ಕಾಂಗ್ರೆಸ್ ತೆರೆ ಮರೆಯಲ್ಲಿ ಕಸರತ್ತು ಆರಂಭಿಸಿದ್ದು, ಜೆಡಿಎಸ್ ಕೂಡ ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲಲು ಮುಂದಾಗಿದೆ.
ಈ ಕುರಿತು ಈಗಾಗಲೇ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರು ಸಿಎಂ ಸಿದ್ದರಾಮಯ್ಯ ಬಳಿ ಪ್ರಸ್ತಾಪ ಮಂಡಿಸಿದ್ದು,
ಅವರೂ ಹಸಿರು ನಿಶಾನೆ ತೋರಿದ್ದಾರೆಂದು ಹೇಳಲಾಗಿದೆ.
Advertisement
ಇದೇ ಅಧಿವೇಶನದಲ್ಲಿಯೇ ಶಂಕರ ಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕೆ? ಎನ್ನುವುದರ ಕುರಿತು ಕಾಂಗ್ರೆಸ್ ಸದಸ್ಯರು ಸೋಮವಾರ ಸಭೆ ಸೇರಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆಯೆಂದು ತಿಳಿದು ಬಂದಿದೆ.ಕಳೆದ ವರ್ಷವೇ ಇಂಥದ್ದೊಂದು ಪ್ರಯತ್ನ ನಡೆದಿತ್ತಾದರೂ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಿನ ಹೊಂದಾಣಿಕೆ
ಕೊರತೆಯಿಂದ ಸಾಧ್ಯವಾಗಿರಲಿಲ್ಲ. ಜೆಡಿಎಸ್‌ನವರು ತಮ್ಮ ಪಕ್ಷಕ್ಕೆ ಸಭಾಪತಿ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದರಿಂದ ಕಷ್ಟವಾಯಿತು. ಆದರೆ, ಈ ಬಾರಿ ಅವಿಶ್ವಾಸ ನಿರ್ಣಯ ಮಂಡಿಸಿದರೆ ತಾವು ಬೆಂಬಲಿಸುವುದಾಗಿ ಜೆಡಿಎಸ್ ಕಡೆಯಿಂದ
ಒಪ್ಪಿಗೆ ನೀಡಲಾಗಿದೆ ಎಂದು ಹೇಳಲಾಗಿದೆ.
ಮಂತ್ರಿ ಸ್ಥಾನ ಕಳೆದುಕೊಂಡು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಿರಿಯ ಸದಸ್ಯ ಎಸ್. ಆರ್. ಪಾಟೀಲ್
ಅವರನ್ನು ಸಭಾಪತಿ ಮಾಡಿದರೆ, ಅವರಿಗೂ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿದೆ.ಡಿ.ಎಚ್. ಶಂಕರ ಮೂರ್ತಿ ಅವರ ಅವಧಿ 2018ರ ಜೂನ್ ವರೆಗೂ ಇದೆ. ವಿಧಾನ ಪತಿಷತ್ತಿನ ಒಟ್ಟು 75 ಸದಸ್ಯರ ಪೈಕಿ ಕಾಂಗ್ರೆಸ್ 31, ಬಿಜೆಪಿ 23, ಜೆಡಿಎಸ್ 12, ಪಕ್ಷೇತರರು 5 ಸದಸ್ಯರಿದ್ದಾರೆ. ಮೂರು ನಾಮ ನಿರ್ದೇಶಿತ ಸದಸ್ಯರ ಸ್ಥಾನ ಖಾಲಿ ಇವೆ. ಮತ್ತು ಒಂದು ಸಭಾಪತಿ ಸ್ಥಾನ. ಲೆಕ್ಕಾಚಾರ ಏನು?
ಖಾಲಿ ಇರುವ ಮೂರು ನಾಮ ನಿರ್ದೇಶಿತರನ್ನು ಕೂಡ ಸರ್ಕಾರವೇ ನೇಮಕ ಮಾಡಬೇಕಿರುವುದರಿಂದ ಆ ಸ್ಥಾನಗಳು ಕಾಂಗ್ರೆಸ್ ಪಟ್ಟಿಗೆ ಸೇರ್ಪಡೆಯಾಗುತ್ತವೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಒಟ್ಟಿಗೆ ಸೇರಿದರೆ 43ರ ಬಲವಾಗಲಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಸರಳ ಬಹುಮತಕ್ಕೆ 37 ಸದಸ್ಯರ ಬೆಂಬಲ ಅಗತ್ಯವಿದೆ. ಹೀಗಾಗಿ ಕಾಂಗ್ರೆಸ್‌ಗೆ ಸರಳ ಬಹುಮತ ದೊರೆಯಲಿದ್ದು, ಯಾವುದೇ ತೊಂದರೆಯಿಲ್ಲದೇ ಶಂಕರಮೂರ್ತಿ ಅವರನ್ನು ಪದಚ್ಯುತಗೊಳಿಸಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.