Advertisement

ಬಾದಾಮಿಗೆ ಭಾಗ್ಯ; ಜಿಲ್ಲೆಗಿಲ್ಲ ಸೌಭಾಗ್ಯ!

09:36 AM Jan 11, 2019 | Team Udayavani |

ಬಾಗಲಕೋಟೆ: ಜಿಲ್ಲೆಯ ಬಾದಾಮಿ ವಿಧಾನಸಭೆ ಕ್ಷೇತ್ರಕ್ಕೆ ಈಗ ಅನುದಾನದ ಭಾಗ್ಯ ದೊರೆಯುತ್ತಿದೆ. ಆದರೆ, ಇತರೆ ಕ್ಷೇತ್ರಗಳಿಗೆ ಬಾದಾಮಿಗೆ ಸಿಕ್ಕಷ್ಟು ಅನುದಾನ, ಅಭಿವೃದ್ಧಿಯ ಆದ್ಯತೆ ಸರ್ಕಾರದಿಂದ ದೊರೆಯುತ್ತಿಲ್ಲ ಎಂಬ ಅಸಮಾಧಾನ ಮೂಡಿದೆ.

Advertisement

ಹೌದು, ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಬಾದಾಮಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಬಾದಾಮಿ, ಈಗ ಮಾಜಿ ಸಿಎಂ ಪ್ರತಿನಿಧಿಸುವ ಕ್ಷೇತ್ರ ಎಂಬ ಪ್ರತಿಷ್ಠೆ ಪಡೆದಿದೆ. ಹೀಗಾಗಿ ಸಿದ್ದರಾಮಯ್ಯ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದು, ಸರ್ಕಾರದ ವಿವಿಧ ಇಲಾಖೆಗಳಡಿ ಸಾಮಾನ್ಯವಾಗಿ ಬರುವ ಅನುದಾನದ ಜತೆಗೆ ವಿಶೇಷ ಪ್ರತ್ಯೇಕ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮೀಣ ರಸ್ತೆಗಳಿಗೆ 10 ಕೋಟಿ: ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಯಿಂದ ಪ್ರತಿವರ್ಷ ಗ್ರಾಮೀಣ ರಸ್ತೆಗಳ ದುರಸ್ತಿ, ನಿರ್ವಹಣೆ ಹಾಗೂ ತುರ್ತು ಕಾಮಗಾರಿ (3054) ಯೋಜನೆಯಡಿ ಅನುದಾನ ಕೊಡುತ್ತದೆ. ಇದು ಇಡೀ ಜಿಲ್ಲೆಗೆ 4ರಿಂದ 5 ಕೋಟಿ ಮೀರುವುದಿಲ್ಲ. ಅಷ್ಟು ಬಿಟ್ಟರೆ ಪ್ರತ್ಯೇಕ ಅನುದಾನ ನೀಡಿದ ಉದಾಹರಣೆ ಇಲ್ಲಿಯವರೆಗೆ ಇಲ್ಲ. ಆದರೆ, ಬಾದಾಮಿ ಒಂದೇ ಕ್ಷೇತ್ರಕ್ಕೆ ಈ ಯೋಜನೆಯಡಿ 10 ಕೋಟಿ ಮಂಜೂರಾಗಿದ್ದು, ಆ ಕ್ಷೇತ್ರದ ಗ್ರಾಮೀಣ ರಸ್ತೆಗಳ ಭಾಗ್ಯ ತೆರೆದಿದೆ. 2018-19ನೇ ಸಾಲಿನಲ್ಲಿ ಇದೇ ಯೋಜನೆಗೆ ಜಿಲ್ಲೆಗೆ ಬಂದಿದ್ದು ಕೇವಲ 422.05 ಲಕ್ಷ (4.22 ಕೋಟಿ)ರೂ ಮಾತ್ರ. ಆದರೆ, ಈಗ ಬಾದಾಮಿಗೆ ಹೆಚ್ಚುವರಿಯಾಗಿ 10 ಕೋಟಿ ಬಂದಿದೆ. ನಗರೋತ್ಥಾನ ಯೋಜನೆಯಡಿ ಬಾದಾಮಿ, ಗುಳೇದಗುಡ್ಡ ಪುರಸಭೆ ಹಾಗೂ ಕೆರೂರ ಪಟ್ಟಣ ಪಂಚಾಯಿತಿಗೆ ಒಟ್ಟು 5 ಕೋಟಿ ಹೆಚ್ಚುವರಿ ಅನುದಾನ ಮಂಜೂರಾಗಿದೆ.

