Advertisement

ಶ್ರೀಗಳ ಸಮ್ಮುಖದಲ್ಲೇ ನಾಯಕರ ಪರಸ್ಪರ ವಾಕ್ಸಮರ

11:07 PM Jun 27, 2023 | Team Udayavani |

ಬೆಂಗಳೂರು: ಇಷ್ಟು ದಿನ ಬೇರೆ-ಬೇರೆ ವೇದಿಕೆಗಳಲ್ಲಿ ಒಬ್ಬರಿಗೊಬ್ಬರು ಪರಸ್ಪರ ವಾಕ್ಸಮರದ ಬಾಣಗಳನ್ನು ಬಿಡುತ್ತಾ ರಾಜಕೀಯ ವಿದ್ಯಮಾನಗಳ ಕೇಂದ್ರಬಿಂದುವಾಗುತ್ತಿದ್ದ ಹಾಲಿ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಬಿಜೆಪಿ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಮಂಗಳವಾರ ಒಕ್ಕಲಿಗ ಸಮುದಾಯದ ಸ್ವಾಮೀಜಿ ನಿರ್ಮಲಾನಂದನಾಥ ಶ್ರೀ ಅವರ ಸಮ್ಮುಖದಲ್ಲೇ ವೇದಿಕೆ ಭಾಷಣದಲ್ಲಿ ಪರಸ್ಪರ ತಿವಿದುಕೊಂಡು ಮತ್ತೆ ರಾಜಕೀಯ ಚರ್ಚೆಗೆ ಗ್ರಾಸವಾದರು.

Advertisement

ಈ ಹಿಂದೆ ಡಿ.ಕೆ. ಶಿವಕುಮಾರ್‌ ಅವರು, ಅಶ್ವತ್ಥನಾರಾಯಣ ಅವರಿಗೂ ರಾಮನಗರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ್ದರು. ಇತ್ತೀಚೆಗಷ್ಟೇ ಬೆಂಗಳೂರು ಉಸ್ತುವಾರಿ ವಹಿಸಿಕೊಂಡ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಅಶ್ವತ್ಥನಾರಾಯಣ, ಬೆಂಗಳೂರಿಗೂ ನಿನಗೂ ಏನಪ್ಪಾ ಸಂಬಂಧ? ಎಂದು ಕುಟುಕಿ, ವಾಗ್ಯುದ್ಧಕ್ಕೆ ಕಾರಣರಾಗಿದ್ದರು.

ಆ ಹಿನ್ನೆಲೆಯಲ್ಲಿ ಮಂಗಳವಾರ ವೇದಿಕೆ ಭಾಷಣದ ಮಧ್ಯೆ ವಿಷಯ ಪ್ರಸ್ತಾಪ ಮಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಅಶ್ವತ್ಥನಾರಾಯಣ ಅವರು ನನಗೂ ಬೆಂಗಳೂರಿಗೂ ಏನು ಸಂಬಂಧ ಅಂತ ಕೇಳಿದ್ದರು. ನಮ್ಮಪ್ಪನ ಹೆಸರು ಕೆಂಪೇಗೌಡ. ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್‌ ಅವರ ಜಮೀನು ಎಷ್ಟೆಷ್ಟು ಎಕರೆ ಇತ್ತು, ಎಲ್ಲಿತ್ತು ಎಂಬ ಇತಿಹಾಸನ್ನು ಅವರು ಮೊದಲು ತಿಳಿದುಕೊಳ್ಳಬೇಕು’ ಎಂದು ತಿವಿದರು.

ನಾನು 6ನೇ ವಯಸ್ಸಿಗೆ ಶಿಕ್ಷಣ ಪಡೆಯಲು ನಮ್ಮೂರಿನಿಂದ ಬೆಂಗಳೂರಿಗೆ ಬಂದೆ. ಇಲ್ಲಿನ ರಾಜಾಜಿನಗರದ ಎನ್‌ಪಿಎಸ್‌ ಶಾಲೆಯಲ್ಲಿ (ನ್ಯಾಷನಲ್‌ ಪಬ್ಲಿಕ್‌ ಶಾಲೆ) ನಾನು ಓದಿದವನು. ನನಗೂ ಬೆಂಗಳೂರಿಗೂ ಇರುವ ಸಂಬಂಧದ ಬಗ್ಗೆ ಅಶ್ವತ್ಥನಾರಾಯಣಗೆ ಗೊತ್ತಿಲ್ಲ. ಅದಕ್ಕೆ ಅವರು ಮಾತನಾಡುತ್ತಾರೆ. ಪಾಪ ಅವರು ಮಾತನಾಡಿದ್ದು ತಪ್ಪಲ್ಲ ಆದರೆ ಅವರಿಗೆ ನನ್ನ ಇತಿಹಾಸ ಗೊತ್ತಿಲ್ಲ. ಇದು ಇರಲಿ, ರಾಜಕೀಯದಲ್ಲಿ ಇದೆಲ್ಲ ಇದದ್ದೇ ಎಂದರು.

