Advertisement
ಡಾ| ಜಿ. ಪರಮೇಶ್ವರ್
Related Articles
Advertisement
ಪ್ರಿಯಾಂಕ್ ಖರ್ಗೆ
ರಾಜ್ಯದ ಪ್ರಬಲ ಎಸ್ಸಿ (ಬಲಗೈ) ಸಮುದಾಯದ ಉದಯೋನ್ಮುಖ ನಾಯಕರಾಗಿರುವ ಪ್ರಿಯಾಂಕ್ ಖರ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ. 44ರ ಹರೆಯದ ಪ್ರಿಯಾಂಕ್ ಖರ್ಗೆ ಕಂಪ್ಯೂಟರ್ ಆರ್ಟ್ಸ್ ಆಂಡ್ ಆ್ಯನಿಮೇಶನ್ ಓದಿದ್ದಾರೆ. ಕಲಬುರಗಿಯ ಚಿತ್ತಾಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. 2013ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದ ಪ್ರಿಯಾಂಕ್ ಆ ಬಾರಿಯೇ ಸಚಿವರಾಗಿ ನೇಮಕ ಗೊಂಡಿದ್ದರು. ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಐಟಿ, ಬಿಟಿ ಮತ್ತು ಪ್ರವಾಸೋದ್ಯಮ ಖಾತೆ ನಿರ್ವಹಿಸಿದ್ದ ಪ್ರಿಯಾಂಕ್ ಆ ಬಳಿಕ 2018ರಲ್ಲಿ ರಚನೆಯಾದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. ಯುವ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶ ಮಾಡಿದ ಪ್ರಿಯಾಂಕ್ ಖರ್ಗೆ ಯುವ ಕಾಂಗ್ರಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಸಿದ್ದಾಂತದ ವಿಚಾರದಲ್ಲಿ ಇವರಿಗೆ ಗಟ್ಟಿತನ ಇದೆ. ಎಸ್ಸಿ, ಎಸ್ಟಿ ಕಾಯ್ದೆಗಳು, ಸಮಾಜ ಕಲ್ಯಾಣದ ವಿಚಾರಗಳು ಇವರ ಆದ್ಯತೆಯ ವಿಷಯಗಳಾಗಿವೆ.
ಎಂ. ಬಿ. ಪಾಟೀಲ್
ಪ್ರಬಲ ಲಿಂಗಾಯತ ಸಮುದಾಯದ 58ರ ಹರೆಯದ ಎಂ. ಬಿ. ಪಾಟೀಲ್ ಒಟ್ಟು ಆರು ಬಾರಿ ಶಾಸಕರಾಗಿ ಮತ್ತು ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇವರು ಎಂಜಿನಿಯರಿಂಗ್ ಪದವೀಧರರು. ವಿಜಯಪುರ ಜಿಲ್ಲೆಯ ಬಬಲೇಶ್ವರವನ್ನು ಪ್ರತಿನಿಧಿಸುವ ಎಂ. ಬಿ. ಪಾಟೀಲ್ ಜಲ ಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕೆರೆಗಳನ್ನು ತುಂಬಿಸುವ ಯೋಜನೆಯ ಕುರಿತಂತೆ ಇವರಿಗೆ ಅಪಾರವಾದ ಅನುಭವವಿದೆ. ಕೃಷ್ಣಾ ನ್ಯಾಯಮಂಡಳಿ ಹಂಚಿಕೆ ಮಾಡಿದ್ದ ನೀರನ್ನು ಸಮರ್ಥವಾಗಿ ಸದ್ಬಳಕೆ ಮಾಡಿದ ಕೀರ್ತಿಯೂ ಎಂ.ಬಿ.ಪಾಟೀಲ್ ಅವರಿಗೆ ಸಲ್ಲುತ್ತದೆ. 1991ರಲ್ಲಿ ತಿಕೋಟಾದಿಂದ ವಿಧಾನಸಭೆ ಪ್ರವೇಶಿಸಿದ್ದರು. 1998-99ರಲ್ಲಿ ವಿಜಯಪುರದ ಸಂಸದರಾಗಿ ಕಾರ್ಯನಿರ್ವಹಿಸಿದ್ದರು. 2008ರಲ್ಲಿ ಬಬಲೇಶ್ವರ ದಿಂದ ವಿಧಾನಸಭೆ ಪ್ರವೇಶಿಸಿದ್ದರು. ಆ ಬಳಿಕ 2013ರಲ್ಲಿ ಗೆದ್ದು ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಜಲ ಸಂಪನ್ಮೂಲ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2018-19ರ ಕಾಂಗ್ರೆಸ್-ಜೆಡಿಎಸ್ ಸರಕಾರದಲ್ಲಿ ಗೃಹ ಖಾತೆ ನಿರ್ವಹಿಸಿದ್ದರು. ಪ್ರಸಕ್ತ ಚುನಾವಣೆಯಲ್ಲಿ ಕೆಪಿಸಿಸಿಯ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು. ಜಲ ಸಂಪನ್ಮೂಲ, ನೀರಾವರಿ ಆದ್ಯತೆಯ ಆಯ್ಕೆ ಯಾಗಬಹುದು.
