ಲಾಕ್‌ಡೌನ್‌ನ ಈ ಬಿಡುವಿನ ಸಮಯದಲ್ಲಿ ನನಗೆ ಚೆಸ್ ಕಲಿಸಿ ಅಂತ ಯಜಮಾನರಿಗೆ ಕೇಳಿಕೊಂಡೆ. ಅವರೂ ಬಹಳ ಖುಷಿಯಿಂದ ಒಪ್ಪಿಕೊಂಡರು…
ಒಂದು ಲಾಕ್‌ಡೌನ್ ಮುಗಿಯಿತು ಅನ್ನುವಷ್ಟರಲ್ಲಿ ದೊಡ್ಡ ದೊಡ್ಡ ನಗರಗಳು ಮತ್ತೂಮ್ಮೆ ಬಂದ್ ಆಗಿಬಿಟ್ಟಿವೆ. ಇನ್ನು ಈ ಪರಿಸ್ಥಿತಿ ಎಷ್ಟು ದಿನವೋ ದೇವರೇ ಬಲ್ಲ. ಆದರೆ, ಮೊದಲ ಸಲ ಲಾಕ್‌ಡೌನ್ ಆದಾಗ ಇದ್ದ ಗೊಂದಲ, ಗಾಬರಿ ಈಗಿಲ್ಲ. ನಾವೆಲ್ಲಾ ಮನೆಯೊಳಗೇ ಬದುಕಲು ಕಲಿತಿದ್ದೇವೆ. ಮಾರ್ಚ್‌ನಲ್ಲಿ ಲಾಕ್‌ಡೌನ್ ಆದಾಗ ನನಗಂತೂ ಬಹಳ ಕಷ್ಟವಾಗಿತ್ತು. ಬೆಳಗ್ಗೆ ವಾಕಿಂಗ್ ಹೋಗೋ ಹಾಗಿಲ್ಲ, ಸಂಜೆ ಗೆಳತಿಯರ ಜೊತೆ ಭಜನೆಗೆ ಸೇರುವ ಹಾಗಿಲ್ಲ ಅಂದ್ರೆ… 24* 7 ಮನೆಯೊಳಗೇ ಕುಳಿತು ಮಾಡೋದೇನು? ಧಾರಾವಾಹಿಗಳಿಲ್ಲ, ನ್ಯೂಸ್ ಚಾನೆಲ್ ನೋಡೋಕೆ ಇಷ್ಟವಿಲ್ಲ.
ಅಡುಗೆ, ಪುಸ್ತಕ, ಕಸೂತಿಯನ್ನು ಹೊಸದು ಅಂತ ಕಲಿಯೋ ವಯಸ್ಸೂ ನನ್ನದಲ್ಲ. ಆಗ ನೆನಪಾಗಿದ್ದು ಹಳೆಯದೊಂದು ಬಯಕೆ. ಅದುವೇ ಚೆಸ್ ಕಲಿಯೋ ಆಸೆ. “ಕಾಲೇಜು ಟೈಮಲ್ಲಿ ನಾನು ಚೆಸ್ ಚಾಂಪಿಯನ್…’ ಅಂತ ಮೀಸೆ ತಿರುವಿದವರನ್ನು ಮದುವೆಯಾಗಿ ಹದಿನೈದು ವರ್ಷ ಕಳೆದರೂ, ನನಗೆ ಚೆಸ್ ಆಡೋಕೆ ಬರುತ್ತಿರಲಿಲ್ಲ. ರಾಜ ಯಾವುದು, ರಾಣಿ ಯಾವುದು ಅಂತಲೂ ಕನ್‌ಫ್ಯೂಸ್ ಆಗುತ್ತಿತ್ತು. “ಅದು ಬುದ್ಧಿವಂತರ ಆಟ’ ಅಂತ ಯಜಮಾನರು ಛೇಡಿಸುವುದೂ ನಡೆದಿತ್ತು. ನಾನೂ ಚೆಸ್ ಕಲಿತು ಯಜಮಾನರ “ಗರ್ವಭಂಗ’ ಮಾಡುವ ಕನಸು ಕಂಡಿದ್ದೆನೇ ಹೊರತು, ಕಲಿಯುವ ಮನಸ್ಸು ಮಾಡಿರಲಿಲ್ಲ.
ನನಗೆ ಚೆಸ್ ಕಲಿಸಿ ಅಂತ ಯಜಮಾನರಿಗೆ ಕೇಳಿಕೊಂಡೆ. ಅವರೂ ಬಹಳ ಖುಷಿಯಿಂದ ಒಪ್ಪಿಕೊಂಡರು. ದಿನಾ ಬೆಳಗ್ಗೆ, ಸಂಜೆಯ ಬಿಡುವಿನ ವೇಳೆಯಲ್ಲಿ ಚೆಸ್ ಆಡಿದ್ದೇ ಆಡಿದ್ದು. ಯಜಮಾನರು ನಿಜವಾಗ್ಲೂ ಚೆಸ್ ಚಾಂಪಿಯನ್ ಅನ್ಸುತ್ತೆ. ಬಹಳ ಬೇಗ, ಸುಲಭದಲ್ಲಿ ಅರ್ಥವಾಗುವಂತೆ ಕಲಿಸಿದರು. ಮೊನ್ನೆಯ ಆಟದಲ್ಲಿ ಅಂತೂ ಅವರಿಗೆ “ಚೆಕ್ ಮೇಟ…’ ಅಂತ ಹೇಳಿ ವರ್ಷಗಳ ಕನಸನ್ನು ನನಸು ಮಾಡಿಕೊಂಡೆ. ಆದ್ರೆ ಯಜಮಾನರು ಮಾತ್ರ, “ನಾನು ಬೇಕಂತಲೇ ಸೋತಿದ್ದು ಕಣೇ…’ ಅಂತಿದ್ದಾರೆ. ಇದ್ದರೂ ಇರಬಹುದು. ಆದರೂ ಆ ಮಾತನ್ನು ನಾನು ನಂಬುವುದಿಲ್ಲ ಬಿಡಿ!
ಗೀತಾ ಶಂಕರ್