Advertisement

ಆಹಾರ ಪಾರ್ಸೆಲ್‌ ಹೆಚ್ಚಿದರೆ ಅನುಕೂಲ

05:17 PM Apr 22, 2020 | mahesh |

ಬೆಂಗಳೂರು: ಲಾಕ್‌ಡೌನ್‌ ಅವಧಿ ಹೆಚ್ಚು-ಕಡಿಮೆ ದುಪ್ಪಟ್ಟಾದ ಬೆನ್ನಲ್ಲೇ ನಗರದಲ್ಲಿ ಸ್ವಯಂಪ್ರೇರಿತ ಆಹಾರ ವಿತರಣೆ ಮಾಡುವ ದಾನಿಗಳ ಪ್ರಮಾಣ ಕೊಂಚ ಕಡಿಮೆಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ನಿರಾಶ್ರಿತರು ಮತ್ತು ನಿರ್ಗತಿಕರಿಗೆ ಆಹಾರ ಸಮಸ್ಯೆ ಬಿಸಿ ಜೋರಾಗಿ ತಟ್ಟುವ ಸಾಧ್ಯತೆ ಇದೆ.

Advertisement

ಈ ಹಿಂದೆ ಲಾಕ್‌ಡೌನ್‌ ಅವಧಿ 21 ದಿನಗಳು ಇತ್ತು. ಅದಕ್ಕೂ ಮುನ್ನ ಅಂದರೆ ಮಾ. 14ರಿಂದಲೇ ನಗರದಲ್ಲಿ ಲಾಕ್‌ಡೌನ್‌ ಜಾರಿಯಾಗಿತ್ತು. ಈಚೆಗೆ ಮತ್ತೆ 19 ದಿನಗಳು ಮುಂದುವರಿಸಲಾಗಿದೆ. ಕೆಲ ಸಂಘ-ಸಂಸ್ಥೆಗಳು, ವ್ಯಕ್ತಿಗಳು ನಿರಂತರ ಮೂರು ವಾರಗಳು ಯಾವುದೇ ಸಮಸ್ಯೆ ಇಲ್ಲದೆ ನಿರಾಶ್ರಿತರಿಗೆ ಆಹಾರ ಪೂರೈಕೆ ಮಾಡಿದರು. ಆದರೆ, ಮತ್ತೆ ಮೂರು ವಾರ ವಿಸ್ತರಣೆಯಿಂದ ಕೆಲವು ಸಂಘಗಳು ಸಹಜವಾಗಿ ಆರ್ಥಿಕ ಸಮಸ್ಯೆ ಎದುರಿಸುತ್ತಿವೆ. ಹಾಗಾಗಿ, ಆಹಾರ ವಿತರಣೆ ಪ್ರಮಾಣ ಕಡಿಮೆಯಾಗಿದೆ. ಪರಿಣಾಮ ಅಲ್ಲಲ್ಲಿ ನಿರಾಶ್ರಿತರು ಆಹಾರದ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ, ಸ್ಥಳೀಯ ಸಂಸ್ಥೆಗಳು ಅದಮ್ಯ ಚೇತನ, ಅಕ್ಷಯಪಾತ್ರೆ ಪ್ರತಿಷ್ಠಾನ ಮೊದಲಾದ ಸಂಘಟನೆಗಳ ಸಹಯೋಗದಲ್ಲಿ ಆಹಾರ ವಿತರಣೆಗೆ ವ್ಯವಸ್ಥೆ ಮಾಡಿವೆ.  ಆದಾಗ್ಯೂ ಇದು ಸಾಲದು; ನಗರದ “ರೆಡ್‌ ಝೋನ್‌’ ಹೊರತುಪಡಿಸಿ ಉಳಿದೆಡೆ ಆಯ್ದ ಭಾಗಗಳಲ್ಲಿ ಹೋಟೆಲ್‌ಗ‌ಳ ಪಾರ್ಸೆಲ್‌ ಸೇವೆ ಹೆಚ್ಚಿಸುವ ಅವಶ್ಯಕತೆ ಇದೆ ಎಂಬ ಒತ್ತಾಯ ಕೇಳಿಬಂದಿದೆ. ಹೀಗೆ ಹೋಟೆಲ್‌ ತೆರೆಯುವುದರಿಂದ ಕಾರ್ಮಿಕರಿಗೆ, ನಿರಾಶ್ರಿತರು ಮತ್ತು ನಿರ್ಗತಿಕರಿಗೆ ಆಹಾರ ಪೂರೈಕೆ ಜತೆಗೆ ತರಕಾರಿ ಪೂರೈಕೆ ಆಗುವುದರಿಂದ ರೈತರಿಗೂ ಅನುಕೂಲ ಆಗಲಿದೆ. ಹೋಟೆಲ್‌ ಉದ್ಯಮಕ್ಕೂ ನೆರವಾಗಲಿದೆ. ಸಾಮಾಜಿಕ ಅಂತರ ವ್ಯವಸ್ಥೆಗೆ ಮಾತ್ರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಿರಾಶ್ರಿತರು ಒತ್ತಾಯಿಸುತ್ತಾರೆ. ಸದ್ಯ ನಗರದ ಕೆಲವೇ ಕೆಲವು ದೊಡ್ಡ ಪ್ರಮಾಣದ ಹೋಟೆಲ್‌ಗ‌ಳಲ್ಲಿ ಮಾತ್ರ ಪಾರ್ಸೆಲ್‌ ವ್ಯವಸ್ಥೆ ಇದೆ. ಆದರೆ, ಮಧ್ಯಮ ಗಾತ್ರದ ಮತ್ತು ಉಪಹಾರ ದರ್ಶಿನಿಗಳಲ್ಲಿ ಪಾರ್ಸೆಲ್‌ ವ್ಯವಸ್ಥೆ ಇಲ್ಲ.

