Advertisement
ವೃದ್ಧ ತಾಯಿ ಹಾಗೂ ಪರಿತ್ಯಕ್ತೆಯಾಗಿರುವ ಸಹೋದರಿಯೊಂದಿಗೆ ವಾಸಿಸುತ್ತಿರುವ ಚಾಂತಾಳ ಮಂಜುನಾಥ ನಾಗೇಶ್ ಭಟ್ಟರ ಕುಟುಂಬದ ಹೀನಾಯ ಸ್ಥಿತಿ ಕಣ್ಣೀರು ಬರುವಂತಿದೆ. ಬಂಧುಗಳ ಒಡನಾಟವೂ ಅಷ್ಟಕ್ಕಷ್ಟೆ. ಕೃಷಿ ಮಾಡುವ ಅದಮ್ಯ ಆಸೆಯಿದ್ದರೂ ಈ ಜಾಗ “ಬೆಟ್ಟದ ಜೀವ’ದ ಕಥಾ ಸ್ಥಳವೆನಿಸಿದ ‘ಕಾಟುಮೂಲೆ’ಯೇ ಸರಿ. ಮನೆ, ಕೃಷಿ, ಜಮೀನು ಎಲ್ಲವೂ ಇದ್ದರೂ ಅದನ್ನು ತಲುಪಲು ಬೇಕಾಗಿರುವ 50 ಮೀ. ಉದ್ದದ ದಾರಿಯೇ ಇಲ್ಲ.
ಲಿಂಗನಮಕ್ಕಿ ಅಣೆಕಟ್ಟು ಪರಿಣಾಮ ನಿರಾಶ್ರಿತವಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಈ ಕುಟುಂಬ 1964ರಲ್ಲಿ ಸುಳ್ಯ ತಾಲೂಕಿನ ಕೊಲ್ಲಮೊಗ್ರಕ್ಕೆ ವಲಸೆ ಬಂದು, ಕೃಷಿಯನ್ನೇ ನೆಚ್ಚಿಕೊಂಡು ನೆಲೆಗಾಣಲೆತ್ನಿಸಿದೆ. ನಾಲ್ಕೈದು ದಶಕಗಳಿಂದ ಮೂಲಸೌಕರ್ಯ ವಂಚಿತವಾಗಿದ್ದರೂ ಕೃಷಿ ಕಾಯಕ ಬಿಟ್ಟಿಲ್ಲ. ಒಂದು ಎಕರೆಯಲ್ಲಿ ಭತ್ತ ಕೃಷಿಯಿದೆ. ಮನೆಯವರೇ ಉತ್ತು ಬಿತ್ತಿ ಬೆಳೆಯುತ್ತಾರೆ. ಪೈರು ತಿನ್ನುವ ಪಕ್ಷಿಗಳನ್ನು ಬೆದರಿಸಲು ಹಳೆಯ ಮಾದರಿಯ ಬಿದಿರಿನ ಸಾಧನವನ್ನೇ ಜೋರಾಗಿ ಬಡಿದು ಶಬ್ದ ಮಾಡುತ್ತಾರೆ. ಹಿತ್ತಲಲ್ಲಿ ತರಕಾರಿಯೂ ಇದೆ. ಪಕ್ಕದಲ್ಲೇ ಮನೆಗಿಂತ ಸುಸಜ್ಜಿತ ದನದ ಕೊಟ್ಟಿಗೆಯಲ್ಲಿ ಜಾನುವಾರುಗಳೂ ಇವೆ. ಸುಮಾರು ಎರಡು ಎಕರೆ ಜಾಗದಲ್ಲಿ ಅಡಿಕೆ, ಹತ್ತಾರು ತೆಂಗು ಬೆಳೆದಿದ್ದಾರೆ. ಆದಾಯಕ್ಕೆ ಕೊರತೆಯಿಲ್ಲ. ಆದರೂ ಹೊಸ ಮನೆ ಕಟ್ಟಲಾಗದ, ಇರುವ ಮನೆಯನ್ನು ದುರಸ್ತಿ ಮಾಡಲಾಗದ ಅಸಹಾಯಕತೆಯೊಂದಿಗೆ ಶೌಚಾಲಯ, ನೀರು ಹಾಗೂ ವಿದ್ಯುತ್ ಸೌಲಭ್ಯವೂ ಇಲ್ಲದೆ ಹೆಂಚಿನ ಮುರುಕಲು ಮನೆಯಲ್ಲೇ ವಾಸ ಮಾಡುವಂತಾಗಿದೆ.
