ಕಾರ್ಕಳ: ಕೋವಿಡ್ ಸೋಂಕಿನಿಂದ ಮೃತ ಪಟ್ಟ ವ್ಯಕ್ತಿಯ ಶವವನ್ನು ಅಂತ್ಯ ಸಂಸ್ಕಾರಕ್ಕೆಂದು ಕಾರ್ಕಳದ ಕರಿಯಕಲ್ಲು ಸ್ಮಶಾನಕ್ಕೆ ಕರೆ ತಂದಿದ್ದ ವೇಳೆ ಮೃತ ದೇಹವು ಬದಲಾಗಿರುವುದು ಶವದ ಸಂಬಂಧಿಕರಿಗೆ ತಿಳಿದು ಶವವನ್ನು ವಾಪಸ್ ಕಳಿಸಿದ ಘಟನೆ ಸೋಮವಾರ ನಡೆದಿದೆ.
ಶೃಂಗೇರಿ ಮೂಲದ 44 ರ ವಯಸ್ಸಿನ ವ್ಯಕ್ತಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಕಾರ್ಕಳದ ತನ್ನ ಪತ್ನಿ ಮನೆಗೆ ಬಂದಿದ್ದ ಅವರಿಗೆ ಸೋಂಕು ದೃಢ ಪಟ್ಟಿತ್ತು.ಮಂಗಳೂರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ : ರಸ್ತೆ ಅಪಘಾತ : ಕೃಷಿ ಉಪಕರಣಗಳ ಸಂಶೋಧಕ ಕೋಡಿಬೈಲು ಸತ್ಯನಾರಾಯಣ ಸ್ಥಳದಲ್ಲೇ ಸಾವು
ಶವವನ್ನು ಸಂಸ್ಕಾರ ಮಾಡಲೆಂದು ಕರಿಯಕಲ್ಲು ರುದ್ರಭೂಮಿಗೆ ಅಂಬುಲೆನ್ಸ್ ಮೂಲಕ ತಂದಿದ್ದು ಸಂಬಂಧಿಕರಿಗೆ ಶವ ಅದಲು ಬದಲಾಗಿರುವುದು ಗೊತ್ತಾಗಿದೆ. ಶವ ತಮಗೆ ಸೇರಿದ ವ್ಯಕ್ತಿಯದ್ದಲ್ಲ ಎಂದು ಮನವರಿಕೆಯಾದ ಬಳಿಕ ವಾಪಸ್ ಕಳಿಸಲಾಗಿದೆ.
ಆಸ್ಪತ್ರೆ ಸಿಬಂದಿಯ ಎಡವಟ್ಟಿನಿಂದ ಈ ರೀತಿ ಆಗಿದೆ ಎನ್ನಲಾಗಿದೆ. ಆಸ್ಪತ್ರೆಯ ಬೇಜಾವಾಬ್ದಾರಿಗೆ ಮೃತ ವ್ಯಕ್ತಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.