ನನ್ನ ಹುಟ್ಟು ಹೆಸರು ಕೆಂಪೇಗೌಡ
ಇದಾದ ಬಳಿಕ ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ, ನಾನು ಡಿ.ಕೆ.ಶಿವಕುಮಾರ್‌ ಅವರನ್ನು ಪ್ರಶ್ನೆ ಮಾಡಲು ಕಾರಣವಿದೆ. ಅವರು ರಾಮನಗರಕ್ಕೂ ನನಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದರು. ರಾಮನಗರ ನನ್ನ ಪೂರ್ವಿಕರ ಕರ್ಮಭೂಮಿ. ನನ್ನ ಹುಟ್ಟು ಹೆಸರು ಕೆಂಪೇಗೌಡ. ಮುಂದಿನ ದಿನಗಳಲ್ಲಿ ಎಲ್ಲ ಇತಿಹಾಸ ಗೊತ್ತಾಗಲಿದೆ. ನನ್ನ ಕೊಡುಗೆ ಏನು ಎಂದು ಕೆಲಸ ಮಾತನಾಡಲಿದೆ’ ಎಂದು ಎದಿರೇಟು ನೀಡಿದರು. ನಾನು ವ್ಯಕ್ತಿಗತವಾಗಿ ಮಾತನಾಡಿಲ್ಲ. ನಾನು ದ್ವೇಷ ಮಾತನಾಡೋಕೆ ಬಂದಿಲ್ಲ. ನಾಡಿನ ಒಳಿತು ಮಾತನಾಡಬೇಕು ಎಂದು ಬಂದಿದ್ದೇವೆ. ಅವರು ಹೇಳಿದ್ದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದೇನೆ ಅಷ್ಟೇ. ಇದರಲ್ಲಿ ಯಾವುದೇ ವೈಮನಸ್ಸು ಇಲ್ಲ. ದ್ವೇಷ ಬೆಳೆಸಬೇಡಿ ಎಂದು ಗುರು ಹಿರಿಯರು ಯಾವಾಗಲೂ ಹೇಳುತ್ತಾರೆ. ನಾನು ಡಿ.ಕೆ.ಶಿವಕುಮಾರ್‌ ಅವರಿಗೆ ಶುಭ ಕೋರುತ್ತೇನೆ’ ಎಂದರು.

Advertisement

ಶ್ರೀಗಳಿಂದ ಹಿತ ನುಡಿ
ಕೆಂಪೇಗೌಡ ಜಯಂತಿಯ ವೇದಿಕೆ ಮೇಲೆ ಒಕ್ಕಲಿಗ ಮುಖಂಡರು ಪರಸ್ಪರ ಮಾತಿನ ವರಸೆ ಮುಂದುವರಿಸಿದ ಬೆನ್ನಲ್ಲೇ ಮಧ್ಯ ಪ್ರವೇಶ ಮಾಡಿದ ನಿರ್ಮಲಾನಂದನಾಥ ಸ್ವಾಮೀಜಿ, ಜಟಾಪಟಿ ಬೇಡ. ನಾಡಿನ ಅಭಿವೃದ್ದಿಯ ವಿಚಾರದಲ್ಲಿ ಪರಸ್ಪರ ಸಹಕಾರವಿರಲಿ. ದ್ವೇಷ ಬೆಳೆಸಿಕೊಳ್ಳಬೇಡಿ ಎಂದು ಇಬ್ಬರಿಗೂ ಕಿವಿಮಾತು ಹೇಳಿದರು.

ನನ್ನ ಫ್ರೆಂಡ್‌ಗೆ ಹೇಳದೆ ಮತ್ಯಾರಿಗೆ ಹೇಳಲು ಸಾಧ್ಯ ನಾನು? ಪಾಪ ಚರಿತ್ರೆ ಗೊತಿಲ್ಲದವರಿಗೆ ಚರಿತ್ರೆ ಸೃಷ್ಟಿ ಮಾಡುವುದಕ್ಕೆ ಆಗಲ್ಲ. ಹಾಗಾಗಿ ಹಿಸ್ಟರಿ ಗೊತ್ತಾಗಬೇಕಲ್ಲ. 6ನೇ ಕ್ಲಾಸ್‌ಗೆ ಇಲ್ಲಿಗೆ ಓದಲು ಬಂದಿದ್ದೇನೆ ಎಂದರೆ ನನ್ನನ್ನು ಸುಮ್ಮನೆ ತಂದು ಬಿಟ್‌ ಬಿಡುತ್ತಿದ್ದರಾ? ಸಂದರ್ಭ ಗೊತ್ತಿಲ್ಲದವರಿಗೆ ನೆನಪು ಮಾಡುತ್ತೇನೆ ಅಷ್ಟೇ, ಬೇರೇನೂ ಇಲ್ಲ.
– ಡಿ.ಕೆ. ಶಿವಕುಮಾರ್‌, ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next