ಬೆಂಗಳೂರು: ಇಂದಿನ ಆಧುನಿಕ, ತಂತ್ರಜ್ಞಾನದ ಯುಗದಲ್ಲಿ ಜೀವಿಸುತ್ತಿದ್ದರೂ, ಮೌಡ್ಯ, ಕಂದಾಚಾರಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಬಾಲ್ಯ ವಿವಾಹಗಳಿಗೆ ಕಡಿವಾಣ ಬಿದ್ದಿಲ್ಲ.
ಈ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಬಾಲ್ಯ ವಿವಾಹಗಳನ್ನು ತಡೆವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಆರ್.ಹೆಬ್ವಾಳ್ಕರ್ ಅವರು “ಬಾಲ್ಯ ವಿವಾಹ ಮುಕ್ತ’ ಗ್ರಾಪಂಗಳಿಗೆ 50 ಸಾವಿರ ರೂ. ಬಹುಮಾನ ಘೋಷಿಸಿದರೂ ರಾಜ್ಯದಲ್ಲಿ ಬಾಲ್ಯವಿವಾಹಗಳು ನಡೆಯುತ್ತಿವೆ. ಈ ಪೈಕಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ 2023-24ನೇ ಸಾಲಿನಲ್ಲಿ ದಾಖಲಾಗಿರುವ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಚಿತ್ರದುರ್ಗ ಅಗ್ರಸ್ಥಾನ ಪಡೆದಿದೆ. ಕಳೆದ 3 ವರ್ಷದಲ್ಲಿ ರಾಜ್ಯಾದ್ಯಂತ ಒಟ್ಟು 1,465 ಬಾಲ್ಯವಿವಾಹದ ಪ್ರಕರಣಗಳು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ದಾಖಲಾಗಿರುವುದು ಸರ್ಕಾರದ ಮೂಲಗಳೇ ತಿಳಿಸಿವೆ. ಈ ಪೈಕಿ 2021-22ನೇ ಸಾಲಿನಲ್ಲಿ 418 ಪ್ರಕರಣಗಳು ದಾಖಲಾಗಿದ್ದರೆ, 2022-23ನೇ ಸಾಲಿನಲ್ಲಿ 328 ಪ್ರಕರಣಗಳು ಹಾಗೂ 2023-24ನೇ ಸಾಲಿನಲ್ಲಿ 719 ಬಾಲ್ಯ ವಿವಾಹಗಳು ನಡೆದ ಪ್ರಕರಣ ದಾಖಲಾಗಿವೆ.
ಒಟ್ಟಾರೆ ಮೂಲಗಳ ಅಂಕಿ-ಅಂಶ ಪ್ರಕಾರ 204 ಬಾಲ್ಯ ವಿವಾಹ ನಡೆದು ಮಂಡ್ಯ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಶಿವಮೊಗ್ಗದಲ್ಲಿ 148, ಮೈಸೂರಿನಲ್ಲಿ 139, ಬಾಗಲಕೋಟೆಯಲ್ಲಿ 86, ವಿಜಯಪುರದಲ್ಲಿ 79 ಬಾಲ್ಯ ವಿವಾಹಗಳು ಜರುಗಿವೆ. ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 719 ಬಾಲ್ಯ ವಿವಾಹಗಳು ನಡೆದಿವೆ. 2022-23ನೇ ಸಾಲಿನಲ್ಲಿ ಕೇವಲ 5 ಪ್ರಕರಣಗಳು ದಾಖಲಾಗಿದ್ದರೆ, 2022-23ನೇ ಸಾಲಿನಲ್ಲಿ 84 ಬಾಲ್ಯ ವಿವಾಹ ಪ್ರಕರಣ ದಾಖಲಾಗಿ ಚಿತ್ರದುರ್ಗ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಅಷ್ಟೇ ಅಲ್ಲದೇ, ಕೋಲಾರ ಜಿಲ್ಲೆಯಲ್ಲಿ 80 ಪ್ರಕರಣಗಳು, ಶಿವಮೊಗ್ಗದಲ್ಲಿ 79, 2022-23ನೇ ಸಾಲಿನಲ್ಲಿ ಕೇವಲ 3 ಪ್ರಕರಣಗಳು ದಾಖಲಾಗಿರುವ ವಿಜಯನಗರ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ 72, ಮೈಸೂರು ಜಿಲ್ಲೆಯಲ್ಲಿ 70, ಮಂಡ್ಯ ಜಿಲ್ಲೆಯಲ್ಲಿ 66 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಬಾಲ್ಯವಿವಾಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿ ಗಳಿಗೂ ಬಾಲ್ಯ ವಿವಾಹಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ. ಜತೆಗೆ ಅಂಗನವಾಡಿ ಕಾರ್ಯಕರ್ತೆ ಯರಿಗೂ ಬಾಲ್ಯ ವಿವಾಹ ನಡೆಯುವ ಮಾಹಿತಿ ತಿಳಿದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. –
ಲಕ್ಷ್ಮೀ ಆರ್. ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ
–ಭಾರತಿ ಸಜ್ಜನ್