ್‌ ಓಡಾಟವಿತ್ತು.

Advertisement

ಕೆಎಸ್ಸಾರ್ಟಿಸಿ ಬಸ್‌ಗಳು ಆರಂಭ
ಕೆಎಸ್ಸಾರ್ಟಿಸಿ ಉಡುಪಿ ಡಿಪೋ ದಿಂದ ಕಾರ್ಕಳ, ಕುಂದಾಪುರ, ಹೆಬ್ರಿ, ಶಿವಮೊಗ್ಗ, ಹುಬ್ಬಳ್ಳಿ, ಮಂಗಳೂರು, ಬೆಂಗಳೂರು ಭಾಗಗಳಿಗೆ ಬಸ್‌ಗಳು ತೆರಳಿವೆ. ಒಟ್ಟು 21 ಬಸ್‌ಗಳು ಸದ್ಯಕ್ಕೆ ಓಡಾಟ ನಡೆಸುತ್ತಿವೆ. ನಾಳೆಯಿಂದ ಮತ್ತೆ 10-12 ಬಸ್‌ಗ‌ಳು ಆರಂಭ ವಾಗಲಿವೆ. ಉಡುಪಿ ನಗರ ವ್ಯಾಪ್ತಿಯಲ್ಲಿ ನರ್ಮ್ ಬಸ್‌ಗಳ ಬದಲು ಕೆಎಸ್‌ಆರ್‌ಟಿಸಿಯ 7 ಬಸ್‌ಗಳನ್ನು ಸೇವೆಗೆ ಇಳಿಸಲಾಗಿದೆ.

ಪೇಟೆಯಲ್ಲಿ ಜನರಿಲ್ಲ
ಕೊರೊನಾ ಸೋಂಕು ಕುರಿತು ಜನ ಜಾಗೃತರಾಗಿದ್ದಾರೆ. ಜನರಲ್ಲಿ ಆವರಿಸಿರುವ ಸೋಂಕು ಭೀತಿ ಇನ್ನೂ ದೂರವಾಗಿಲ್ಲ. ಹೀಗಾಗಿ ಅಗತ್ಯ ಸೇವೆಗಳಿಗೆ ಮಾತ್ರ ಜನರು ಪೇಟೆಗೆ ಬರುತ್ತಿದ್ದಾರೆ. ಬಹುತೇಕರು ಸ್ವಂತ ದ್ವಿಚಕ್ರ, ಕಾರುಗಳಲ್ಲಿ ಪೇಟೆಗೆ ಬಂದು ಹೆಚ್ಚು ಹೊತ್ತು ನಿಲ್ಲದೆ ಹೋಗುವುದರಿಂದ ಪೇಟೆಯಲ್ಲಿ ಜನರಿಲ್ಲದೆ ವ್ಯಾಪಾರ ಕೂಡ ಇಲ್ಲ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.

ಬಸ್‌ ಇದ್ದರೂ ಪ್ರಯಾಣಿಕರಿಲ್ಲ!
ಸರಕಾರಿ ಹಾಗೂ ಖಾಸಗಿ ಬಸ್‌ಗಳ ಓಡಾಟ ಜು. 22ರಿಂದ ಆರಂಭವಾಗಿದ್ದು, ಎರಡನೇ ದಿನವೂ ಬಸ್‌ಗಳಲ್ಲಿ ಪ್ರಯಾಣಿಕರ ಕೊರತೆ ಇತ್ತು. ಸಾರಿಗೆ ಮತ್ತು
ಖಾಸಗಿ ಬಸ್‌ಗಳು ಸಂಚಾರ ಆರಂಭಿಸಿದ್ದರೂ ಜನಜೀವನ ಸಹಜ ಸ್ಥಿತಿಗೆ ಬಾರದೇ ಇರುವುದರಿಂದ ಕೆಲವೊಂದು ಮಾರ್ಗಗಳ ಬಸ್‌ಗಳಲ್ಲಿ 10 ಮಂದಿ ಪ್ರಯಾಣಿಕರು ಕೂಡ ಇರಲಿಲ್ಲ.

