Advertisement

ಉತ್ತರ ಕೇರಳದ ಬಹುಕಾಲದ ಕನಸು ಕೊನೆಗೂ ನನಸು

12:24 PM Dec 10, 2018 | Team Udayavani |

ಕಾಸರಗೋಡು: ಉತ್ತರ ಕೇರಳದ ಬಹುಕಾಲದ ಕನಸಾಗಿದ್ದ ಕಣ್ಣೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರವಿವಾರ ಲೋಕಾರ್ಪಣೆಗೈಯ್ಯಲಾಯಿತು. ಅದ್ದೂರಿಯ ಹಾಗೂ ವರ್ಣರಂಜಿತ ಸಮಾರಂಭದಲ್ಲಿ ಕೇಂದ್ರ ನಾಗರಿಕ ವ್ಯೋಮಯಾನ ಖಾತೆ ಸಚಿವ ಸುರೇಶ್‌ ಪ್ರಭು ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸಂಯುಕ್ತವಾಗಿ ಫ್ಲಾಗ್‌ಆಫ್‌ ಮಾಡುವ ಮೂಲಕ ಕಣ್ಣೂರು ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೈದರು.

Advertisement

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಕಣ್ಣೂರಿನಿಂದ ಅಬುಧಾಬಿಗೆ ಪ್ರಥಮ ಸೇವೆ ನಡೆಸುವ ಮೂಲಕ ಕಣ್ಣೂರು ಹೊಸ ಇತಿಹಾಸದ ಕ್ಷಣಕ್ಕೆ ನಾಂದಿಯಾಯಿತು. ಕಣ್ಣೂರು ವಿಮಾನ ನಿಲ್ದಾಣದಲ್ಲಿ ವಿಮಾನ ಬಂದಿಳಿಯುತ್ತಿದ್ದಂತೆ ಕೇಂದ್ರ ಸಚಿವರು, ಕೇರಳದ ಮುಖ್ಯಮಂತ್ರಿ ಮತ್ತಿತರ ಗಣ್ಯರು ಸ್ವಾಗತಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಸಾವಿರಾರು ಮಂದಿ ಭಾಗವಹಿಸಿ ವಿಮಾನ ಹಾರಾಟದ ಕ್ಷಣಕ್ಕೆ ಸಾಕ್ಷಿಯಾದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸಮಾರಂಭವನ್ನು ಉದ್ಘಾಟಿಸಿದರು. ಕೇಂದ್ರ ಸಚಿವ ಸುರೇಶ್‌ ಪ್ರಭು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಉದ್ದಿಮೆ ಖಾತೆ ಸಚಿವ ಇ.ಪಿ.ಜಯರಾಜನ್‌ ಅಧ್ಯಕ್ಷತೆ ವಹಿಸಿದರು. ಹಲವು ಸಚಿವರು ಸೇರಿದಂತೆ ಗಣ್ಯರು ಭಾಗವಹಿಸಿ ಮಾತನಾಡಿದರು. ಈ ನಿಲ್ದಾಣದಿಂದ ಬೆಳಗ್ಗೆ 9.55ಕ್ಕೆ ಪ್ರಥಮ ವಿಮಾನ ಆಗಸಕ್ಕೇರಿ ಪ್ರಯಾಣ ಆರಂಭಿಸಿತು. ಇದೇ ಸಂದರ್ಭದಲ್ಲಿ ಟರ್ಮಿನಲ್‌ ಅನ್ನು ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿ ಉದ್ಘಾಟಿಸಿದರು.

ಕಾಂಗ್ರೆಸ್‌, ಬಿಜೆಪಿ ಬಹಿಷ್ಕಾರ
ಕೇರಳದ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ಕಣ್ಣೂರು ಇಂಟರ್‌ ನ್ಯಾಶನಲ್‌ ಏರ್‌ಪೋರ್ಟ್‌ ಉದ್ಘಾಟನಾ ಸಮಾರಂಭವನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಬಹಿಷ್ಕರಿಸಿತು. ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡದೇ ಇರುವುದನ್ನು ಪ್ರತಿಭಟಿಸಿ ಕಾರ್ಯಕ್ರಮವನ್ನು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಬಹಿಷ್ಕರಿಸಿತು. ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮವನ್ನು ರಾಜಕೀಯಗೊಳಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕ್ರಮವನ್ನು ಬಹಿಷ್ಕರಿಸಿತು.

ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನಗರದಿಂದ 20 ಕಿ.ಮೀ. ದೂರದಲ್ಲಿರುವ ಕಣ್ಣೂರು-ಮಟ್ಟನ್ನೂರು-ಮೈಸೂರು ರಸ್ತೆ ಸಮೀಪದಲ್ಲಿದೆ. ಕರ್ನಾಟಕದ ಕೊಡಗು ಜಿಲ್ಲೆಗೆ ಹತ್ತಿರವಾಗಿರುವ ವಿಮಾನ ನಿಲ್ದಾಣದಿಂದ ಕೊಡಗು ಮತ್ತು ಮೈಸೂರು ಜಿಲ್ಲೆಗಳ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ.

