Advertisement

UV Fusion: ಪ್ರೀತಿ, ಸ್ನೇಹಗಳ ಸುಳಿಯಲ್ಲಿ

02:41 PM Nov 20, 2023 | Team Udayavani |

ಅದು ಕಾಲೇಜಿಗೆ ಮೊದಲ ದಿನ, ಹೊಸ ಹೊಸ ಮುಖಗಳ ಹೆಸರು ಕೇಳಿ ಪರಿಚಿತರಾದ ದಿನ. ದಿನಕಳೆದಂತೆ ಸ್ನೇಹವೆಂಬ ಜಾಲವ ಹೆಣೆದು, ಭದ್ರವಾಗಿಸಿಕೊಳ್ಳುವುದೇ ಒಂದು ಚೆಂದದ ಅನುಭವ ಅಲ್ಲವೇ..?

Advertisement

ಬೇರೆ ಬೇರೆ ದಿಕ್ಕಿನಿಂದ ಸುಳಿದ ಮನಸುಗಳು ಗೆಳೆತನದ ಗುರುತ್ವಾಕರ್ಷಣೆಗೆ ಸಿಕ್ಕಿ ಒಂದೆಡೆ ಗರಗರನೆ ತಿರುಗುವುದು. ವಿಪರೀತ ವಿದ್ಯಮಾನಗಳನ್ನು ಎದುರಿಸಿ ಸುಂದರ ಸ್ನೇಹದ ಸೌದ ಕಟ್ಟುವುದಿದೆಯಲ್ಲ ವಾಸ್ತುಶಿಲ್ಪ ಕಲೆಯೇ ಸರಿ ಬಿಡಿ.

ಹೀಗೆ… ಒಂದು ಗ್ಯಾಂಗ್‌, ರೌಡಿಸಂದಲ್ಲ ಸ್ನೇಹದ್ದು. ಒಬ್ಬಳು ಹುಡುಗಿ, ಇನ್ನಿಬ್ಬರು ಹುಡುಗರು. ಎಲ್ಲರ ಕಣ್ಣು ಕುಕ್ಕುವಂತಿತ್ತು ಅವ್ರ ಸ್ನೇಹ. ಅಟೆಂಡೆನ್ಸನಲ್ಲೂ ಸೇಮ್, ಪನಿಶ್‌ಮೆಂಟ್‌ನಲ್ಲೂ ಸೇಮ್; ಯಾರೂ ಯಾರನ್ನ ಬಿಟ್ಟುಕೊಟ್ಟಿದ್ದೇ ಇಲ್ಲ.

ಒಬ್ಬರಿಗೆ ಹುಷಾರಿಲ್ಲಾಂದ್ರೆ, ಇನ್ನಿಬ್ಬರು ಚಡಪಡಿಸುವರು. ಕ್ಲಾಸಿಗೆ ಹೋಗಬೇಕಾದ್ರೂ ಪ್ರತಿಯೊಬ್ಬರ ಅನುಮತಿ ಅವಶ್ಯ. ಪ್ರೊಜೆಕ್ಟ್, ಅಸೈಮೆಂಟ್‌ಗಳಲ್ಲೂ ಒಂದೇ ಓಟ, ಬರದ್ರು ಒಂದೆ ಸಲ, ಕೊಟ್ರಾ ಒಂದೆ ಸಲ. ಕಾಸಿಲ್ಲ ಅಂದ್ರೆ ಶೇರ್‌ ಮಾಡುವ, ಇರೋದ್ರಲ್ಲೇ ಸಮನಾಗಿ ಹಂಚಕೊಂಡು ತಿನ್ನುವ ಸಹೃದಯದ, ಚಿಕ್ಕದಾದ್ರೂ ಚೊಕ್ಕಾದಾದ ಸ್ನೇಹ ಬಳಗವದು. ಆಸೆ- ನಿರಾಸೆಗಳಿಗೆ, ಸುಖ – ದುಃಖಗಳಿಗೆ, ಹೊಗಳಿಕೆ – ತೆಗಳಿಕೆಗಳಿಗೆ ಹೆಗಲು ನೀಡುವ ಬ್ಯೂಟಿಫ‌ುಲ್‌ ಮನಸ್ಸುಗಳು.

