ಕಟಪಾಡಿ/ಕಾಪು: ಕಾಪು ತಹಶೀಲ್ದಾರ್ ಡಾ| ಪ್ರತಿಭಾ ಆರ್. ಅವರ ನೇತೃತ್ವದಲ್ಲಿ ಮೂಡಬೆಟ್ಟು ಗ್ರಾಮದ ವ್ಯಾಪ್ತಿಯಲ್ಲಿ ಭತ್ತದ ಬೆಳೆ ಕಟಾವು ನಡೆಯಿತು.
ಭಾರತ ಸರಕಾರದ ಆರ್ಥಿಕ ಮತ್ತು ಸಾಂಖ್ಯೀಕ ನಿರ್ದೇಶನಾಲಯದ ರಾಷ್ಟ್ರೀಯ ಮಾದರಿ ಸಮೀಕ್ಷೆ ಮಾರ್ಗಸೂಚಿಯಂತೆ 1945-46 ರಿಂದ ಬೆಳೆ ಅಂದಾಜು ಸಮೀಕ್ಷೆಯಡಿ ರಾಜ್ಯದಲ್ಲಿ ಬೆಳೆಯಲಾಗುತ್ತಿರುವ ವಿವಿಧ ಬೆಳೆಗಳಿಗೆ ಕೃಷಿ ಇಲಾಖೆಯಿಂದ ಅಧಿಸೂಚಿತ ಬೆಳೆಗಳ ಬೆಳೆ ಕಟಾವು ಪ್ರಯೋಗಗಳನ್ನು ಕಂದಾಯ ಕೃಷಿ ತೋಟಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಿಬಂದಿ / ಅಧಿಕಾರಿಗಳ ಸಹಯೋಗದೊಂದಿಗೆ ಕೈಗೊಂಡು ಸರಾಸರಿ ಇಳುವರಿಯನ್ನು ಅಂದಾಜು ಮಾಡಿ ಅದರ ಆಧಾರದ ಮೇಲೆ ರಾಜ್ಯದ ವಿವಿಧ ಬೆಳೆಗಳ ಉತ್ಪನ್ನವನ್ನು ಅಂದಾಜು ಮಾಡುತ್ತಿದೆ.
ಉದ್ದೇಶ: ಸದರಿ ಬೆಳೆ ಕಟಾವು ಪ್ರಯೋಗಗಳನ್ನು ಕೃಷಿ ಇಳುವರಿಯನ್ನು ಅಂದಾಜಿಸಲು ಮಾತ್ರವಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕೃಷಿಯ ಆದಾಯ, ಉತ್ಪಾದನೆ, ಮತ್ತು ಮೇವಿನ ಪ್ರಮಾಣವನ್ನು ಮತ್ತು ಕೃಷಿ ಪ್ರಶಸ್ತಿ ನೀಡಲು ಪ್ರಮುಖ ಪಾತ್ರ ವಹಿಸುತ್ತದೆ. ಬೆಳೆ ವಿಮೆ ನಷ್ಟವನ್ನು ಅಂದಾಜಿಸಿ ವಿಮೆಯನ್ನು ಇತ್ಯರ್ಥಪಡಿಸಲು ಇದರ ದತ್ತಾಂಶವನ್ನು ಉಪಯೋಗಿಸಲಾಗುತ್ತದೆ.
ಮುಂಗಾರು ಬೆಳೆಯು ಎಪ್ರಿಲ್‌ನಿಂದ ಆಗಸ್ಟ್, ಹಿಂಗಾರು ಬೆಳೆಯು ಸೆಪ್ಟೆಂಬರ್‌ನಿಂದ ಡಿಸೆಂಬರ್, ಬೇಸಿಗೆ ಬೆಳೆಯು ಜನವರಿಯಿಂದ ಮಾರ್ಚ್‌ವರೆಗೆ ನಡೆಯಲಿದೆ. ಸಹಾಯಕ ಕಮೀಷನರ್, ತಹಶೀಲ್ದಾರ್‌ಗಳು, ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಬೆಳೆ ಸಮೀಕ್ಷೆ ನಡೆಯಲಿದೆ.
ಬುಧವಾರ ಕಾಪು ತಾಲೂಕಿನ ಮೂಡಬೆಟ್ಟು ಗ್ರಾಮದ ಹೊಲಕ್ಕೆ ಭೇಟಿ ನೀಡಿ ಭತ್ತದ ಬೆಳೆ ಕಟಾವು ಸಮೀಕ್ಷೆಯಲ್ಲಿ ಪಾಲ್ಗೊಂಡು ನಿಖರವಾದ ಫಲಿತಾಂಶಕ್ಕೆ ಅಗತ್ಯವಾದ ಮಾರ್ಗದರ್ಶನ ಮತ್ತು ಸಲಹೆ ನೀಡಿದರು. ಗ್ರಾಮ ಆಡಳಿತಾಧಿಕಾರಿ ಡೇನಿಯಲ್, ಗ್ರಾಮ ಸಹಾಯಕ ಸದಾನಂದ ಅವರು ಬೆಳೆ ಕಟಾವು ಸಮೀಕ್ಷೆಗೆ ಸಹಕರಿಸಿದರು.
ಆ್ಯಪ್‌ನ ಮೂಲಕ ಫಲಿತಾಂಶ
ವೈಜ್ಞಾನಿಕವಾಗಿ ಮತ್ತು ನಿಖರವಾಗಿ ಬೆಳೆ ಕಟಾವು ನಡೆಸಬೇಕು. ಈಗ ನಿಖರವಾದ ಆ್ಯಪ್‌ನ ಮೂಲಕ ನಡೆಯುತ್ತಿದ್ದು ಶೇ. 100 ನಿಖರ ಫಲಿತಾಂಶ ಬರುತ್ತಿದೆ. ಕಾಪು ತಾಲೂಕಿನಲ್ಲಿ ಅತ್ಯಂತ ನಿಖರವಾಗಿ ಬೆಳೆ ಕಟಾವು ಸಮೀಕ್ಷೆ ನಡೆಯುತ್ತಿದೆ.
-ಡಾ| ಪ್ರತಿಭಾ ಆರ್., ತಹಶೀಲ್ದಾರ್, ಕಾಪು