ಕೆಂಗೇರಿ: ಅಂಬೇಡ್ಕರ್ ಅವರನ್ನು ದಲಿತರಿಂದ, ಬಸವಣ್ಣ ಅವರನ್ನು ವೀರಶೈವರಿಂದ, ಕುವೆಂಪು ಅವರನ್ನು ಒಕ್ಕಲಿಗರಿಂದ ಬಿಡುಗಡೆಗೊಳಿಸಿ ವಿಶ್ವಮಾನವರನ್ನಾಗಿ ನೋಡುವ ಪ್ರವೃತ್ತಿ ಬೆಳಯಬೇಕಾದ ಅಗತ್ಯವಿದೆ. ಜತೆಗೆ ದೇಶ ಭಕ್ತಿಯ ವಿಚಾರದಲ್ಲಿ ವಾರಸುದಾರಿಕೆ ಸರಿಯಲ್ಲ ಎಂದು ಸಾಹಿತಿ ಚಂದ್ರಶೇಖರ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಅಂಬೇಡ್ಕರ್ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಚಾರುಪ್ರಕಾಶನದ “ಅಂಬೇಡ್ಕರ್ ಕಾವ್ಯ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, “ಇಡೀ ದೇಶದಲ್ಲಿ ಹೊಸ ರೀತಿಯ ರಾಷಿŒàಯ ಸಂಸ್ಕೃತಿ ಪರಿಕಲ್ಪನೆ ಶುರುವಾಗಿದೆ. ಕೇವಲ ಒಂದು ವರ್ಗ ನಾವೇ ಸಂಸ್ಕೃತಿಯ ವಾರಸುದಾರರು ಎನ್ನುವ ಮನೋಧರ್ಮ ಹೊಂದಿದ್ದಾರೆ. ಈ ರೀತಿ ಆಲೋಚನೆಗಳು ಸರಿ ಅಲ್ಲ. ಎಲ್ಲರಿಗೂ ರಾಷ್ಟ್ರದ ಬಗ್ಗೆ ಅಭಿಮಾನವಿದೆ,’ ಎಂದರು.
“ಜಾಗತೀಕರಣ, ಉದಾರೀಕರಣ, ಇತ್ತೀಚೆಗಿನ ಕೇಸರೀಕರಣ ದೇಶದ ದಲಿತರ ದಮನಿತರ ಬಾಳಿನಲ್ಲಿ ಬೆಳಕು ತಂದಿಲ್ಲ. ಬುದ್ಧ, ಬಸವಣ್ಣ ಅಂಬೇಡ್ಕರ್, ಪೆರಿಯರ್‌ರವರ ಅರಿವಿನ ಮಾರ್ಗವೇ ದಲಿತರ ದಮನಿತರ ಬಾಳಿನ ವಿಮೋಚನೆ ಮಾರ್ಗ,’ಎಂದು ಪ್ರತಿಪಾದಿಸಿದರು.
ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ “ಅಂಬೇಡ್ಕರ್ ಎಲ್ಲರಿಗೂ ಗೊತ್ತು. ಆದರೆ ಅವರ ವಿಚಾರಧಾರೆಗಳ ಅರಿವಿಲ್ಲ. ರಾಮಾಯಣ ಮುಗಿದಿದೆ. ಈಗ ಭೀಮಾಯಣ ಪ್ರಾರಂಭವಾಗಿದೆ. ಯುವ ಜನಾಂಗ ಮಾನವೀಯತೆ, ಸ್ವಾಭಿಮಾನ, ವಿವೇಕವನ್ನು ರೂಢಿಸಿಕೊಂಡು ಸಾಮಾಜಿಕ ನ್ಯಾಯದ ಪರವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ದೇಶದ ಪ್ರಗತಿಗೆ ಮಹತ್ವ ಹೆಚ್ಚುತ್ತದೆ,’ ಎಂದರು.
ಲೇಖಕ ಎಸ್.ಶಿವಮಲ್ಲು, ಪಿವಿಪಿ ಕಲ್ಯಾಣದತ್ತಿಯ ಕಾರ್ಯದರ್ಶಿ ಎ.ಅರ್.ಕೃಷ್ಣಮೂರ್ತಿ, ಖಜಾಂಚಿ ಪಿ.ಎಲ್.ನಂಜುಂಡ ಸ್ವಾಮಿ, ಧರ್ಮದರ್ಶಿ ಡಾ.ಎಸ್.ಚಿನ್ನಸ್ವಾಮಿ, ಡಾ.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲ ಯದ ಪ್ರಾಂಶುಪಾಲ ಡಾ.ಸಿ. ನಂಜುಂಡಸ್ವಾಮಿ, ಚಾರುಪ್ರಕಾಶನ ಸಂಸ್ಥೆಯ ಪಾರ್ವತೀಶ್ ಬಿಳಿದಾಳೆ ಇದ್ದರು.
ಕವಿ ಸಿದ್ದಲಿಂಗಯ್ಯ ವಿನೋದ
“ಕವಿಗಳು ಅಷ್ಟು ವ್ಯವಹಾರಸ್ಥರಲ್ಲ. ಮನೆಯಲ್ಲೂ ಒಳ್ಳೆ ಅಭಿಪ್ರಾಯವಿಲ್ಲ. ರೋಡ್‌ನಲ್ಲಿ ಹೋಗ್ತಾ ಇದ್ದರೆ, ಆಕಾಶದಲ್ಲಿ ಚಂದ್ರನ ನೋಡ್ತಾ ಹಾಗೆಯೇ ಮೈಮರೆ ಯುತ್ತಾರೆ. ಅಂಗಡಿಗೆ ಹೋದರೆ ಚಿಲ್ಲರೆ ಬಿಟ್ಟು ಬರುತ್ತಾರೆ,’ ಎಂದು ಹೇಳುವ ಮೂಲಕ ಕವಿ ಸಿದ್ದಲಿಂಗಯ್ಯ ಸಮಾರಂಭದಲ್ಲಿ ನಗೆ ಹೊನಲು ಹರಿಸಿದರು.