ಹಿಂಗೆ ಇರಬೇಕಾದ್ರೇ.. ಆಸೆಗೆ ಟಾಕ್ಸು ಇಲ್ಲ, ಕನಸಿಗೆ ಫೈನು ಇಲ್ಲ ಅಂದಂಗೆ, ಅದರಲ್ಲಿ ಒಬ್ಬನಿಗೆ ತನ್ನ ಗೆಳತಿಯ ಮೇಲೆ ಮನಸ್ಸಾಗ್ಗಿದಂತ್ತೂ ನಿಜ. ಯಾರು ಗುರು ಮನಸಿನ ಗುಟ್ಟು ತಿಳಿಯೋರು ? ಭಾವನೆಗಳಿಗೆ ರೆಕ್ಕೆಯಿರದಿದ್ರು, ಅವು ಹಕ್ಕಿಗಿಂತ ಬಹುದೂರ ಹಾರಿ ಬಿಡುತ್ತವೆ. ಹಾಗೆಯೇ ಮಾಡಿದ್ದವು ಹದಿಹರೆಯರ ಮನಸ್ಸಿನ ಹಕ್ಕಿಗಳು. ಅವಳಿಗೂ ಇವನ ಗುಣಗಾನ, ಜಾಸ್ತಿನೇ ತೋರಿಸೋ ಪ್ರೀತಿ ಇವಳ ಬಗ್ಗೆ ಮೂರ್ತುವಜಿ ವಹಿಸಲು ತೊಡುವ ಪಣ ಇಡಿಸಿತ್ತು. ಇಬ್ಬರ ನಡುವೆ ಸಲುಗೆ ಸ್ನೇಹವನನ್ನೂ ಮೀರಿ ಬೆಳೆದಂತಿತ್ತು. ಒಂದು ಶುಭಸಂಜೆ ಆ ತರುಣ ತನ್ನ ಮನದ ತುಡಿತವನ್ನು ತಿಳಿಸಿ, ಅವಳ ಒಪ್ಪಿಗೆಯನ್ನು ಗಿಟ್ಟಿಸಿಕೊಂಡು ಯುದ್ಧ ಗೆದ್ದಿದ್ದ. ಅವರಿಬ್ಬರ ನಡುವೆ ಈಗ ಪ್ರೇಮಾಂಕುರ ವಾಗಿತ್ತು. ಅದು ಅವರ ಗೆಳೆಯನಿಗೂ ತಿಳಿದಿತ್ತು.

Advertisement

ಮೂರನೆಯವನ ಪಾಡು ಯಾರಿಗೂ ಹೇಳತೀರದ ನಾಯಿ ಪಾಡು. ಈಗಲೂ ಅದೇ ಮೂವರು ಜತೆಯಾಗಿ ಇರುತ್ತಿದ್ದಿದ್ದು ವಾಡಿಕೆ, ಆದ್ರೂ ಮೊದಲಿನ ಹಾಗೇ ಒಬ್ಬರಿಗೊಬ್ಬರು ಚುಡಾಯಿ ಸುವುದಾಗಲಿ, ಎಲ್ಲಾ ಮನಸಿನ ಮಾತುಗಳನ್ನು ಎಲ್ಲರ ಮುಂದೆ ತೆರೆದಿಡುವುದಾಗಲಿ, ದಿನದಿನವೇ ನಿಧಾನಕ್ಕೆ ಮರೆಯಾಗತೊಡಗಿತು. ಅವರಿಬ್ಬರಿಗೂ ತಮ್ಮ ಮನದ ಮಾತುಗಳನ್ನು ಇವನ ಮುಂದೆ ಹೇಳಲು ಸಂಕೋಚ, ಇವನಿಗೆ ಮೊದಲಿನ ಹಾಗೆ ಮನಬಿಚ್ಚಿ ಮಾತನಾಡಲು ಹಿಂಜರಿಕೆ.

ಇವರಿಗೋಸ್ಕರನೇ ಕಾಲೇಜಿಗೆ ಬರುತಿದ್ದ ಗೆಳೆಯನಿಗೆ ಇವರ ಸಂಗಡ ಈಗೀಗ ಬೇಡವೆನಿಸಲು ಶುರುವಿಟ್ಟಿತು. ಒಬ್ಬನೆ ಇರಲು ಬಯಸಿದ. ಒಂದು ಕಾಲದಲ್ಲಿ ತಮ್ಮ ಫ್ರೆಂಡ್‌ ಯಾವಾಗ ಬರ್ತಾನೋ ಎಂದು ಕಾಯುತ್ತಿದ್ದವರಲ್ಲಿ ಈಗ ಅವನು ಬಿಟ್ಟು ಹೋದರೆ ಸಾಕಪ್ಪಾ ಎನಿಸಲಾರಂಬಿಸಿತು. ಅವರ ನಡುವೆ ಕಾಣದ ಗೋಡೆಯೊಂದು ಬಹುಬೇಗನೆ, ಬಹು ಎತ್ತರಕ್ಕೆ ಬೆಳೆದು ನಿಂತಿತ್ತು. ಯಾರು ತಾನೇ., ಇನ್ನೆಷ್ಟು ದಿನ ಒಲ್ಲದ ಮನಸ್ಸಿನಿಂದ ಒಂದೇ ಕಡೆ ಇದ್ದಾರು ?

ಒಂದಾಗಿದ್ದ ಜೇನುಗೂಡು ಯಾರ ಕಡೆಗೂ ಬೊಟ್ಟು ಮಾಡಿ ದೂರದೆ,ದೋಷಿಸದೆ ಬರಿದಾಗಿ ಹೋಯಿತು. ಅವರ ಸ್ನೇಹ, ಪ್ರೀತಿಯೆಂಬ ಸುಂಟರಗಾಳಿಗೆ ಸಿಕ್ಕಿತೋ ಏನೋ ಇಂದು ಪತರಗುಟ್ಟಿ ಮುರಿದು ಬಿದ್ದಿದೆ…

-ಲಿಂಗರಾಜ

ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next