ರಾಮಲಿಂಗಾರೆಡ್ಡಿ
ರಾಜಧಾನಿ ಬೆಂಗಳೂರಿನ ರಾಜಕಾರಣದ ಮೇಲೆ ಬಿಗಿ ಹಿಡಿತ ಹೊಂದಿರುವ 70ರ ಹರೆಯದ ರಾಮಲಿಂಗಾರೆಡ್ಡಿ ಬಿಎಸ್ಸಿ ಪದವೀಧರರು. ಎಂಟು ಬಾರಿ ಶಾಸಕರಾಗಿ ನಾಲ್ಕು ಬಾರಿ ಸಚಿವರಾಗಿದ್ದಾರೆ. 1992ರಲ್ಲಿ ವೀರಪ್ಪ ಮೊಲಿ ಸಂಪುಟದಲ್ಲಿ ಹಣಕಾಸು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಎಪಿಎಂಸಿ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2002ರಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವರಾಗಿ ಕೆಲಸ ಮಾಡಿದ್ದರು. ಧರಂ ಸಿಂಗ್ ಸಂಪುಟದಲ್ಲಿ 2004ರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ, 2013-18ರಲ್ಲಿ ಗೃಹ ಮತ್ತು ಸಾರಿಗೆ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಜಯನಗರ ಮತ್ತು ಬಿಟಿಎಂ ಕ್ಷೇತ್ರದಿಂದ 1989, 1994, 1999, 2004, 2008, 2013, 2018 ಮತ್ತು 2023ರಲ್ಲಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ಜತೆ ಗುರುತಿಸಿಕೊಂಡಿರುವ ರಾಮಲಿಂಗಾರೆಡ್ಡಿ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ಕಾರ್ಯಾಧ್ಯಕ್ಷರ ಜವಾಬ್ದಾರಿ ಹೊತ್ತಿದ್ದಾರೆ. ಪ್ರಸ್ತುತ ಐದನೇ ಬಾರಿ ಸಚಿವರಾಗಿ ನೇಮಕಗೊಂಡಿದ್ದಾರೆ. ಸಾರಿಗೆ ಮತ್ತು ಗೃಹ ಇಲಾಖೆ ವಿಷಯದಲ್ಲಿ ಇವರು ಪರಿಣತಿ ಹೊಂದಿದ್ದಾರೆ.
ಕೆ.ಜೆ. ಜಾರ್ಜ್
ಕ್ರೈಸ್ತ ಸಮುದಾಯದ ಪ್ರಭಾವಿ ನಾಯಕ 73ರ ಹರೆಯದ ಕೆ.ಜೆ. ಜಾರ್ಜ್ ರಾಜಧಾನಿಯ ರಾಜಕಾರಣದ ಮೇಲೆ ಹಿಡಿತ ಇಟ್ಟುಕೊಂಡವರು. 1985ರಿಂದ ಐದು ಬಾರಿ ಶಾಸಕರಾಗಿದ್ದಾರೆ. ಪದವಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಸರ್ವಜ್ಞ ನಗರವನ್ನು ಪ್ರತಿನಿಧಿಸುತ್ತಾರೆ. 1985ರಲ್ಲಿ ಭಾರತಿ ನಗರ ಕ್ಷೇತ್ರವನ್ನು ಗೆಲ್ಲುವ ಮೂಲಕ ವಿಧಾನಸಭೆಯನ್ನು ಮೊದಲ ಬಾರಿಗೆ ಪ್ರವೇಶ ಮಾಡಿದ್ದರು. ವೀರೇಂದ್ರ ಪಾಟೀಲ್ ಅವರ ಸರಕಾರದಲ್ಲಿ ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸ್ವತಂತ್ರ ಜವಾಬ್ದಾರಿ ನಿರ್ವಹಿಸಿದ್ದರು. ಆ ಬಳಿಕ ಬಂಗಾರಪ್ಪ ಸರಕಾರದ ಅವಧಿಯಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಖಾತೆಯ ಸಚಿವರಾಗಿದ್ದರು. 2013, 2018 ಮತ್ತು 2023ರ ಚುನಾವಣೆಯಲ್ಲಿ ಸರ್ವಜ್ಞ ನಗರ ಕ್ಷೇತ್ರವನ್ನು ಜಾರ್ಜ್ ಪ್ರತಿನಿಧಿಸಿದ್ದಾರೆ. ಸಿದ್ದರಾಮಯ್ಯ ಅವರ ಮೊದಲ ಸರಕಾರದಲ್ಲಿ ಗೃಹ ಸಚಿವ ಮತ್ತು 2018-19ರ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಯುವ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಜಾರ್ಜ್ ಅಖೀಲ ಭಾರತ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮಟ್ಟಕ್ಕೆ ಏರಿದ್ದರು. ಹಾಗೆಯೇ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ, ಗೃಹ ಇಲಾಖೆಯ ವಿಷಯಗಳು ಇವರ ಆದ್ಯತೆಯ ಆಯ್ಕೆ ಯಾಗಬಹುದು. ಗೆದ್ದ ಎರಡನೇ ಅವಧಿಗೇ ಸಚಿವರಾಗಿದುದು ಇವರ ವಿಶೇಷ. ಆಗಿನಿಂದಲೂ ಕಾಂಗ್ರೆಸ್ ಸರಕಾರದ ವೇಳೆ ಸಚಿವ ಸ್ಥಾನದಲ್ಲಿರುತ್ತಾರೆ.
