Advertisement

ಆಗ ದಿಲ್ಲಿಯಿಂದ ಬಂದು ಓಟ್‌ ಹಾಕಿದ್ದೆ…ಈಗ ಬಿಡ್ತೇನೆಯೇ?

02:57 PM May 07, 2018 | |

‘ಯಾರು ಗೆಲ್ಲಲಿ ಬಿಡಲಿ; ಅದರ ಲೆಕ್ಕ ನನಗಿಲ್ಲ. ಓಟು ಹಾಕುವುದನ್ನು ನಿಲ್ಲಿಸ್ಲಿಕ್ಕೆ ಆಗುವುದಿಲ್ಲ. ನನಗೆ ಸರಕಾರದವರು ಏನೂ ಕೊಟ್ಟಿಲ್ಲ. ಆದರೂ ಓಟು ಹಾಕುತ್ತೇನೆ’ ಎನ್ನತ್ತಾ ಮತದಾನದ ಕಾಳಜಿಯನ್ನು ಪ್ರದರ್ಶಿಸಿದರು ಬೈಕಾಡಿ ಗಾಂಧಿನಗರದ ವನಜಾ. ಅವರು ಹೊಟೇಲ್‌ ಕಾರ್ಮಿಕೆ.

Advertisement

ಇದೇ ಅಭಿಪ್ರಾಯವನ್ನು ಅವರ ನೆರೆಮನೆಯ ಹೇಮಲತಾ ಕೂಡ ವ್ಯಕ್ತಪಡಿಸಿದರು. ‘ನಮ್ಮಲ್ಲಿ ಚುನಾವಣೆ ಕೆಲಸಗಳು ಶುರುವಾಗಿವೆ. ಊರಿನ ಕೆಲವರು ಸಂಬಳಕ್ಕಾಗಿ ಫೀಲ್ಡಿಗೆ ಹೋಗುತ್ತಿದ್ದಾರೆ. ಚುನಾವಣೆಯ ಆಸಕ್ತಿ ನಮ್ಮಾಚೆಗೂ ಇದೆ. ಯಾರು ಬೇಕಾದರೂ ಗೆಲ್ಲಲಿ. ನಾನು ಓಟು ಹಾಕುತ್ತೇನೆ ಅಷ್ಟೆ’ ಎಂದರು ಅವರು. ಉಚಿತ ಗ್ಯಾಸ್‌ಗೆ ಅರ್ಜಿ ಹಾಕಿ ಪದೇ ಪದೇ ಕೇಳಿದರೂ ಪ್ರಯೋಜನ ಆಗಿಲ್ಲ ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸಿದರು.

ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌, ಬ್ರಹ್ಮಾವರ ಪೇಟೆಯ ನಿವಾಸಿ ಶ್ರೀನಿವಾಸ ಅವರು ಹೇಳಿದ್ದು – ‘ಹಿಂದೊಮ್ಮೆ ಚುನಾವಣೆ ನಡೆಯುವಾಗ ನಾನು ಹೊಸದಿಲ್ಲಿಯಲ್ಲಿದ್ದೆ. ಆಗ ಊರಿಗೆ ಬಂದು ಓಟು ಮಾಡಿದ್ದೆ. ಈಗ ಊರಿನಲ್ಲಿಯೇ ಇದ್ದೇನೆ. ಓಟು ಮಾಡದೆ ಬಿಡುತ್ತೇನಾ! ಬ್ರಹ್ಮಾವರದಲ್ಲಿ ಹೆಚ್ಚಿನವರು ಓಟು ಮಾಡುತ್ತಾರೆ. ನನಗೂ ಆಸಕ್ತಿ ಇದೆ’.

ಈ ಬಾರಿ ಜಾಸ್ತಿ ಇಂಟ್ರೆಸ್ಟ್‌
ಹಾರಾಡಿ ಗ್ರಾ.ಪಂ.ನ ಬೈಕಾಡಿಯ ನಿವಾಸಿ, ಭದ್ರಗಿರಿ-ಬೈಕಾಡಿ ಕ್ರಾಸ್‌ ರಸ್ತೆಯ ರಿಕ್ಷಾ ನಿಲ್ದಾಣದಲ್ಲಿ ದುಡಿಯುವ ರಿಕ್ಷಾ ಚಾಲಕ ಸಂತಾನ್‌ ಬಾರ್ನೆಸ್‌ ಅವರನ್ನು ಪತ್ರಿಕೆ ಮಾತನಾಡಿಸಿತು. ‘ನಮ್ಮೂರಿನಲ್ಲಿ ಅಂತಹ ಸಮಸ್ಯೆಗಳೇನೂ ಕಾಣುವುದಿಲ್ಲ. ಕಳೆದ ಬಾರಿಗಿಂತ ಈ ಸರ್ತಿ ಹೆಚ್ಚು ಇಂಟ್ರೆಸ್ಟ್‌ ಜನರಲ್ಲಿದೆ. ನಮ್ಮ ಮನೆಯಲ್ಲಿಯೂ ನಾಲ್ಕು ವೋಟ್‌ ಇದೆ. ಬೆಂಗಳೂರಿನಲ್ಲಿರುವ ಮಗ ಕೂಡ ಓಟಿನ ದಿನ ಊರಿಗೆ ಬರ್ತಾನೆ’ ಎಂದರು.