5 ಸಾವಿರ ಕಿ.ಮೀ ರಸ್ತೆಗೆ 4 ಕೋಟಿ: ಜಿಲ್ಲೆಯ ಆರು ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 5673.05 ಕಿ.ಮೀ ಗ್ರಾಮೀಣ ರಸ್ತೆಗಳಿವೆ. ಅದರಲ್ಲಿ ಅತಿ ಹೆಚ್ಚು ಗ್ರಾಮೀಣ ರಸ್ತೆಗಳಿರುವುದು ಹುನಗುಂದ ತಾಲೂಕಿನಲ್ಲಿ. ಈ ಒಟ್ಟು ರಸ್ತೆಗಳ ಅಭಿವೃದ್ಧಿಗೆ ಸರ್ಕಾರ, ವಾರ್ಷಿಕ 3ರಿಂದ 4 ಕೋಟಿ ಅನುದಾನ ಮಾತ್ರ ಕೊಡುತ್ತಿದೆ. ಈ ವರ್ಷ ಜಿಲ್ಲೆಗೆ ಇದಕ್ಕಾಗಿ 422.30 ಲಕ್ಷ (4.22 ಕೋಟಿ) ಅನುದಾನವನ್ನು ಕಳೆದ ಆ. 10ರಂದು ಬಿಡುಗಡೆಗೆ ಆದೇಶ ಮಾಡಿದೆ. ಈ ಅನುದಾನದಲ್ಲಿ ಸರ್ಕಾರದ ನೀತಿ- ನಿಯಮ ಹಾಗೂ ಟೆಂಡರ್‌ ಪ್ರಕ್ರಿಯೆಗೆ ಶೇ. 5ರಷ್ಟು ಅನುದಾನ ಖರ್ಚು ಆಗುತ್ತದೆ. ಉಳಿದಂತೆ ಗುಂಡಿ ಬಿದ್ದ ರಸ್ತೆಗಳಿಗೆ ಮಣ್ಣು, ಖಡಿ ಅಥವಾ ದುರಸ್ತಿ ಮಾಡುವುದು ಕಷ್ಟದ ಕೆಲಸ.

ಯಾವ ರಸ್ತೆಗೆ ಎಷ್ಟು ಹಣ: ಮಣ್ಣಿನ ಪ್ರತಿ ಕಿ.ಮೀ ರಸ್ತೆಗೆ 5,600 ರೂ, ಜಲ್ಲಿ ರಸ್ತೆಗೆ 6 ಸಾವಿರ, ಡಾಂಬರ್‌ ರಸ್ತೆಗೆ ರೂ. 11 ಸಾವಿರ ನಿಗದಿ ಮಾಡಿದೆ. ಒಂದು ಕಿ.ಮೀ. ಗೆ ಅನುದಾನ ಯಾವುದಕ್ಕೂ ಸಾಲದು. ಹೀಗಾಗಿ ಗ್ರಾಮೀಣ ರಸ್ತೆಗಳು ಇಂದಿಗೂ ಅಭಿವೃದ್ಧಿ ಅಥವಾ ಡಾಂಬರ್‌ ಕಂಡಿಲ್ಲ ಎಂಬ ಆರೋಪ ಸಾಮಾನ್ಯವಾಗಿ ಕೇಳಿ ಬರುತ್ತಿದೆ.

