ಬೆಂಗಳೂರು/ಮಣಿಪಾಲ: ಬೇಸಿಗೆ ಮಳೆಯ ನಡುವೆಯೂ ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದ್ದು, ಉತ್ತರ ಒಳನಾಡಿನಲ್ಲಿ ಬಿಸಿಗಾಳಿ ಬೀಸುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈಗ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆ ಒಂದೆರಡು ದಿನ ದಕ್ಷಿಣ ಒಳನಾಡಿನಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಇದರೊಂದಿಗೆ ಉಷ್ಣತೆ ಕೂಡ ಏರಲಿದೆ.
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಏ. 16ರಂದು ಬಿಸಿಗಾಳಿ ಬೀಸುವ ಸಂಭವ ಇದೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ.ಪ್ರಸ್ತುತ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಸೌರಾಷ್ಟ್ರ, ವಿದರ್ಭ, ಹರಿಯಾಣ, ಕುಛ… ಪ್ರದೇಶದಲ್ಲಿ ಬಿಸಿಗಾಳಿ ಬೀಸುತ್ತಿದೆ. ಏ. 16ರಂದು ಅದು ಮಧ್ಯ ಮಹಾರಾಷ್ಟ್ರ,ತೆಲಂಗಾಣ ಹಾದು ಕರ್ನಾಟಕದ ಉತ್ತರ ಒಳನಾಡಿಗೂ ವ್ಯಾಪಿಸಲಿದೆ. ನಂತರ ಅದು ಕಡಿಮೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಗರಿಷ್ಠ ತಾಪಮಾನ 42.1 ಡಿ.ಸೆ.: ಈ ಮಧ್ಯೆ, ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಅಧಿಕ 42.1 ಡಿ.ಸೆ. ತಾಪಮಾನ ದಾಖಲಾಗಿದೆ. ಕರಾವಳಿಯಲ್ಲಿಯೂ ತಾಪಮಾನ ಹೆಚ್ಚುತ್ತಿದ್ದು, ಶುಕ್ರವಾರ 35.7 ಡಿ.ಸೆ. ದಾಖಲಾಗಿತ್ತು. ಇದು ಸಾಮಾನ್ಯಕ್ಕಿಂತ 2.7 ಡಿ.ಸೆ. ಹೆಚ್ಚಾಗಿದೆ. ರಾಜ್ಯದ ಕೆಲವೆಡೆ ಮಳೆ: ಇದೇ ವೇಳೆ, ರಾಜ್ಯದ ಕೆಲವೆಡೆ ಶುಕ್ರವಾರ ಮಳೆಯಾಗಿದೆ. ಬಾಳೆಹೊನ್ನೂರಿನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು, ಆಲಿಕಲ್ಲು ಸಹಿತ ಭಾರಿ ಮಳೆಯಾಯಿತು. ಕಾರ್ಕಳ ತಾಲೂಕಿನ ಹಲವೆಡೆ ಮಧ್ಯಾಹ್ನ 3 ಗಂಟೆ ವೇಳೆಗೆ ಬೀಸಿದ ಭಾರಿ ಗಾಳಿಯಿಂದ ಮನೆಗಳಿಗೆ ಹಾನಿಯಾಗಿದೆ. ದುರ್ಗ ಗ್ರಾಮದಲ್ಲಿ ಬೀಸಿದ ಸುಂಟರಗಾಳಿ ಪರಿಣಾಮ ಆರು ಮನೆಗಳಿಗೆ ಹಾನಿ ಉಂಟಾಗಿದೆ. ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ .