Advertisement

ರಾಜ್ಯದಲ್ಲಿ ಏಕರೂಪ ದರ ನಿಗದಿಯಿಂದ ಕಡಿವಾಣ ಸಾಧ್ಯ

01:51 AM Oct 25, 2021 | Team Udayavani |

ಉಡುಪಿ: ಭತ್ತ ಕಟಾವು ಯಂತ್ರಗಳ ದುಬಾರಿ ಬಾಡಿಗೆಗೆ ಕಡಿವಾಣ ಹಾಕಬೇಕಾದರೆ ರಾಜ್ಯದೆಲ್ಲೆಡೆ ಏಕರೂಪದ ಬಾಡಿಗೆ ಜಾರಿಗೆ ಬರಬೇಕು. ಈ ರೀತಿ ಮಾಡಿದರಷ್ಟೇ ಬಾಡಿಗೆ ದರ ನಿಯಂತ್ರಣ ಸಾಧ್ಯ ಎಂಬುದು ಅಧಿಕಾರಿಗಳ ಅಭಿಪ್ರಾಯ.
ಏಕರೂಪದ ದರ ಇಲ್ಲದಿರುವುದರಿಂದ ಈಗ ಕಟಾವು ಯಂತ್ರ ಮಾಲಕರು ಎಲ್ಲಿ ಹೆಚ್ಚು ಬಾಡಿಗೆ‌ ಸಿಗುತ್ತದೆಯೋ ಅಲ್ಲಿಗೆ ಹೋಗುತ್ತಿದ್ದಾರೆ. ಇದರಿಂದ ಕೆಲವೆಡೆ ಸಕಾಲದಲ್ಲಿ ಯಂತ್ರಗಳು ಸಿಗುತ್ತಿಲ್ಲ. ಇದರಿಂದ ಕೃಷಿಕರಿಗೆ ಸಮಸ್ಯೆಯಾಗಿದೆ.

Advertisement

ಇಂತಹ ಒಂದು ಪ್ರಸ್ತಾವವನ್ನು ಈಗಾಗಲೇ ಸರಕಾರದ ಮುಂದಿಡಲಾಗಿರುವುದರಿಂದ ಕೃಷಿಗೆ ಇನ್ನಷ್ಟು ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಸರಕಾರ ಬೇಗನೆ ಕ್ರಮ ಕೈಗೊಳ್ಳುವುದು ಅಗತ್ಯ. ಹೆಚ್ಚಿನ ಕಟಾವು ಯಂತ್ರಗಳನ್ನು ಸರಕಾರದ ಸಬ್ಸಿಡಿಯಲ್ಲಿಯೇ ಖರೀದಿ ಸಿರುತ್ತಾರೆ. ಆದುದರಿಂದ ಬಾಡಿಗೆ ದರದ ಮೇಲೆ ನಿಯಂತ್ರಣ ಹೇರುವುದು ಕಷ್ಟವೇನಲ್ಲ. ಬಸ್‌ ಪ್ರಯಾಣ ದರದ ಮೇಲೆ ನಿಯಂತ್ರಣ ಇರುವಂತೆ ಇಲ್ಲಿಯೂ ಸರಕಾರಿ ವ್ಯವಸ್ಥೆಯಿಂದ ಕಾರ್ಯನಿರ್ವಹಣೆ ಸಾಧ್ಯವಿದೆ ಎಂಬುದು ಕೃಷಿಕರ ಅಭಿಪ್ರಾಯವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿಯವರಿಗೆ ಏಕರೂಪದ ದರ ನಿಗದಿಪಡಿಸಿದರೆ ಹೆಚ್ಚು ದರ ನೀಡುವ ಜಿಲ್ಲೆಗಳತ್ತ ಕಟಾವು ಯಂತ್ರ ಮಾಲಕರು ತೆರಳುವ ಸಾಧ್ಯತೆಗಳಿರುತ್ತವೆ. ರಾಜ್ಯ ಮಟ್ಟದಲ್ಲಿ ಭತ್ತ ಕಟಾವು ಬಗ್ಗೆ ಏಕರೂಪದ ದರ ನಿಗದಿಪಡಿಸಿದರೆ ಸಮಸ್ಯೆಗೆ ಪರಿಹಾರ ಸಾಧ್ಯ. ಈ ಬಗ್ಗೆ ಈಗಾಗಲೇ ರಾಜ್ಯಮಟ್ಟದ ಸಭೆಗಳಲ್ಲಿಯೂ ಪ್ರಸ್ತಾವಿಸಲಾಗಿದೆ.
-ಡಾ| ವೈ. ನವೀನ್‌ ಭಟ್‌, ಉಡುಪಿ ಜಿ.ಪಂ. ಸಿಇಒ