ಉಮೇದು ಇದೆ, ಉದಾಸೀನ ಇಲ್ಲ
ಜನರಲ್ಲಿ ಭಾರೀ ಉಮೇದು ಕಾಣಿಸ್ತಾ ಇದೆ. ಉದಾಸೀನ ಇಲ್ಲ. ಏನೋ ಆಗಬೇಕು ಎಂಬ ಮನದಾಸೆ ಅವರದು. ನನ್ನಿಂದಾದಷ್ಟು ಜನರಲ್ಲಿ ಮತದಾನ ಮಾಡಲು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ನ್ಯಾಯವಾದಿಯಾಗಿರುವ ಚೇರ್ಕಾಡಿಯ ಮನೋಹರ ಶೆಟ್ಟಿ ಪ್ರತಿಕ್ರಿಯಿಸಿದರು.

Advertisement

ಮೈಕ್‌- ಓಟಿನ ಮಜಾ!
‘ಹಿಂದಿನಂತೆ ಪ್ರಚಾರ ಅಬ್ಬರ ಕಾಣಿಸ್ತಿಲ್ಲ. ಜನ ವಾಟ್ಸಾಪ್‌, ಟಿವಿಯಲ್ಲೇ ಚುನಾವಣೆ ಭಾಷಣ ಕೇಳುತ್ತಿದ್ದಾರೆ. ಹಿಂದೆ ನಮ್ಮೂರಿನಲ್ಲಿ ಇಂಥ ಹೊತ್ತಿಗೆ ಭಾರೀ ಗದ್ದಲ ಇರ್ತಾ ಇತ್ತು. ಈಗ ಕಾಣಿಸ್ತಿಲ್ಲ. ಜನ ಅವರ ಪಾಡಿಗೆ ಅವರಿದ್ದಾರೆ. ಮೈಕ್‌ ಪ್ರಚಾರ ಇಲ್ಲದಿದ್ರೆ ಓಟಿನ ಮಜಾ ಇಲ್ಲ’ ಎಂದರು ಹಂದಾಡಿಯ ಅಶೋಕ್‌ ಪೂಜಾರಿ.

‘ಪಕ್ಷ, ವ್ಯಕ್ತಿಗಳ ಆಯ್ಕೆ ನಡುವೆ ನನಗೆ ಗೊಂದಲ ಇದೆ. ಈಗಲೇ ನಿರ್ಧಾರ ಮಾಡಿಲ್ಲ. ಇನ್ನೂ ಕೆಲವು ದಿನಗಳಿದೆಯಲ್ಲ… ನಿರ್ಧಾರ ಮಾಡ್ತೇನೆ. ಓಟು ಮಾತ್ರ ಹಾಕುತ್ತೇನೆ. ಎಲ್ಲರೂ ಮಾಡ್ಬೇಕು’ ಎಂಬುದು ಕರ್ಜೆಯ ಕೂಲಿ ಕಾರ್ಮಿಕ ಕರುಣಾಕರ ಅವರ ಮಾತು. 

ಕಾರ್ಯಕರ್ತರಿಗೆ ಮಾತ್ರ ಚುನಾವಣೆ ಬಿಸಿ
ಈಗ ಚುನಾವಣಾ ಬಿಸಿ ಕಾರ್ಯಕರ್ತರಿಗೆ ಮಾತ್ರ ತಟ್ಟಿದೆ, ಜನಸಾಮಾನ್ಯರಿಗಲ್ಲ. ಬಿಸಿಲಿನ ಬಿಸಿಯೇ ಜಾಸ್ತಿ. ರಾಜಕೀಯ ಪಕ್ಷದವರು ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುತ್ತಿದ್ದಾರೆ. ಅವರಿಗದೇನೂ ವಿಶೇಷ ಅಲ್ಲ. ಜನರಿಗೆ ಅಬ್ಬರದ ಪ್ರಚಾರ ಬೇಕಾಗಿಲ್ಲ. ಅವರು ಬುದ್ಧಿವಂತರಿದ್ದಾರೆ. ಆದರೆ ನೀತಿ ಸಂಹಿತೆಯ ಬಿಗಿ ಸ್ವಲ್ಪ ಅತಿಯಾಯಿತು ಅನ್ನಿಸ್ತಿದೆ.
– ನಿತ್ಯಾನಂದ ರಾವ್‌,
ವ್ಯಾಪಾರಿ, ಬ್ರಹ್ಮಾವರ

ನಮ್ಮದೇ ಮೀಟಿಂಗ್‌
ನಾವು ಅಕ್ಕಪಕ್ಕದ ಮಹಿಳೆಯರು ಆಗಾಗ ಚುನಾವಣೆಯ ವಿಷಯ ಬಗ್ಗೆ ಮಾತನಾಡುತ್ತೇವೆ. ನಮಗೂ ಮತದಾನ ಆಸಕ್ತಿ ಇದೆ. ಮತ ಕೇಳಿಕೊಂಡು ಕೆಲವರು ಮನೆಗೆ ಬಂದು ಹೋಗಿದ್ದಾರೆ. ನನ್ನ ಗೆಳತಿಯರ ಜತೆಗೆ ವಾದವೂ ನಡೆಯುತ್ತದೆ. ಆದರೆ ಅದು ವಿಪರೀತಕ್ಕೆ ಹೋಗುವುದಿಲ್ಲ. ನಾವೆಲ್ಲ ಮತದಾನ ಹಾಕೋಕೆ ಹೊಗ್ತೀವೆ.
– ಜಯಂತಿ, ಕೊಳಂಬೆ
ಹೇರೂರು, ಫಿಶ್‌ಮೀಲ್‌ ಕಾರ್ಮಿಕೆ 

„ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next