Advertisement
ಕೊಡಗಿನಲ್ಲಿ ಸುರಿಯುತ್ತಿರುವ ಮಳೆ, ಭೂಕುಸಿತ ಕಳೆದ ವರ್ಷದ ಅತಿವೃಷ್ಟಿಯ ಭೀಕರತೆಯ ದಿನಗಳನ್ನು ನೆನಪಿಸುತ್ತಿದೆ. ಇದೇ ವೇಳೆ, ಹಾಸನ, ಚಾಮರಾಜನಗರ ಸೇರಿದಂತೆ ಹಳೇ ಮೈಸೂರು ಭಾಗದಲ್ಲೂ ನೆರೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇವೆಲ್ಲದರ ನಡುವೆ ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಮೃತಪಟ್ಟವರ ಸಂಬಂಧಿಗಳ ಆಕ್ರಂದನ, ಮನೆ, ಮಠ, ಹೊಲ, ತೋಟ ಸೇರಿ ತಮ್ಮೆಲ್ಲ ಆಸ್ತಿಗಳನ್ನು ಕಳೆದುಕೊಂಡು ಬೀದಿ ಪಾಲಾದವರ ಗೋಳಾಟ ಮನಕಲಕುವಂತಿದೆ.
ಬೆಂಗಳೂರು: ರಾಜ್ಯದ 17 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಸದ್ಯ ಮಟ್ಟಿಗೆ 6000 ಕೋಟಿ ರೂ. ನಷ್ಟ ಉಂಟಾಗಿರುವ ಅಂದಾಜು ಇದ್ದು, ತಕ್ಷಣ ಪರಿಹಾರ ಕಾರ್ಯಕ್ಕೆ 3000 ಕೋಟಿ ರೂ. ಬಿಡುಗಡೆ ಮಾಡುವಂತೆ ಪ್ರಧಾನಿ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಶನಿವಾರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸದ್ಯದ ನಷ್ಟ ಪ್ರಮಾಣ ಕೇವಲ ಅಂದಾಜು ಅಷ್ಟೇ. ನನ್ನ ಪ್ರಕಾರ ನಷ್ಟದ ಪ್ರಮಾಣ 2 ಪಟ್ಟು ಹೆಚ್ಚಾಗಬಹುದು. ಸದ್ಯದ ಅಂದಾಜಿನ ಆಧಾರದ ಮೇಲೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
Related Articles
Advertisement
ಘೋಷಣೆಗಿಂತ ಅಗತ್ಯ ಅನುದಾನ ಮುಖ್ಯ: ರಾಜ್ಯದಲ್ಲಿ ತೀವ್ರ ಅತಿವೃಷ್ಟಿ ಕಾಣಿಸಿಕೊಂಡಿರುವುದರಿಂದ ರಾಷ್ಟ್ರೀಯ ವಿಪತ್ತು ಘೋಷಣೆಗೆ ಕೇಂದ್ರಕ್ಕೆ ಮನವಿ ಸಲ್ಲಿಸುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಇನ್ನೂ 2-3 ದಿನ ಪರಿಸ್ಥಿತಿ ಅವಲೋಕಿಸಲಾಗುವುದು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಸ್ತುಸ್ಥಿತಿ ಪರಿಶೀಲಿಸಿದ್ದಾರೆ. ಕೇಂದ್ರ ಸರ್ಕಾರ ಏನೆಂದು ಘೋಷಣೆ ಮಾಡುತ್ತದೆ ಎಂಬುದಕ್ಕಿಂತ ಅಗತ್ಯವಿರುವಷ್ಟು ನೆರವನ್ನು ಕೇಂದ್ರದಿಂದ ಪಡೆಯುವುದು ಮುಖ್ಯ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು.
ನಾನು ದೆಹಲಿಯಿಂದ ಬರುತ್ತಿದ್ದಂತೆ 24 ಗಂಟೆಯಲ್ಲಿ ನರೇಗಾ ಅಡಿ ಬಾಕಿಯಿದ್ದ 856 ಕೋಟಿ ರೂ., ಎಸ್‌ಡಿಆರ್‌ಎಫ್ನಿಂದ 126 ಕೋಟಿ ರೂ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಸಕಾಲದಲ್ಲ ಸ್ಪಂದಿಸಿದ್ದು, ಸೇನಾ ನೆರವು ಒದಗಿಸಿದೆ. ಸದ್ಯ ರಕ್ಷಣಾ ಕಾರ್ಯಕ್ಕೆ ಕೇಂದ್ರ ಒದಗಿಸಿರುವ ಸೇವೆ ಅಗತ್ಯಕ್ಕಿಂತ ಹೆಚ್ಚಿದ್ದು, ಅಗತ್ಯಬಿದ್ದರೆ ಇನ್ನಷ್ಟು ಪೂರೈಸಲಿದೆ ಎಂದು ತಿಳಿಸಿದರು.
