ಬಳ್ಳಾರಿ: ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿದ್ದ ವೈದ್ಯಕೀಯ ಪಿಜಿ ವಿದ್ಯಾರ್ಥಿನಿ ಪ್ರಿಯದರ್ಶಿನಿ ಎನ್ನುವವರ ಮೇಲೆ ಕೋವಿಡ್ ಸೋಂಕಿತನ ಸಂಬಂಧಿಯೊಬ್ಬರು ಹಲ್ಲೆ ಮಾಡಿರುವ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ.
ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ ಮಲ್ಲಿಕಾರ್ಜುನಗೌಡ ಎನ್ನುವ ರೋಗಿಯು ಎರಡು ದಿನಗಳ ಹಿಂದೆ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯುಳ್ಳ ಈ ರೋಗಿಗೆ ಕೋವಿಡ್ ಸೋಂಕು ಸಹ ಸೋಕಿದೆ. ಹಿಂದಿನ ದಿನ ಔಷಧ ಸೇವಿಸದ ಈ ರೋಗಿಯ ಆರೋಗ್ಯದಲ್ಲಿ ಶನಿವಾರ ರಾತ್ರಿ ಏರುಪೇರಾಗಿದ್ದು, ಪರಿಸ್ಥಿತಿ ಗಂಭೀರಕ್ಕೆ ತಿರುಗಿದೆ. ಈ ವೇಳೆಯ ತಂದೆಯನ್ನು ನೋಡಿಕೊಳ್ಳಲು ಬಂದಿದ್ದ ಮಗ ತಿಪ್ಪೇಸ್ವಾಮಿಗೆ ಹೃದಯ ಸಂಬಂಧಿತ ಔಷಧಗಳನ್ನು ತರುವಂತೆ ವೈದ್ಯರು ಸೂಚಿಸಿದ್ದಾರೆ.
ಹೊರಗೆ ಹೊಗಿ ಔಷಧ ತರುವುದರೊಳಗೆ ತಂದೆ ಮಲ್ಲಿಕಾರ್ಜುನಗೌಡ ಮೃತಪಟ್ಟಿದ್ದಾನೆ. ಇದರಿಂದ ಕುಪಿತಗೊಂಡ ಮಗ ತಿಪ್ಪೇಸ್ವಾಮಿ, ವೈದ್ಯರ ನಿರ್ಲಕ್ಷ್ಯವೇ ನನ್ನ ತಂದೆಯ ಸಾವಿಗೆ ಕಾರಣ ಎಂದು ಆರೋಪಿ ತಿಪ್ಪೇಸ್ವಾಮಿ, ಪಿಜಿ ವಿದ್ಯಾರ್ಥಿ ಪ್ರಿಯದರ್ಶಿನಿ ಕಪಾಳಕ್ಕೆ ಹೊಡೆಯುವ ಮೂಲಕ ಹಲ್ಲೆ ನಡೆಸಿದ್ದಾನೆ.
ಈ ಕುರಿತು ವಿಮ್ಸ್ ನಿರ್ದೇಶಕ ಡಾ. ಗಂಗಾಧರಗೌಡರ ಗಮನಕ್ಕೆ ಬಂದಿದ್ದು, ಅವರು ಕೂಡಲೇ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರನ್ನು ಭೇಟಿಯಾಗಿ ಗಮನ ಸೆಳೆದು ಮನವಿ ಸಲ್ಲಿಸಿದ್ದಾರೆ. ಜತೆಗೆ ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ವಿಮ್ಸ್ ನಿರ್ದೇಶಕ ಡಾ. ಗಂಗಾಧರ ಗೌಡ ತಿಳಿಸಿದ್ದಾರೆ.
ಮೃತ ಮಲ್ಲಿಕಾರ್ಜುನಗೌಡರ ಪುತ್ರ ತಿಪ್ಪೇಸ್ವಾಮಿ ವಿರುದ್ಧ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಆದರೆ, ಮೃತ ಮಲ್ಲಿಕಾರ್ಜುನಗೌಡ ಕೋವಿಡ್ ಸೋಂಕಿತರಾಗಿದ್ದರಿಂದ ಹಲ್ಲೆ ನಡೆಸಿದ ಪುತ್ರ ತಿಪ್ಪೇಸ್ವಾಮಿ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ. ಹಾಗಾಗಿ ಮೃತರ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ಇರುವುದರಿಂದ ಆರೋಪಿ ತಿಪ್ಪೇಸ್ವಾಮಿಯನ್ನು ಬಂಧಿಸಿಲ್ಲ ಎಂದು ಕೌಲ್‌ಬಜಾರ್ ಸಿಪಿಐ ಸುಭಾಶ್ಚಂದ್ರ ತಿಳಿಸಿದ್ದಾರೆ.