ಮಡಿಕೇರಿಯಿಂದ ನೂತನ ಕಣ್ಣೂರು ವಿಮಾನ ನಿಲ್ದಾಣವು 90 ಕಿ.ಮೀ. ಅಂತರದಲ್ಲಿದ್ದು, ಮೈಸೂರಿನಿಂದ 158 ಕಿ.ಮೀ. ದೂರದಲ್ಲಿದೆ. 11 ವಿದೇಶಿ ವಿಮಾನಗಳು, 6 ದೇಸಿ ನಾಗರಿಕ ವಿಮಾನಗಳು ಕಣ್ಣೂರಿನಿಂದ ಸೇವೆ ಆರಂಭಿಸಲಿವೆ. ಪ್ರಥಮ ಹಂತದಲ್ಲಿ ವಿಮಾನ ನಿಲ್ದಾಣದ ಕಾಮಗಾರಿಗೆ 1,892 ಕೋಟಿ ರೂ. ನಿರ್ಮಾಣ ವೆಚ್ಚವಾಗಿದೆ. ಕಿಯಾಲ್‌ ಮೂಲಕ 2014 ಫೆಬ್ರವರಿಯಲ್ಲಿ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ತಿರುವನಂತಪುರ, ಕೊಚ್ಚಿ, ಕಲ್ಲಿಕೋಟೆಯ ನಂತರ ರಾಜ್ಯದ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗರಿ ಕಣ್ಣೂರಿಗಿದೆ.

Advertisement

ರಾಜ್ಯದ ನಾಲ್ಕನೇ ನಿಲ್ದಾಣ
ಕಣ್ಣೂರು ಇಂಟರ್‌ನ್ಯಾಶನಲ್‌ ಏರ್‌ಪೋರ್ಟ್‌ ಲಿಮಿಟೆಡ್‌(ಕಿಯಾಲ್‌) ಮೂಲಕ ಸಾಕಾರ ಕಂಡ ನಿರ್ಮಾಣವು ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದ ಮೂಲಕ ಪೂರ್ಣಗೊಂಡಿದೆ. ಮಟ್ಟನ್ನೂರು ನಗರಸಭಾ ವ್ಯಾಪ್ತಿಯ 2,300 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗಿದ್ದು, ವಿಮಾನ ನಿಲ್ದಾಣವು 2,050 ಮೀ. ಉದ್ದದ ರನ್‌ ವೇ ಹೊಂದಿದೆ. ಅದನ್ನು 4 ಸಾವಿರ ಮೀ. ವರೆಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ವಿಮಾನ ನಿಲ್ದಾಣದಿಂದ ಬೋಯಿಂಗ್‌-777 ನಂತಹ ದೊಡ್ಡ ವಿಮಾನಗಳು ಹಾರಾಟ ನಡೆಸಬಹುದಾಗಿದೆ ಎಂದು ಅಧಿಕೃತರು ತಿಳಿಸಿದ್ದಾರೆ.

ಮಾದರಿ ನಿಲ್ದಾಣ 
ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾದರಿ ವಿಮಾನ ನಿಲ್ದಾಣವಾಗಿದೆ ಈ ವಿಮಾನ ನಿಲ್ದಾಣ ಲೋಕಾರ್ಪಣೆಗೊಳ್ಳುವ ಮೂಲಕ ಕೇರಳದಿಂದ ವಿದೇಶಕ್ಕೆ ತೆರಳುವ ಉದ್ಯೋಗಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ ಎಂದ ಅವರು ಈ ನಿಲ್ದಾಣವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಗೊಳಿಸಲಾಗುವುದು.
 – ಸುರೇಶ್‌ ಪ್ರಭು,
ಕೇಂದ್ರ ವ್ಯೋಮಯಾನ ಖಾತೆ ಸಚಿವ

ನಿರ್ಮಾಣಕ್ಕೆ ವಿಳಂಬ
1996 ರಲ್ಲಿ ವಿಮಾನ ನಿಲ್ದಾಣ ಯೋಜನೆ ಆರಂಭಿಸಿದರೂ ನನಸಾಗಲು ಇಷ್ಟು ಕಾಲ ಅಗತ್ಯವಿರಲಿಲ್ಲ. 2001 ರಿಂದ 2006 ರ ವರೆಗಿನ ಐದು ವರ್ಷಗಳ ಕಾಲ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿ ಯಾವುದೇ ಪ್ರಕ್ರಿಯೆಯೂ ನಡೆಯಲಿಲ್ಲ. ಈ ರೀತಿಯ ನಿಲುವು ಏಕೆ ತೆಗೆದುಕೊಂಡಿದೆ ಎಂದು ಅರಿಯುವುದಿಲ್ಲ2006ರಲ್ಲಿ ಅಚ್ಯುತಾನಂದನ್‌ ಸರಕಾರದ ವಿಮಾನ ನಿಲ್ದಾಣಕ್ಕೆ ಜೀವ ನೀಡಿತ್ತು.
 -ಪಿಣರಾಯಿ ವಿಜಯನ್‌,
  ಕೇರಳ ಮುಖ್ಯಮಂತ್ರಿ 

Advertisement

Udayavani is now on Telegram. Click here to join our channel and stay updated with the latest news.

Next