ಸಿಬ್ಬಂದಿ ಕೊರತೆ: ಹೋಟೆಲ್‌ಗ‌ಳಲ್ಲಿ ಪಾರ್ಸೆಲ್‌
ನೀಡಲು ಅವಕಾಶ ಇದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಹೋಟೆಲ್‌ ಗಳಲ್ಲಿ ಸೇವೆ ಸಲ್ಲಿಸುತ್ತಿದ್ದವರು ಈಗ ಊರು ಸೇರಿದ್ದಾರೆ. ಅವರಿಗ ಊರಿಂದ ಬರಲು ಸಾಗುತ್ತಿಲ್ಲ. ಲಾಕ್‌ಡೌನ್‌ ಮುಗಿದ ನಂತರವೇ ಹೋಟೆಲ್‌ ತೆರೆಯಬೇಕಾಗುತ್ತದೆ. ಜನರೇ ಬರದಿದ್ದರೆ ಹೋಟೆಲ್‌ ತೆರೆಯುವುದು ಕಷ್ಟವಾಗುತ್ತಿದೆ ಎಂದು ಬೃಹತ್‌ ಬೆಂಗಳೂರು ಹೋಟೆಲ್‌ ಮಾಲಿಕರ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಹೊಳ್ಳ ತಿಳಿಸುತ್ತಾರೆ.

“ನಂದನ ಗ್ರೂಪ್‌ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅಡಿ ನಿತ್ಯ ಹತ್ತು ಸಾವಿರ ಊಟದ ಪ್ಯಾಕೆಟ್‌ ಸಿದ್ಧಪಡಿಸಿ ಏಟ್ರಿಯಾ ಟ್ರಸ್ಟ್ ಗೆ ನೀಡಲಾಗುತ್ತಿದೆ. ಇವರು ಬಡವರು, ನಿರ್ಗತಿಕರಿಗೆ ಈ ಪ್ಯಾಕೆಟ್‌ಗಳನ್ನು ವಿತರಿಸುತ್ತಿದ್ದಾರೆ. ಇಲ್ಲಿ ಪೌಷ್ಟಿಕಾಂಶಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಂದನಾ ಗ್ರೂಪ್‌ನಲ್ಲಿ 1300 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರಿಗೂ ನಮ್ಮ ಸಂಸ್ಥೆಯ ವತಿಯಿಂದ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿದ್ದೇವೆ. ಊಟದ ಪಾರ್ಸೆಲ್‌ ಜತೆಗೆ ಆಯುಷ್‌ ಇಲಾಖೆಯ ಮಾರ್ಗದರ್ಶನದಂತೆ ಜೀರಿಗೆ, ಮೆಣಸು, ಶುಂಠಿ, ಅಶ್ವಗಂಧದಿಂದ ತಯಾರಿಸಿದ ಕಷಾಯವನ್ನು ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದ್ದೇವೆ’ ಎಂದು ನಂದನ ಪ್ಯಾಲೇಸ್‌ ಹೋಟೆಲ್‌ ಮಾಲಿಕ ಡಾ. ರವಿಚಂದ್ರನ್‌ ಮಾಹಿತಿ ನೀಡಿದರು.