Related Articles
ವಿದ್ಯುತ್ ಯೋಜನೆಗಾಗಿಯೇ ಭೂಮಿ ನೀಡಿ ವಲಸೆ ಬಂದ ಈ ಕುಟುಂಬಕ್ಕೆ 50 ವರ್ಷವಾದರೂ ವಿದ್ಯುತ್ ಸಂಪರ್ಕವಿಲ್ಲ. ಸೂರ್ಯ ಮುಳುಗಿದರೆ ಕತ್ತಲು, ಮೂಡಿದನೆಂದರೆ ಬೆಳಕು. ಎಪಿಎಲ್ ಕಾರ್ಡ್ ಇರುವ ಕಾರಣ ಸೀಮೆಎಣ್ಣೆ ಸಿಗುವುದಿಲ್ಲ. ಕತ್ತಲಾವರಿಸುವ ಮೊದಲೇ ನಿತ್ಯ ಕರ್ಮಗಳನ್ನು ಮುಗಿಸುವ ಅನಿವಾರ್ಯತೆ. ಮನೆಗೆ ಕುಡಿಯವ ನೀರಿಲ್ಲ. ಬೇಸಿಗೆ ಬಂತೆಂದರೆ ಮೂರ್‍ನಾಲ್ಕು ತಿಂಗಳು 500 ಮೀಟರ್ ದೂರದ ಮನೆಯೊಂದರಿಂದ ಹೊತ್ತು ತರಬೇಕು. ಮಳೆಗಾಲ ಮಾತ್ರ ಕೃಷಿಯಿದೆ. ಮತ್ತೂಂದು ಬೆಳೆಗೆ ನೀರಿಲ್ಲ.
Advertisement
ಹೊಸ ಮನೆ ನಿರ್ಮಾಣಕ್ಕೆ ಕೆಂಪು ಕಲ್ಲು ಖರೀದಿಸಿದ್ದರೂ ನಿರ್ಮಾಣ ಸಾಧ್ಯವಾಗಿಲ್ಲ. ಇದಕ್ಕೆ ರಸ್ತೆ ಸಮಸ್ಯೆ. ಪಕ್ಕದಲ್ಲಿರುವ ಜಾಗದ ತಕರಾರು ಇವರ ಅಭಿವೃದ್ಧಿಗೆ ತೊಡಕಾಗಿದೆ. ಹಿಂದೆ ಕೃಷಿಗೆಂದು ಬಾಡಿಗೆ ಟಿಲ್ಲರನ್ನು ಮಳೆ ಕಡಿಮೆಯಾದ ಬಳಿಕ ಪಕ್ಕದಲ್ಲಿರುವ ತೋಡಿನ ಮೂಲಕವೇ ಸಾಗಿಸಿ ಜಮೀನಿಗೆ ಕೊಂಡೊಯ್ಯುತ್ತಿದ್ದರು. ಈಗ ಹಳೆಯ ಟಿಲ್ಲರ್ ಖರೀದಿಸಿದ್ದಾರೆ.