ಕುಂದಾಪುರ : ಗ್ರಾಮೀಣ ಭಾಗಕ್ಕೆ ಸಂಚರಿಸದ ಬಸ್‌
ಕುಂದಾಪುರ: ಗ್ರಾಮೀಣ ಭಾಗಕ್ಕೆ ಯಾವುದೇ ಬಸ್‌ಗಳು ಸಂಚರಿಸುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದಿಂದ ತಾಲೂಕು ಕೇಂದ್ರಕ್ಕೆ ಬರುವವರು ಪರದಾಡುವಂತಾಗಿದೆ.
ಕುಂದಾಪುರದಿಂದ ಬೈಂದೂರು, ಗಂಗೊಳ್ಳಿ, ಭಟ್ಕಳ, ಮಣಿಪಾಲ, ಉಡುಪಿ, ಸಿದ್ದಾಪುರ, ಶಿವಮೊಗ್ಗ, ಬೆಂಗಳೂರಿಗೆ ಸೇರಿ ಒಟ್ಟು 16 ಕೆಎಸ್‌ಆರ್‌ಟಿಸಿ ಬಸ್‌ಗಳು ಗುರುವಾರ ಸಂಚರಿಸಿವೆ. ಕುಂದಾಪುರ- ಉಡುಪಿ ಹಾಗೂ ಕುಂದಾಪುರ – ಬೈಂದೂರು ಮಾರ್ಗದಲ್ಲಿ ಮಾತ್ರ 3-4 ಖಾಸಗಿ ಬಸ್‌ಗಳು ಸಂಚರಿಸುತ್ತಿವೆ.

Advertisement

ಬಸ್‌ ಇಲ್ಲದೆ ತೊಂದರೆ
ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಸೀಮಿತ ಸಂಖ್ಯೆಯ ಬಸ್‌ಗಳ ಸಂಚಾರ ಆರಂಭವಾ ದರೂ ಕುಂದಾಪುರ, ಬೈಂದೂರು ತಾಲೂಕು ಕೇಂದ್ರಕ್ಕೆ ತೆರಳುವವರಿಗೆ ಸಮಸ್ಯೆಯಾಗಿದೆ. ಕುಂದಾಪುರದಿಂದ ಕೊಲ್ಲೂರು, ವಂಡ್ಸೆ, ಅಮಾಸೆಬೈಲು, ಹಾಲಾಡಿ, ಗೋಳಿಯಂಗಡಿ, ಆಜ್ರಿ, ನೇರಳಕಟ್ಟೆ ಶಂಕರನಾರಾಯಣ, ಮತ್ತಿತರ ಕಡೆಗಳಿಗೆ ಬಸ್‌ ಸಂಚಾರ ಇಲ್ಲದಿರು ವುದರಿಂದ ಗ್ರಾಮೀಣ ಪ್ರದೇಶದವರಿಗೆ ಅನನುಕೂಲವಾಗಿದೆ.

ಮುಂದಿನ ದಿನಗಳಲ್ಲಿ ಬಸ್‌ಗಳ ಸಂಖ್ಯೆ ಹೆಚ್ಚಳ
ಎಲ್ಲ ರೂಟ್‌ಗಳಲ್ಲಿಯೂ ಕೆಎಸ್ಸಾರ್ಟಿಸಿ ಬಸ್‌ಗಳನ್ನು ಸೀಮಿತ ಸಂಖ್ಯೆಯಲ್ಲಿ ಹಾಕಲಾಗಿದೆ. ಪ್ರಯಾಣಿಕರ ಸಂಖ್ಯೆಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು.
-ಉದಯ ಕುಮಾರ್‌ ಶೆಟ್ಟಿ, ಡಿಪೋ ಮ್ಯಾನೇಜರ್‌,  ಕೆಎಸ್ಸಾರ್ಟಿಸಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next