ಹೊಸದಿಲ್ಲಿ: ಗುಜರಾತ್‌ನ ಮಾಜಿ ಸಿಎಂ, ಕಾಂಗ್ರೆಸ್‌ನ ಹಿರಿಯ ನಾಯಕ ಶಂಕರ್‌ಸಿನ್ಹ ವಘೇಲಾ ಶುಕ್ರವಾರ ಶಾಸಕ ಹಾಗೂ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದಿಂದ ಉಚ್ಚಾಟಿಸುವ ಸಂಬಂಧ ಗುರುವಾರ ನನಗೆ ನೋಟಿಸ್ ಬಂದಿತ್ತು ಎನ್ನುವ ಸಂಗತಿ ಯನ್ನು ತಿಳಿಸಿದ ವಘೇಲಾ, “ವಿನಾಶ ಕಾಲೇ ವಿಪರೀತ ಬುದ್ಧಿ’ ಎನ್ನುವ ಮೂಲಕ ತಮ್ಮ ರಾಜೀನಾಮೆಗೆ ಕಾರಣರಾದ ವರನ್ನು ನಯವಾಗಿಯೇ ತಿವಿದಿದ್ದಾರೆ.
77ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗುಜರಾತ್‌ನ ಗಾಂಧಿನಗರದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಮುಂಬರುವ ದಿನಗಳಲ್ಲಿ ಯಾವುದೇ ರಾಜಕೀಯ ಪಕ್ಷವನ್ನು ಸೇರ್ಪಡೆಯಾಗು ವುದಿಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ. ಪಕ್ಷ ತಮ್ಮನ್ನು ನಡೆಸಿಕೊಂಡಿರುವ ಬಗ್ಗೆ ತುಸು ಖಾರವಾಗಿಯೇ ಮಾತನಾಡಿರುವ ವಘೇಲಾ, “ವಿನಾಶ ಕಾಲೇ ವಿಪರೀತ ಬುದ್ಧಿ’ ಎನ್ನುವಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕಾಂಗ್ರೆಸ್ ನನ್ನನ್ನು ಪಕ್ಷ ತೊರೆಯುವಂತೆ ಮಾಡಿದೆ. ಬಹುಶಃ ವಿಸರ್ಜನೆಯ ಸಮಯ ಹತ್ತಿರ ಬಂದಿದೆ ಅನ್ನಿಸುತ್ತದೆ. ಹೀಗಾಗಿ ನಾಯಕರು ಋಣಾತ್ಮಕವಾ ಗಿಯೇ ಯೋಚಿಸುತ್ತಿರುವಂತೆ ಕಾಣಿಸುತ್ತಿದೆ’ ಎಂದಿದ್ದಾರೆ.
ವಘೇಲಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ಯಾವುದೇ ನೋಟಿಸ್ ನೀಡಿಲ್ಲ’ ಎಂದಿದೆ. ಮುಂಬರುವ ಚುನಾವಣೆಗೆ ಸಿಎಂ ಅಭ್ಯರ್ಥಿ ಎನ್ನುವಂತೆ ಪ್ರತಿಬಿಂಬಿಸಿಕೊಂಡಿದ್ದ ವಘೇಲಾ ಅವರ ರಾಜೀನಾಮೆ ಪಕ್ಷಕ್ಕೆ ದೊಡ್ಡ ಮಟ್ಟದಲ್ಲೇ ಹೊಡೆತ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ವೇಳೆ, ರಾಷ್ಟ್ರಪತಿ ಚುನಾವಣೆಯಲ್ಲಿ ಗುಜರಾತ್‌ನಿಂದ ಅಡ್ಡ ಮತದಾನ ನಡೆದಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, “ನಾನು ಮೀರಾಕುಮಾರ್ ಅವರಿಗೇ ಮತ ನೀಡಿದ್ದೇನೆ. ಅಡ್ಡ ಮತದಾನ ನಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದಿದ್ದಾರೆ.
ಛೇ.. ನಾನೇಕೆ ರಾಜೀನಾಮೆ ನೀಡಲಿ, ಸುಳ್ಳು ಸುದ್ದಿ
ಏತನ್ಮಧ್ಯೆ, ಕಾಂಗ್ರೆಸ್‌ನ ಹಿರಿಯ ನಾಯಕಿ ಅಂಬಿಕಾ ಸೋನಿ ಅವರೂ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀ ನಾಮೆ ನೀಡಿದ್ದಾರೆ ಎಂದು ಶುಕ್ರ ವಾರ ಸುದ್ದಿಯಾಗಿತ್ತು. ಈ ಬೆನ್ನಿಗೇ ಇದಕ್ಕೆ ಸ್ಪಷ್ಟನೆ ನೀಡಿದ ಸೋನಿ, “ನನ್ನ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ಎಂದು ಕೇಳಿಕೊಂಡಿದ್ದೇನೆಯೇ ಹೊರತು, ಹುದ್ದೆಗೆ ರಾಜೀನಾಮೆ ನೀಡಿಲ್ಲ. ರಾಜೀನಾಮೆಯ ಪ್ರಶ್ನೆಯೇ ಇಲ್ಲ. ರಾಜಕೀಯ ಲಾಭಕ್ಕಾಗಿ ಯಾರೋ ಇಂಥ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ’ ಎಂದಿದ್ದಾರೆ.
ಅಂಬಿಕಾ ಸೋನಿ ಅವರು ರಾಜೀನಾಮೆ ನೀಡಿದ್ದಾರೆ ಎನ್ನುವುದು ಶುದ್ಧಸುಳ್ಳು. ಆ ರೀತಿಯ ಯಾವುದೇ ಬೆಳವಣಿಗೆ ನಡೆದಿಲ್ಲ. ಪಕ್ಷಕ್ಕೆ ಹೊಡೆತ ಕೊಡಲು ಕೆಲವರು ಯೋಜನೆ ರೂಪಿಸಿ ಈ ವದಂತಿ ಹಬ್ಬಿಸಿದ್ದಾರೆ. ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ, ಗುಜರಾತ್, ಛತ್ತೀಸ್‌ಗಢಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ.
– ರಣದೀಪ್ ಸರ್ಜೆವಾಲಾ,
ಕಾಂಗ್ರೆಸ್ ವಕ್ತಾರ