ಈ ಹಿಂದೆ ತಹಶೀಲ್ದಾರ್ ಆಗಿದ್ದ ಅರುಣಪ್ರಭಾ ಅವರು, ಈ ಮನೆಗೆ ಸೂಕ್ತ ರಸ್ತೆ ಸೌಲಭ್ಯ ಕಲ್ಪಿಸುವಂತೆ ಪಂ.ಗೆ ನೀಡಿದ್ದ ನಿರ್ದೇಶನ, ಅವರು ಎರಡೇ ದಿನಗಳಲ್ಲಿ ವರ್ಗಾವಣೆಗೊಂಡಿದ್ದರಿಂದ ನನೆಗುದಿಗೆ ಬಿತ್ತು. ಆ ಬಳಿಕ ಯಾವುದೇ ಪ್ರಯತ್ನ ಆಗಲಿಲ್ಲ. ರಸ್ತೆ ಸಂಪರ್ಕವೊಂದು ಸಿಕ್ಕರೆ, ಭಟ್ಟರ ಕುಟುಂಬದ ಬಹುಪಾಲು ಕಷ್ಟಗಳು ನೀಗಿದಂತೆಯೇ ಎನ್ನುತ್ತಾರೆ, ಸಾಮಾಜಿಕ ಕಾರ್ಯಕರ್ತ ಮಾಧವ ಚಾಂತಾಳ.
ಬದುಕಿನುದ್ದಕ್ಕೂ ಯಾತನೆಈ ಮೂರು ಹಿರಿಯ ಜೀವಗಳು ಬದುಕಿನ ಭರವಸೆ ಕಳೆದುಕೊಂಡು ಸೋತಿವೆ. ಮಾನಸಿಕ ಯಾತನೆಯಿಂದ ನೊಂದಿವೆ. ಯಾರ ಮೇಲೂ ವಿಶ್ವಾಸವಿರಿಸುವ ಸ್ಥಿತಿಯಲ್ಲೂ ಇಲ್ಲ. ಅಪರಿಚಿತರು ಕಂಡರೆ ಕುತೂಹಲ, ಬೆರಗು ಹಾಗೂ ಸಂಶಯದಿಂದಲೇ ಮಾತನಾಡಿಸುವ ಮುಗ್ಧತೆ ಭಟ್ಟರ ಕುಟುಂಬದಲ್ಲಿದೆ. ನಕ್ಸಲ್ ಬಾಧಿತ ಗ್ರಾಮವಾಗಿರುವ ಕಾರಣ ಈ ಮನೆಗೆ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಅತ್ಯಗತ್ಯ. ಈ ಬಗ್ಗೆ ಕುಟುಂಬ ಹಲವು ಬಾರಿ ಮನವಿ ಮಾಡಿದರೂ ಈಡೇರಿಲ್ಲ. ಸಮಸ್ಯೆ ಶೀಘ್ರ ನಿವಾರಣೆ
ಕುಟುಂಬಕ್ಕೆ ಹಿಂದೆ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಪಂಚಾಯತ್ ಮುಂದಾಗಿತ್ತು. ಮನೆಯವರೇ ಸ್ಪಂದಿಸಲಿಲ್ಲ. ಈಗ ದೀನ್‌ದಯಾಳ್ ಯೋಜನೆಯಡಿ ವಿದ್ಯುತ್ ಸಂಪರ್ಕಕ್ಕೆ ವ್ಯವಸ್ಥೆ ಕಲ್ಪಿಸಲು ಹೆಸರು ಸೇರ್ಪಡೆ ಮಾಡಲಾಗಿದೆ. ಕುಟುಂಬಕ್ಕಿರುವ ರಸ್ತೆ ಸಂಪರ್ಕ ಸಮಸ್ಯೆ ನಿವಾರಣೆಗಾಗಿ ಪಂಚಾಯತ್ ಆಡಳಿತದಲ್ಲಿ ಪ್ರಸ್ತಾವವಿದೆ. ಸಮಸ್ಯೆ ಶೀಘ್ರ ನಿವಾರಣೆಯಾದೀತು ಎಂಬ ಭರವಸೆಯಿದೆ.
– ವೀಣಾ ಬಿಳಿಮಲೆ
ಕೊಲ್ಲಮೊಗ್ರು ಗ್ರಾ.ಪಂ. ಅಧ್ಯಕ್ಷ್ಯೆ ಭರತ್ ಕನ್ನಡ್ಕ