ಕೊರತೆ ಇಲ್ಲ: ಸೇವಾಕಾರ್ಯ ವ್ಯಾಪಕವಾಗಿ ನಡೆಯುತ್ತಿದೆ. ಆರೆಸ್ಸೆಸ್‌ ವತಿಯಿಂದ ನಿರ್ಗತಿಕರಿಗೆ, ಬಡವರಿಗೆ, ಕೊಳೆಗೇರಿಗಳಲ್ಲಿರುವ ಅಗತ್ಯ ಆಹಾರ ಸಾಮಗ್ರಿ ಪೂರೈಕೆ ಮಾಡುತ್ತಿದೆ. ಸೇವಾ ಕಾರ್ಯಕ್ಕೆ ಯಾವುದೇ ಕೊರತೆ ಇಲ್ಲ. ಅಗತ್ಯವಿರುವರಿಗೆ ಊಟಕ್ಕೆ ಬೇಕಾದ ವಸ್ತುಗಳನ್ನು ನೀಡಲಾಗುತ್ತಿದೆ ಎಂದು ಆರೆಸ್ಸೆಸ್‌ ಮೂಲಗಳು ತಿಳಿಸಿವೆ.

Advertisement

ಹೋಟೆಲ್‌ ಕಾರ್ಯಾರಂಭ ವಿಳಂಬ
ಲಾಕ್‌ಡೌನ್‌ ಅವಧಿ ಮುಗಿದ ನಂತರವೂ ನಗರದ ಹೋಟೆಲ್‌ಗ‌ಳ ಕಾರ್ಯಾರಂಭ ವಿಳಂಬವಾಗುವ ಸಾಧ್ಯತೆ ಇದೆ. ನಗರದ ಸಾವಿರಾರು ಸಣ್ಣ ಮತ್ತು ಮಧ್ಯಮ ಗಾತ್ರದ ಹೋಟೆಲ್‌ಗ‌ಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಲಾಕ್‌ಡೌನ್‌ಗೂ ಮೊದಲೇ ತಮ್ಮ ಊರುಗಳಿಗೆ ತೆರಳಿದ್ದಾರೆ. ಲಾಕ್‌ಡೌನ್‌ ತೆರವಾದರೂ ಕೆಲವೊಂದು ಜಿಲ್ಲೆಗಳ ಸಂಚಾರ ಮುಕ್ತವಾಗುವ ಸಾಧ್ಯತೆ ಕಡಿಮೆ. ಹೀಗಾಗಿ ಹೋಟೆಲ್‌ನಲ್ಲಿ ಸೇವೆ ಸಲ್ಲಿಸಿತ್ತಿದ್ದವರು ವಾಪಸ್‌ ಬರಲು ಕಷ್ಟವಾಗಬಹುದು. ಇನ್ನು ಕೆಲವರು ಬೆಂಗಳೂರಿಗೆ ತಕ್ಷಣವೇ ಬರಲು ಭಯಪಡಬಹುದು. ಇದರಿಂದ ಹೋಟೆಲ್‌ ಕಾರ್ಯಾರಂಭ ವಿಳಂಬ ಆಗಬಹುದು. ಅದೇ ರೀತಿ, ಲಾಕ್‌ಡೌನ್‌ ನಂತರದಲ್ಲೂ ಹೋಟೆಲ್‌ಗೆ ಜನ ಬರುತ್ತಾರೆ ಎಂಬುದು ನಿರೀಕ್ಷೆ ಮಾಡುವುದು ಕಷ್ಟ. ಹೀಗಾಗಿ, ಹೋಟೆಲ್‌ ಉದ್ಯಮ ಲಾಕ್‌ಡೌನ್‌ ನಂತರ ಹೇಗಾಗುತ್ತದೆ ಹೇಳಲಾಗದು ಎಂದು ಹೋಟೆಲ್‌ ಉದ್ಯಮಿಯೊಬ್ಬರು ತಿಳಿಸಿದರು.

● ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next