ಇದನ್ನೂ ಓದಿ:ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಏಕಕಾಲದಲ್ಲಿ ಭತ್ತ ಕಟಾವು ಪ್ರಕ್ರಿಯೆ ಬರುವ ಕಾರಣದಿಂದಾಗಿ ಕಟಾವು ಯಂತ್ರಗಳ ಅಭಾವ ಕಂಡುಬರುತ್ತಿದೆ. ವಿವಿಧೆಡೆಗಳಿಂದ ಯಂತ್ರಗಳು ಆಗಮಿಸುತ್ತಿದ್ದು, ಹೆಚ್ಚುವರಿ ಬಾಡಿಗೆ ದರ ವಸೂಲಿಯ ದೂರು ಬಂದರೆ ಕ್ರಮ ತೆಗೆದುಕೊಳ್ಳಲಾಗುವುದು. ಸಬ್ಸಿಡಿ ದರದಲ್ಲಿ ರೈತರಿಗೆ ಇಂಧನ ಒದಗಿಸುವ ಬಗ್ಗೆ ಮನವಿಗಳು ಬಂದರೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು.
-ಡಾ| ಕುಮಾರ್‌, ದ.ಕ. ಜಿ.ಪಂ. ಸಿಇಒ

Advertisement

ಖಾಸಗಿ ಯಂತ್ರಗಳ ಬಗ್ಗೆ ಸ್ಥಳೀಯ ರೈತ ಸಂಪರ್ಕ ಕೇಂದ್ರ ಗಳಿಗೆ ಮಾಹಿತಿ ಲಭ್ಯವಾದರೆ ಉತ್ತಮ. ಹೆಚ್ಚಿನ ದರ ವಸೂಲಿ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ರೈತರು ಎಫ್ಪಿಒ ಮಾಡಿ 5ರಿಂದ 6 ಯಂತ್ರಗಳನ್ನು ಖರೀದಿಸಿ ಆಯಾ ವಲಯ ವ್ಯಾಪ್ತಿಯಲ್ಲಿ ಭತ್ತ ಕಟಾವು ಕಾರ್ಯಗಳನ್ನೂ ಮಾಡಬಹುದು. ಹೆಚ್ಚು ದರ ತೆಗೆದುಕೊಳ್ಳುವ ಬಗ್ಗೆ ದೂರು ಬಂದರೆ ಮೇಲಧಿ ಕಾರಿಗಳಿಗೆ ತಿಳಿಸಲಾಗುವುದು.
– ಅಬ್ದುಲ್‌ ಬಷೀರ್‌, ಕೃಷಿ ಅಧಿಕಾರಿ,
ಮೂಲ್ಕಿ ಹೋಬಳಿ

ಹೊರ ರಾಜ್ಯ ಅಥವಾ ಜಿಲ್ಲೆಗಳಿಂದ ಆಗಮಿಸುವ ಭತ್ತ ಕಟಾವು ಯಂತ್ರಗಳನ್ನು ಜಿಲ್ಲೆಯ ಆಯಾ ಹೋಬಳಿಗೆ ವಿಂಗಡನೆ ಮಾಡಿ ಕಟಾವು ಪ್ರಕ್ರಿಯೆ ನಡೆಸಬೇಕು. ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯ ಮೂಲಕ ಯಂತ್ರಗಳ ಹಂಚಿಕೆಯಾದರೆ ಇದು ಸಾಧ್ಯವಾಗಬಹುದು. ಯಂತ್ರಗಳನ್ನು ಮೊದಲೇ ನೋಂದಣಿ ಮಾಡಿಸಿಕೊಂಡರೆ ಹೆಚ್ಚುವರಿ ದರ ಪಡೆಯುವವರನ್ನು ಗುರುತಿಸಿ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿದೆ.
– ರಮೇಶ್‌ ಉಳ್ಳಾಗಡ್ಡಿ, ಸಹಾಯಕ ಕೃಷಿ ಅಧಿಕಾರಿ,
ಕಾರ್ಕಳ ಹೋಬಳಿ ರೈತ ಸಂಪರ್ಕ ಕೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next