Advertisement

ಸೂರ್ಯ ಶಕ್ತಿಯ ಬಳಕೆಯ ವಿಸ್ತಾರಕ್ಕೆ ಪ್ರಯತ್ನ; ಮೋಹನ ಭಾಸ್ಕರ ಹೆಗಡೆ ಕರೆ

07:06 PM Dec 12, 2021 | Vishnudas Patil |

ಸಾಗರ: ಸೌರ ಶಕ್ತಿಯ ಬಳಕೆ ಎಂದರೆ ಕೇವಲ ಬೆಳಕಲ್ಲ. ಸೂರ್ಯ ಶಕ್ತಿಯ ಬಳಕೆಯ ವಿಸ್ತಾರವನ್ನು ಇಂದಿನ ತಾಂತ್ರಿಕತೆಯಿಂದ ಹೆಚ್ಚಿಸಬಹುದು ಎಂದು ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಹೇಳಿದರು.

Advertisement

ಭಾರತೀಯ ವಿಕಾಸ ಟ್ರಸ್ಟ್ ಸೆಲ್ಕೋ ಇಂಡಿಯಾ ಸಹಯೋಗದಲ್ಲಿ ಸಿದ್ದಗೊಳಿಸಲಾದ ಸೌರಶಕ್ತಿ ಚಾಲಿತ ಯಕ್ಷಗಾನ ವೇಷ ಭೂಷಣಗಳ ತಯಾರಿಕಾ ಕೇಂದ್ರದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸೌರದ ಬೆಳಕು, ಶಕ್ತಿಗಳ ಜೊತೆಗೆ ಸೆಲ್ಕೋ ಸಂಸ್ಥೆ ಕಳೆದ ಎರಡೂವರೆ ದಶಕಗಳಿಂದ ಕೆಲಸ ಮಾಡುತ್ತಿದೆ. ಸಂಸ್ಥೆಗೆ ಲಾಭವಲ್ಲ. ಸೇವೆ ಮುಖ್ಯ. ಲಾಭವಾದುದನ್ನೂ ಸೇವೆಗೆ ಬಳಸುವ ಉದ್ದೇಶ ನಮ್ಮದಾಗಿರುವುದರಿಂದಲೇ ಲಾಭವೂ ನಮಗೆ, ಸಮಾಜಕ್ಕೆ ಮುಖ್ಯವಾಗುತ್ತದೆ. ಕೋವಿಡ್‌ನಂತಹ ಸಂಕಷ್ಟದಲ್ಲೂ ಗ್ರಾಮೀಣ ಸೋಲಾರ್ ಸಂಸ್ಥೆಯಾಗಿ ಉಳಿದುಕೊಂಡಿದ್ದು ನಾವು ಗ್ರಾಮೀಣ ಸೇವೆಗೆ ನೀಡಿದ ಆದ್ಯತೆಯೇ ಕಾರಣ ಎಂದರು.

ಸೌಕರ್ಯಗಳು ಮೊದಲು ಪಟ್ಟಣಗಳಿಗೆ ಬರುತ್ತದೆ. ಆದರೆ ಸೆಲ್ಕೋ ಮೊದಲು ಕೆಲಸ ಆರಂಭಿಸಿದ್ದು ಹಳ್ಳಿಗಳಲ್ಲೇ. ಹಳ್ಳಿ ಹಳ್ಳಿಯಲ್ಲಿ ಬೆಳಕು ಜನಜೀವನ ಬದಲಿಸಬಹುದು ಎಂಬ ನಂಬಿಕೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದರು.

ಪ್ರಸಿದ್ದ ಯಕ್ಷಗಾನ ನಾಟ್ಯ ವಿನಾಯಕ ದೇವಸ್ಥಾನದ ಮೊಕ್ತೇಸರ ವಿನಾಯಕ ಹೆಗಡೆ ಕಲಗದ್ದೆ ಮಾತನಾಡಿ, ಸ್ವತಃ ಕಲಾವಿದನೇ ವೇಷ ಭೂಷಣ ಸಿದ್ದಗೊಳಿಸಬೇಕು. ಅದರಿಂದ ಕಲಾವಿದರ ಕಲಾ ಪ್ರದರ್ಶನಕ್ಕೆ ಅನುಕೂಲ ಆಗುತ್ತದೆ. ಸಮಾಜಕ್ಕೆ ಕೊಡುವವರು ಬೇಕು. ಕೊಡುವವರಿಗೆ ಯಾರಿಗೆ ಕೊಡಬೇಕು ಎಂಬುದು ತಿಳಿದರೆ ಅದು ಸಾರ್ಥಕ ಆಗುತ್ತದೆ ಎಂದರು.

Advertisement

ಉದಯವಾಣಿ ಶಿರಸಿ ವರದಿಗಾರ ರಾಘವೇಂದ್ರ ಬೆಟ್ಟಕೊಪ್ಪ, ಇಂತಹ ಕಲಾ ಕೌಶಲಿಗರಿಗೆ ಇಂಥ ನೆರವು ನೀಡುವ ಸಾಮಾಜಿಕ ಬದ್ದತೆಯ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ವಿದುಷಿ ವಸುಧಾ ಶರ್ಮಾ, ಸೆಲ್ಕೋ ಡಿಜಿಎಂ ಗುರು ಪ್ರಕಾಶ ಶೆಟ್ಟಿ ಬಿ.ಪಿ, ಏರಿಯಾ ಮ್ಯಾನೇಜರ್ ಶೇಖರ ಶೆಟ್ಟಿ, ರಂಗನಾಥ ಬೆಳೆಯೂರು ಇತರರು ಇದ್ದರು. ವೀಣಾ ರಾಮಮೂರ್ತಿ ಪ್ರಾರ್ಥಿಸಿದರು. ಭಾರತೀಯ ವಿಕಾಸ ಟ್ರಸ್ಟ್‌ನ ಮಾಸ್ಟರ್ ಟ್ರೇನರ್ ಸುಧೀರ ಕುಲಕರ್ಣಿ ಸ್ವಾಗತಿಸಿದರು. ರಾಘವೇಂದ್ರ ಆಚಾರ್ಯ ನಿರ್ವಹಿಸಿದರು.

ಕೇಂದ್ರದ ಮುಖ್ಯಸ್ಥ ಸಂಜಯ ಬೆಳೆಯೂರು ವಂದಿಸಿದರು. ಇದಕ್ಕೂ ಮೊದಲು ಯಕ್ಷಗಾನ ವೇಷ ಭೂಷಣಗಳ ಪ್ರದರ್ಶನ, ಕರಕುಶಲಗಳ ಪ್ರದರ್ಶನ, ಸೌರ ಶಕ್ತಿಗಳಿಂದ ನಡೆಯುವ ಯಂತ್ರಗಳ ಪ್ರದರ್ಶನ ಕೂಡ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next