ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಣ್ಣೂರಿನಿಂದ ತಿರುವನಂತಪುರಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದ ಘಟನೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ತುರ್ತು ಪರಿಸ್ಥಿತಿಗಿಂತ ದೊಡ್ಡ ವಿಚಾರ ಮಾಡುತ್ತಿದ್ದಾರೆ: ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ
ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ವಿಚಾರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕುಟುಂಬ ಸದಸ್ಯರು ಶಾಮೀಲಾಗಿರುವುದಾಗಿ ಆರೋಪಿಸಿದ್ದರು. ನಂತರ ಬಿಜೆಪಿ ಸೇರಿದಂತೆ ವಿಪಕ್ಷಗಳು ಪಿಣರಾಯಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು.
ಏತನ್ಮಧ್ಯೆ ಸಿಎಂ ಪಿಣರಾಯಿ ತಿರುವನಂತಪುರಕ್ಕೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಇಬ್ಬರು ಘೋಷಣೆ ಕೂಗಿ, ಪ್ರತಿಭಟಿಸಿದ್ದರು. ಈ ಸಂದರ್ಭದಲ್ಲಿ ಪಿಣರಾಯಿ ಭದ್ರತಾ ಸಿಬ್ಬಂದಿ ಮತ್ತು ಜಯರಾಜನ್, ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದು ಸಿಐಎಸ್ ಎಫ್ ಗೆ ಹಸ್ತಾಂತರಿಸಿರುವುದಾಗಿ ವರದಿ ತಿಳಿಸಿದೆ.
ಮುಖ್ಯಮಂತ್ರಿಗಳ ಮೇಲೆ ದಾಳಿ ನಡೆಸುವ ವ್ಯವಸ್ಥಿತ ಸಂಚು ಇದಾಗಿದೆ ಎಂದು ಸಿಪಿಐಎಂ ಆರೋಪಿಸಿದೆ. ಆದರೆ ಇದೊಂದು ಪೊಲೀಸ್ ದಬ್ಬಾಳಿಕೆಯ ವಿರುದ್ಧದ ಸಾಂಕೇತಿಕ ಪ್ರತಿಭಟನೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಡಿ.ಸತೀಶನ್ ತಿರುಗೇಟು ನೀಡಿದ್ದಾರೆ. ಕಳೆದ ಒಂದು ವಾರದಿಂದ ಸಿಎಂ ಪಿಣರಾಯಿ 200 ಮಂದಿ ಪೊಲೀಸರ ಬೆಂಗಾವಲಿನಲ್ಲಿ ತಿರುಗಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದರು. ಈ ನಿಟ್ಟಿನಲ್ಲಿ ಪೊಲೀಸರ ದೌರ್ಜನ್ಯದ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ ಎಂದು ಸತೀಶನ್ ತಿಳಿಸಿದ್ದಾರೆ.