ಸಂತ್ರಸ್ತರಿಗೆ ನೆರವು ನೀಡಿದವರು..: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಶನಿವಾರ ಭೇಟಿಯಾಗಿದ್ದು ಸರ್ಕಾರಿ ನೌಕರರ ಒಂದು ದಿನದ ವೇತನ 150 ಕೋಟಿ ರೂ. ನೆರವು ನಿಧಿಗೆ ನೀಡುವುದಾಗಿ ಹೇಳಿದ್ದಾರೆ. ಈ ತಿಂಗಳ ವೇತನದಲ್ಲೇ ಒಂದು ದಿನದ ಮೊತ್ತ ಕಡಿತ ಮಾಡಿಕೊಂಡು ನಿಧಿಗೆ ನೀಡುವುದಾಗಿ ತಿಳಿಸಿದ್ದಾರೆ. ಜತೆಗೆ ನಿಗಮ, ಮಂಡಳಿಗಳ ನೌಕರರ ಒಂದು ದಿನದ ವೇತನ 50 ಕೋಟಿ ರೂ. ಮೊತ್ತವನ್ನು ನಿಧಿಗೆ ನೀಡುವುದಾಗಿ ತಿಳಿಸಿದ್ದಾರೆ.
ಪೊಲೀಸ್, ಸಾರಿಗೆ ಇಲಾಖೆ ನೌಕರರ ಒಂದು ದಿನದ ವೇತನವನ್ನೂ ನಿಧಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು. ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಅವರು 10 ಕೋಟಿ ರೂ. ನೆರವು ನೀಡಿದ್ದಾರೆ. ಶಾಸಕ ವೀರಣ್ಣ ಚರಂತಿಮಠ ಅವರ ಶಿಕ್ಷಣ ಸಂಸ್ಥೆಗಳಿಂದ 2 ಕೋಟಿ ರೂ., ಹಾಲು ಉತ್ಪಾದಕರ ಮಹಾಮಂಡಳದಿಂದ ಒಂದು ಕೋಟಿ ರೂ., ವಿಧಾನ ಪರಿಷತ್ ಸದಸ್ಯ ಲೆಹರ್‌ಸಿಂಗ್ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ 2 ಕೋಟಿ ರೂ. ನೆರವು ಘೋಷಿಸಿದ್ದಾರೆ.
ಕಳೆದ ವರ್ಷ ಕೊಡಗಿನ ಅತಿವೃಷ್ಟಿ ಪರಿಹಾರಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನೀಡಲಾಗಿದ್ದ ಒಂದು ಕೋಟಿ ರೂ. ಬಳಕೆಯಾಗಿರಲಿಲ್ಲ. ಆ ಮೊತ್ತವನ್ನು ಅತಿವೃಷ್ಟಿ ಪರಿಹಾರಕ್ಕೆ ಬಳಸಲು ಸೂಚಿಸಲಾಗಿದೆ ಎಂದು ತಿಳಿಸಿದರು. ಕೈಗಾರಿಕೋದ್ಯಮಿಗಳು, ಕಾಪೋರೇಟ್ ಕಂಪೆನಿಗಳು ದೊಡ್ಡ ಪ್ರಮಾಣದಲ್ಲಿ ನೆರವು ನೀಡಬೇಕು. ಎಲ್ಲರ ಸಹಕಾರದೊಂದಿಗೆ ಶಾಶ್ವತ ಪುನರ್‌ವಸತಿ ಮಾಡಬೇಕಿದೆ ಎಂದು ಮನವಿ ಮಾಡಿದರು.
ಎಲ್ಲ ಜಿಲ್ಲೆ ಒಂದೇ: ನಾವು ಉತ್ತರ ಕರ್ನಾಟಕ, ಉತ್ತರ ಕನ್ನಡ, ದಕ್ಷಿಣ ಕನ್ನಡ ಭಾಗ ಬೇರೆ ಬೇರೆ ಎಂಬ ಭಾವನೆ ಇಟ್ಟುಕೊಂಡಿಲ್ಲ. ಎಲ್ಲವನ್ನೂ ಸರಿ ಸಮಾನವಾಗಿ ನೋಡು ತ್ತಿದ್ದೇವೆ. ಬೆಳಗಾವಿ, ಬಾಗಲಕೋಟೆಯಲ್ಲಿ ಭಾರೀ ಹಾನಿಯಾದ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಪರಿಶೀಲನೆ ನಡೆಸಲಾಯಿತು. 3-4 ದಿನಗಳಿಂದ ಇತರೆ ಭಾಗಗಳಲ್ಲಿ ಪ್ರವಾಹ ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯ ಸಂಸದರು, ಶಾಸಕರು ಓಡಾಡುತ್ತಿದ್ದಾರೆ. ನಾನು ಸಹ ಸಮೀಕ್ಷಾ ಪ್ರವಾಸ ಮಾಡುತ್ತಿದ್ದೇನೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಎಂಬ ಭಾವನೆ ಇಲ್ಲ. ರಾಜ್ಯದ 30 ಜಿಲ್ಲೆಗಳನ್ನು ಸರಿಸಮಾನವಾಗಿ ನೋಡುತ್ತೇವೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಪ್ರಚಾರ ಪ್ರಿಯ ಅಲ್ಲ: ಸಂಸದ ಅನಂತ ಕುಮಾರ್ ಹೆಗಡೆ ಅವರು ಪ್ರಚಾರ ಪ್ರಿಯರಲ್ಲ. ಅವರು ಕ್ಷೇತ್ರದಲ್ಲೇ ಕುಳಿತು ಎಲ್ಲ ಕೆಲಸ ಮಾಡು ತ್ತಿದ್ದಾರೆ. ಅಗತ್ಯಬಿದ್ದರೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಬಹುದು. ಕಾರಣಾಂತರಗಳಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.