ಹೊಸದಿಲ್ಲಿ : ಭಾರತೀಯ ಯೋಧರು ಹುತಾತ್ಮರಾಗುತ್ತಿರುವುದಕ್ಕೆ ರಾಜಕೀಯ ಬಣ್ಣ ನೀಡುವ ಅತ್ಯಂತ ಸಂವೇದನಾರಹಿತ ಹೇಳಿಕೆಯೊಂದರಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖೀಲೇಶ್ ಯಾದವ್ ಅವರು “ಗುಜರಾತ್‌ನ ಯಾವುದೇ ಯೋಧ ಹುತಾತ್ಮನಾಗಿಲ್ಲ – ಏಕೆ?’ ಎಂದು ಪ್ರಶ್ನಿಸಿದ್ದಾರೆ.
ದೇಶದ ಇತರ ಹಲವಾರು ರಾಜ್ಯಗಳಿಗೆ ಸೇರಿದ ಭಾರತೀಯ ಯೋಧರು ಹುತಾತ್ಮರಾಗಿರುವರಾದರೂ ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯವಾಗಿರುವ ಗುಜರಾತ್‌ನಿಂದ ಯಾವೊಬ್ಬ ಯೋಧನೂ ಹುತಾತ್ಮನಾಗಿಲ್ಲ ಎಂದು ಅಖೀಲೇಶ್ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.
ಈ ರೀತಿಯ ಪ್ರಶ್ನೆ ಎತ್ತುವ ಮೂಲಕ ಅಖೀಲೇಶ್ ತಮ್ಮಲ್ಲಿನ ಸಂವೇದನಾ ರಹಿತ ಮನೋಭಾವವನ್ನು ಬಹಿರಂಗಪಡಿಸಿದ್ದಾರೆ ಎಂಬ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಉತ್ತರ ಪ್ರದೇಶ, ಮಧ್ಯ ಪ್ರದೇಶ, ದಕ್ಷಿಣ ಭಾರತ ಮತ್ತು ದೇಶದ ಇತರ ಭಾಗಗಳ ಯೋಧರು ಹುತಾತ್ಮರಾಗಿದ್ದಾರೆ; ಆದರೆ ಗುಜರಾತ್ ನಿಂದ ಯಾವ ಯೋಧನೂ ಹುತಾತ್ಮನಾಗಿಲ್ಲ – ಏಕೆ ಎಂದು ಅಖೀಲೇಶ್ ಪ್ರಶ್ನಿಸಿರುವುದನ್ನು ಎಎನ್‌ಐ ವರದಿ ಮಾಡಿದೆ.
ಅಖೀಲೇಶ್ ಅವರ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಒಂದು ದಿನದ ಹಿಂದಷ್ಟೇ “2012ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳನ್ನು ಸಮಾಜವಾದಿ ಪಕ್ಷ ಗೆದ್ದಿದ್ದಾಗ ನಾನು ಅಖೀಲೇಶ್‌ನನ್ನು ಮುಖ್ಯಮಂತ್ರಿ ಮಾಡಿದ್ದೇ ನನ್ನ ಬಹುದೊಡ್ಡ ತಪ್ಪು’ ಎಂದು ಹೇಳಿದ್ದರು.