“ವ್ಯಕ್ತಿಗಳನ್ನು ಯಾವತ್ತೂ ನಂಬಬೇಡಿ, ಅವರ ವ್ಯಾಲ್ಯೂ ಯಾವತ್ ಬೇಕಾದ್ರು ಡೌನ್ ಆಗಬಹುದು, ಅದೇ ದುಡ್ಡಿನ ವ್ಯಾಲ್ಯೂ ಎಲ್ಲಾ ಸಮಯದಲ್ಲೂ ಒಂದೇ ರೀತಿ ಇರುತ್ತೆ. ಪ್ರೀತಿಗಿಂತ ದುಡ್ಡು ಮುಖ್ಯ ಕಣ್ರೀ …’ ಪಕ್ಕಾ ಪ್ರಾಕ್ಟಿಕಲ್ ಆಗಿ ಯೋಚಿಸಿ, ಪ್ರೀತಿಯನ್ನು ಧಿಕ್ಕರಿಸಿ ಆತ ಹೋಗುತ್ತಾನೆ. ಆ ಸಂದರ್ಭಕ್ಕೆ ಆತನಿಗೆ ಆ ಮಾತು, ಅವನ ಸಿದ್ಧಾಂತ ಎಲ್ಲವೂ ಸರಿ ಎನಿಸುತ್ತದೆ. ಅದಕ್ಕೆ ಕಾರಣ ಆತನಿಗೆ ಬಯಸದೇ ಬಂದ ಭಾಗ್ಯ.
“ಆ ಭಾಗ್ಯ’ವನ್ನು ನಂಬಿಕೊಂಡು ಆತ ಕನಸು ಕಾಣುತ್ತಾನೆ. ಇನ್ನೇನು ಎಲ್ಲವೂ ಅಂದುಕೊಂಡಂತೆ ಆಗುತ್ತಿರುವ ಹೊತ್ತಿಗೆ ಆತ ಟ್ರ್ಯಾಕ್ ಬದಲಿಸುತ್ತಾನೆ. ಹೀಗೆ ವಿಕಾಸ್ ಅಲಿಯಾಸ್ ವಿಕ್ಕಿಯ ಜೀವನ ಚಕ್ರವನ್ನು ನಿರ್ದೇಶಕ ಸಿಕ್ಕಾಪಟ್ಟೆ ತಿರುಗಿಸಿಬಿಟ್ಟಿದ್ದಾರೆ. ಈ ತಿರುಗಾಟದಲ್ಲಿ ನಾಯಕನಿಗೆ ಜೀವನ ದರ್ಶನವಾಗುತ್ತದೆ. “ಜಲ್ಸಾ’ದಲ್ಲಿ ಏನಿದೆ ಎಂದರೆ ಗೊತ್ತಿಲ್ಲದಂತೆಯೇ ಕಾಡುವ ಲವ್‌ಸ್ಟೋರಿ ಇದೆ. ಆ ಲವ್‌ಸ್ಟೋರಿಯನ್ನು ಕಲರ್‌ಫುಲ್ ಆಗಿ ತೋರಿಸುವ ಪ್ರಯತ್ನ ಕೂಡಾ ಮಾಡಲಾಗಿದೆ.
ಒಂದು ಕಡೆ ಪ್ರೀತಿ ಮತ್ತೂಂದು ಕಡೆ ಕಾಸು. ಎರಡರ ಮಧ್ಯದ ಟಾಸ್‌ನಲ್ಲಿ ಅಂತಿಮವಾಗಿ ನಾಯಕ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆಂಬ ಲೈನ್‌ನೊಂದಿಗೆ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಮೊದಲೇ ಹೇಳಿದಂತೆ ಇಲ್ಲಿ ಗೊತ್ತಿಲ್ಲದೇ ಕಾಡುವ, ಆವರಿಸಿಕೊಳ್ಳುವ ಪ್ರೀತಿ ಎಳೆಯನ್ನಿಡಲಾಗಿದೆ. ಲಾಜಿಕ್‌ನ ಹಂಗಿಲ್ಲದೇ ಸಾಗುವ ಈ ಸಿನಿಮಾದಲ್ಲಿ ಯೂತ್ ಅನ್ನು ಟಾರ್ಗೆಟ್ ಮಾಡಲಾಗಿದೆ.
ಹಾಗಂತ ಇದೊಂದು ಹೊಸ ಪ್ರಯತ್ನದ ಸಿನಿಮಾ ಎನ್ನುವಂತಿಲ್ಲ. ಹೊಸ ನಾಯಕನ ಲಾಂಚ್ ಅನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಸಿನಿಮಾವಿದು. ಹಾಗಾಗಿ, ಪಡ್ಡೆಗಳ ಮನವೊಲಿಸುವ ಡೈಲಾಗ್, ಮಾಸ್ ಪ್ರಿಯರ ಮೈ ನವಿರೇಳಿಸುವ ಫೈಟ್, ಪ್ರೇಮಿಗಳು ಕನಸಿಗೆ ಜಾರುವ ಡ್ರೀಮ್ ಸಾಂಗ್ … ಎಲ್ಲವನ್ನು ಅಚ್ಚುಕಟ್ಟಾಗಿ ಇಡಲಾಗಿದೆ. ಇದರ ಜೊತೆ ಜೊತೆಗೆ ಅಲ್ಲಲ್ಲಿ ಕಥೆಗಳ ತುಣುಕು ನಿಮಗೆ ಕಾಣಸಿಗುತ್ತದೆ.
