ಹುಮನಾಬಾದ: ಪಟ್ಟಣದಲ್ಲಿನ ಸಬ್ ಜೈಲಿನಲ್ಲಿದ ವಿಚಾರಣಾಧೀನ ಕೈದಿಯೊಬ್ಬ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಜಾವೇದ್ ಖಾನ್ ಫರವೆಜ್ ಖಾನ್ (45) ಮೃತಪಟ್ಟ ವಿಚಾರಣಾಧೀನ ಕೈದಿ ಎಂದು ಗುರುತಿಸಲಾಗಿದೆ. ಬುಧವಾರ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿ ಮರಳಿ ಜೈಲಿಗೆ ಬಂದ ಸಂದರ್ಭದಲ್ಲಿ ಅನಾರೋಗ್ಯ ಎದುರಾಗಿದೆ. ನಂತರ ಜೈಲ ಅಧಿಕಾರಿಗಳು ಕೂಡಲೇ ಪಟ್ಟಣದ ಸರ್ಕಾರಿ ಆಪತ್ರೆಗೆ ದಾಖಲಿಸಿದ್ದಾರೆ. ಈ ಮಧ್ಯದಲ್ಲಿ ವ್ಯಕ್ತಿ ಮೃತ ಪಟ್ಟಿದ್ದಾನೆ.
ಮೃತ ವ್ಯಕ್ತಿಯ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ ಡಕಾಯಿತಿ ಸೇರಿದಂತೆ ವಿವಿಧ ಪ್ರಕರಣಗಳು ಇದ್ದವು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಹುಮನಾಬಾದ್ ಪಟ್ಟಣ ಹೊರವಲಯದಲ್ಲಿ ಡಕಾಯಿತಿ ನಡೆಸಲು ಯತ್ನಿಸಿದ ಸಂದರ್ಭದಲ್ಲಿ ಪಿಎಸ್ಐ ರವಿಕುಮಾರ ನಾಯ್ಕೋಡಿ ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದರು. ಅಂದಿನಿಂದ ಇವರೆಗೂ ಜಾಮಿನು ದೊರೆಯದೆ ವಿಚಾರಣೆ ಎದುರಿಸುತ್ತಿದ್ದ.
ಜೈಲಿನಲ್ಲಿ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅಪ್ಪಾಸಾಹೇಬ್ ನಾಯಕ್ ಆಸ್ಪತ್ರೆಗೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿಯ ಶವಪರೀಕ್ಷೆ ಬೀದರ್ ಸರ್ಕಾರಿ ಆಸ್ಪತ್ರೆಯಲ್ಲಿ ನುರಿತ ತಜ್ಞರಿಂದ ನಡೆಸಲಾಗುವುದು ಎಂದು ಕುಟುಂಬಸ್ಥರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಿಪಿಐ ಮಲ್ಲಿಕಾರ್ಜುನ ಯಾತನೂರ್, ಪಿಎಸ್ಐ ರವಿಕುಮಾರ ನಾಯ್ಕೋಡಿ, ಜೈಲರ್ ಭಿಮಾಶಂಕರ್ ಜಮಾದಾರ ಸೇರಿದಂತೆ ಇತರರು ಇದ್ದರು.