Advertisement

ಇತರೆ ಕ್ಷೇತ್ರಕ್ಕಿಲ್ಲ ಹೆಚ್ಚುವರಿ ಅನುದಾನ: ಬಾದಾಮಿ, ಕೆರೂರ ಪಟ್ಟಣ ಸಹಿತ 18 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆಗೆ 227.80 ಕೋಟಿ, ಬನಶಂಕರಿ ಹೊಂಡಕ್ಕೆ ನೀರು ತುಂಬಿಸಲು 66 ಲಕ್ಷ, ಗ್ರಾಮೀಣ ರಸ್ತೆಗಳಿಗೆ 10 ಕೋಟಿ, ನಗರೋತ್ಥಾನದಡಿ 5 ಕೋಟಿ, ಲೋಕೋಪಯೋಗಿ ಇಲಾಖೆ ರಸ್ತೆಗಳ ಅಭಿವೃದ್ಧಿಗೆ 65 ಕೋಟಿ, 21 ಪ್ರಾಥಮಿಕ ಶಾಲೆಗಳ ಕಟ್ಟಡಕ್ಕಾಗಿ 2.09 ಕೋಟಿ, ಗುಳೇದಗುಡ್ಡದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡಕ್ಕೆ 1 ಕೋಟಿ, ಬಾದಾಮಿ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡಕ್ಕೆ 55 ಲಕ್ಷ ಹೀಗೆ ಒಟ್ಟು 333.81 ಕೋಟಿಗೂ ಅಧಿಕ ಅನುದಾನ ಬಾದಾಮಿ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಬಂದಿದೆ. ಆದರೆ, ಜಿಲ್ಲೆಯ ಇತರೆ ಕ್ಷೇತ್ರಗಳಿಗೆ ಇಷ್ಟು ಅನುದಾನ ಬಂದಿಲ್ಲ.

ಸಮಗ್ರತೆಗೆ ಪ್ರಯತ್ನಿಸಲಿ: ರಾಜಕೀಯ ಏನೇ ಇದ್ದರೂ ಸಿದ್ದರಾಮಯ್ಯ ಈಗ ಜಿಲ್ಲೆಯ ಶಾಸಕರು. ಹೀಗಾಗಿ ಮುಳುಗಡೆ ಜಿಲ್ಲೆಯ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸುವ, ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೂ ವಿಶೇಷ ಅನುದಾನ ಕೊಡಿಸುವ ನಿಟ್ಟಿನಲ್ಲಿ ಅವರು ಮುಂದಾಗಬೇಕು ಎಂಬುದು ಜನರ ಬಯಕೆ. ತಮ್ಮ ಕ್ಷೇತ್ರಕ್ಕೆ ಸಾಮಾನ್ಯವಾಗಿ ಬರುವ ಅನುದಾನದ ಹೊರತು, ವಿಶೇಷ ಅನುದಾನ ತರುವಲ್ಲಿ ಪ್ರಯತ್ನಿಸುತ್ತಿದ್ದಾರೆ. ಹಾಗೆಯೇ ಉಳಿದ ಆರೂ ಕ್ಷೇತ್ರಗಳತ್ತಲೂ ಗಮನ ಹರಿಸುವ ಒತ್ತಾಯ ಕೇಳಿ ಬರುತ್ತಿದೆ.

ಬಾದಾಮಿ ಕ್ಷೇತ್ರಕ್ಕೆ ಕೇವಲ ಏಳು ತಿಂಗಳಲ್ಲಿ 333.81 ಕೋಟಿಗೂ ಅಧಿಕ ಅನುದಾನ ಬಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಕ್ಷೇತ್ರ ಇದಾಗಿದ್ದು, ಅವರ ವಿಶೇಷ ಆದ್ಯತೆ, ಕಾಳಜಿ ಮೇರೆಗೆ ಅನುದಾನ ಬಂದಿದೆ. ಇದರಿಂದ ನಮ್ಮ ಕ್ಷೇತ್ರವೇ ಅಭಿವೃದ್ಧಿಯಾಗುತ್ತದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಇದೇ ಮೊದಲ ಬಾರಿಗೆ 10 ಕೋಟಿ ಅನುದಾನ ಬಂದಿದೆ.
ಹೊಳೆಬಸು ಶೆಟ್ಟರ,
ಕಾಂಗ್ರೆಸ್‌ ಮುಖಂಡ, ಸಿದ್ದರಾಮಯ್ಯ ಆಪ್ತ

Advertisement

Udayavani is now on Telegram. Click here to join our channel and stay updated with the latest news.

Next