ಸತೀಶ್ ಜಾರಕಿಹೊಳಿ
ಪರಿಶಿಷ್ಟ ಪಂಗಡ (ನಾಯಕ) ಸಮುದಾಯಕ್ಕೆ ಸೇರಿದ 60ರ ಹರೆಯದ ಸತೀಶ್ ಜಾರಕಿಹೊಳಿ ನಾಯಕ ಜನಾಂಗದ ಮೇಲೆ ಹಿಡಿತ ಹೊಂದಿರುವ ಪ್ರಭಾವಿ ನಾಯಕ. ತಮ್ಮ ಪ್ರಗತಿಪರ ನಿರ್ಧಾರಗಳಿಂದ ಅವರು ಸಾಕಷ್ಟು ಚರ್ಚೆಗೆ ಒಳಗಾಗಿದ್ದೂ ಇದೆ. ಇವರು ಪಿಯುಸಿ ಓದಿದ್ದಾರೆ. ಬೆಳಗಾವಿಯ ಯಮಕನಮರಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಎರಡು ಬಾರಿ ವಿಧಾನ ಪರಿಷತ್ ಸದಸ್ಯ ಮತ್ತು ನಾಲ್ಕು ಬಾರಿ ಶಾಸಕರಾಗಿದ್ದಾರೆ. 2004-05ರ ಸಾಲಿನಲ್ಲಿ ಕಾಂಗ್ರೆಸ್ – ಜೆಡಿಎಸ್ ಸರಕಾರದ ಧರಂ ಸಿಂಗ್ ಸಂಪುಟದಲ್ಲಿ ಜವುಳಿ ಖಾತೆ, 2013ರಿಂದ 2016ರ ವರೆಗೆ ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಮತ್ತು ಸಣ್ಣ ಕೈಗಾರಿಕೆ ಖಾತೆ ಮತ್ತು 2018-19ರ ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರದಲ್ಲಿ ಅರಣ್ಯ ಮತ್ತು ಪರಿಸರ ಖಾತೆಯ ಸಚಿವರಾಗಿ ಸತೀಶ್ ಜಾರಕಿಹೊಳಿ ಸೇವೆ ಸಲ್ಲಿಸಿದ್ದಾರೆ. ಮೌಡ್ಯತೆಯ ವಿರುದ್ಧದ ಹೋರಾಟದಲ್ಲಿ ಸತೀಶ್ ಜಾರಕಿಹೊಳಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜ ಕಲ್ಯಾಣ, ಅಬಕಾರಿ, ಜವುಳಿ ಅವರ ಆದ್ಯತೆಯ ಆಯ್ಕೆಯಾಗಬಹುದು.
ಜಮೀರ್ ಅಹ್ಮದ್ ಖಾನ್
ಅಲ್ಪಸಂಖ್ಯಾಕರ ಪ್ರಭಾವಿ ನಾಯಕ 55ರ ಹರೆಯದ ಜಮೀರ್ ಅಹ್ಮದ್ ಖಾನ್, ಐದನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಪ್ರೌಢ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಚಾಮ ರಾಜಪೇಟೆಯನ್ನು ಪ್ರತಿನಿಧಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ 2005ರಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕಗೊಂಡ ಮೇಲೆ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಆಗ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆದ್ದ ಜಮೀರ್, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಹಜ್ ಮತ್ತು ವಕ್ಫ್ ಸಚಿವರಾದರು. 2013ರಲ್ಲೂ ಜೆಡಿಎಸ್‌ನಿಂದ ಗೆದ್ದರು. ಮುಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಅವರು, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದರು. ಈಗ ಮತ್ತೆ ಗೆದ್ದು ಸಚಿವರಾಗಿದ್ದಾರೆ. ಅಲ್ಪಸಂಖ್ಯಾಕ ಸಮುದಾಯದ ಮೇಲೆ ತಮ್ಮದೇ ಆದ ಹಿಡಿತ ಮತ್ತು ಪ್ರಭಾವವನ್ನು ಜಮೀರ್ ಹೊಂದಿದ್ದಾರೆ. ಅಲ್ಪಸಂಖ್ಯಾಕರ ಕಲ್ಯಾಣ, ಹಜ್, ವಕ್ಫ್ ವಿಚಾರಗಳು ಇವರ ಆದ್ಯತೆಯ ಆಯ್ಕೆ ಆಗಬಹುದು.