ದುಡ್ಡೇ ದೊಡ್ಡಪ್ಪ ಆದಾಗ ಪ್ರೀತಿ ಹೇಗೆ ತಾತ್ಸಾರವಾಗಿ ಕಾಣುತ್ತದೆ ಮತ್ತು ಪ್ರೀತಿಯೇ ಜೀವನ ಎಂದಾಗ ಮನುಷ್ಯನ ಮನಸ್ಥಿತಿ ಹೇಗಾಗುತ್ತದೆಂಬ ಎರಡು ಅಂಶಗಳ ಜೊತೆ ಸಾಗುವ ಈ ಸಿನಿಮಾದಲ್ಲಿ ನಿರ್ದೇಶಕರು ಕಮರ್ಷಿಯಲ್ ಆಗಿ ಎಲ್ಲವನ್ನು ಬ್ಯಾಲೆನ್ಸ್ ಮಾಡಲು ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ. ಆದರೆ, ಚಿತ್ರದುದ್ದಕ್ಕೂ ಆಗಾಗ ಕಾಣಸಿಗುವ, “ಗುಂಡು ಪಾರ್ಟಿ’ಗಳಿಗೆ ಬುಲೆಟ್ ಪ್ರಕಾಶ್ “ಹನಿಮೂನ್ ಎಕ್ಸ್‌ಪ್ರೆಸ್’, “ಟಿವಿ’ ಕಾರ್ಯಕ್ರಮಗಳಂತಹ ದೃಶ್ಯಗಳನ್ನು ಬದಿಗಿಟ್ಟು ಕಥೆಯನ್ನು ಮತ್ತಷ್ಟು ಬೆಳೆಸುವ, ಲವ್‌ಸ್ಟೋರಿಯನ್ನು ಮತ್ತಷ್ಟು ಗಂಭೀರವಾಗಿ ಹೇಳುವ ಅವಕಾಶ ನಿರ್ದೇಶಕರಿಗಿತ್ತು.
ಆದರೆ ಸಿನಿಮಾ ಮುಗಿಯುವ ಹೊತ್ತಿಗಷ್ಟೇ ಅವರು “ಸೀರಿಯಸ್’ ಆಗಿದ್ದಾರೆ. ಕೇವಲ ಮಜಾ ಬಯಸುವವರಿಗೆ “ಜಲ್ಸಾ’ ಹೆಚ್ಚು ಮೋಸ ಮಾಡೋದಿಲ್ಲ. ಫನ್ನಿ ಡೈಲಾಗ್, ರೋಡ್ ಪಾರ್ಟಿ, ಫ್ರೆಂಡ್ಸ್ ಕಿರಿಕ್‌ಗಳೆಲ್ಲವೂ ಮಜಾ ನೀಡಬಹುದು. ಚಿತ್ರದಲ್ಲಿ ಬರುವ ವೈರೈಟಿ ಹಾಡುಗಳು ಇಷ್ಟವಾಗುತ್ತವೆ. ನಾಯಕ ನಿರಂಜನ್ ಒಡೆಯರ್ ಮೊದಲ ಸಿನಿಮಾದಲ್ಲಿ ಭರವಸೆ ಮೂಡಿಸಿದ್ದಾರೆ.
ಲವರ್ ಬಾಯ್ ಆಗಿ, ಆ್ಯಕ್ಷನ್ ಹೀರೋ ಆಗಿ ಇಷ್ಟವಾಗುತ್ತಾರೆ. ಅವರ ಧ್ವನಿ ಕೂಡಾ ಅವರಿಗೆ ಪ್ಲಸ್ ಪಾಯಿಂಟ್ ಎನ್ನಬಹುದು. ನಾಯಕಿ ಆಕಾಂಕ್ಷಾ ಸಿಡುಕಿನ ಸಿಂಗಾರಿಯಾಗಿ ಇಷ್ಟವಾಗುತ್ತಾರೆ. ಉಳಿದಂತೆ ಅನುಷಾ, ಶೋಭರಾಜ್, ರಾಜೇಶ್ ನಟರಂಗ, ಬುಲೆಟ್ ಪ್ರಕಾಶ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ವೀರ್‌ಸಮರ್ಥ್ ಸಂಗೀತದ ಮೂರು ಹಾಡುಗಳು ಇಷ್ಟವಾಗುತ್ತವೆ. ಸೆಲ್ವಂ ಅವರ ಛಾಯಾಗ್ರಹಣ ಚಿತ್ರಕ್ಕೆ ಪೂರಕ.
ಚಿತ್ರ: ಜಲ್ಸಾ
ನಿರ್ಮಾಣ: ಎನ್. ಸರೋಜಾದೇವಿ -ಸಿ.ಬಸವರಾಜು
ನಿರ್ದೇಶನ: ಕಾಂತ ಕನ್ನಲ್ಲಿ
ತಾರಾಗಣ: ನಿರಂಜನ್ ಒಡೆಯರ್, ಆಕಾಂಕ್ಷಾ, ಅನುಷಾ, ಶೋಭರಾಜ್, ರಾಜೇಶ್ ನಟರಂಗ, ಬುಲೆಟ್ ಪ್ರಕಾಶ್ ಮತ್ತಿತರರು.
* ರವಿಪ್ರಕಾಶ್ ರೈ