ರಘುವರ್ಧನ್ ನಿರ್ದೇಶನದ “ಮಿಸ್ಟರ್ ಎಲ್‌ಎಲ್‌ಬಿ’ ಚಿತ್ರ ಈಗ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಚಿತ್ರದ ಹಾಡು ಮತ್ತು ಟ್ರೇಲರ್ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರತಂಡ ಈಗ ಚಿತ್ರವನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈಗಾಗಲೇ ಚಿತ್ರಕ್ಕೆ ಸುದೀಪ್ ಅವರು ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದರು.
ಆ ಬಳಿಕ ವಕೀಲರು ಚಿತ್ರದ ವೀಡಿಯೋ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕವೂ ಶುಭ ಹಾರೈಸಿದ್ದರು.”ಲ್ಯಾಂಡ್ ಲಾರ್ಡ್ ಭದ್ರ’ ಎಂಬ ವೀಡೀಯೋ ಹಾಡು ಕೂಡ ಜೋರು ಸದ್ದು ಮಾಡುತ್ತಿದ್ದು, ಗೀತರಚನೆಕಾರ ಗೌಸ್‌ಪೀರ್ ಬರೆದ ಹಾಡಿಗೆ ಶಶಾಂಕ್ ಶೇಷಗಿರಿ ದನಿಯಾಗಿದ್ದಾರೆ. ರಘುವರ್ಧನ್ ನಿರ್ದೇಶನದ ನಾಲ್ಕನೆಯ ಚಿತ್ರವಿದು. ಅವರು ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.
ಚಿತ್ರತಂಡದ ಸಹಕಾರ, ಪ್ರೋತ್ಸಾಹದಿಂದ ಯಶಸ್ವಿಯಾಗಿ ಚಿತ್ರ ಮುಗಿಸಿರುವ ಖುಷಿಯಲ್ಲಿರುವ ನಿರ್ದೇಶಕರು, ನಿರ್ಮಾಣಕ್ಕಿಳಿಯುವ ಮೂಲಕ ಅನುಭವದ ಪ್ರಯೋಗ ಮಾಡಿದ್ದಾರೆ. ನಿರ್ಮಾಣದ ಕಷ್ಟವನ್ನೂ ಅರಿತಿದ್ದಾರೆ. ಈಗ ಒಂದೊಳ್ಳೆಯ ಚಿತ್ರ ನಿರ್ದೇಶಿಸಿರುವ ಅವರು ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಉತ್ಸಾಹದಲ್ಲಿದ್ದಾರೆ. ಈ ಚಿತ್ರಕ್ಕೆ ಶಶಿರ್ ನಾಯಕರಾದರೆ, ಅವರಿಗೆ ಲೇಖಾಚಂದ್ರ ನಾಯಕಿ. ಚಿತ್ರಕ್ಕೆ ಮಂಜು ಚರಣ್ ಸಂಗೀತ ನೀಡಿದ್ದಾರೆ.
ಸುರೇಶ್ ಬಾಬು ಅವರು ಕ್ಯಾಮೆರಾ ಹಿಡಿದಿದ್ದಾರೆ. ಇಲ್ಲಿ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಇದೊಂದು ಹಾಸ್ಯಪ್ರಧಾನ ಕಥೆ. ಶೀರ್ಷಿಕೆ ಕೇಳಿದರೆ, ನಾಯಕ ವಕೀಲ ಇರಬಹುದು ಎಂಬ ಅನುಮಾನ ಬರುತ್ತೆ. ಆದರೆ, ಇಲ್ಲಿ ನಾಯಕ ಕೋಟ್ ಹಾಕಲ್ಲ. ಕೋರ್ಟ್ ಮೆಟ್ಟಿಲೂ ಏರುವುದಿಲ್ಲ. ಆದರೆ, ಅವನು ಇಂಜೆಕ್ಷನ್ ಕೊಡುವ ಕಾಯಕ ಮಾಡುತ್ತಿರುತ್ತಾನೆ. ಅವನ ಕಾಟಕ್ಕೆ ಬೇಸತ್ತ ಜನ ಅವನನ್ನು ಊರಿಂದ ಆಚೆ ಓಡಿಸುತ್ತಾರೆ. ಆ ಬಳಿಕ ನಾಯಕ ಎಲ್ಲಿಗೆ ಹೋಗುತ್ತಾನೆ, ಏನು ಮಾಡುತ್ತಾನೆ ಎಂಬುದೇ ಕಥೆ.
ಇಲ್ಲಿ ಹಾಸ್ಯದ ಜತೆಗೆ ಎಮೋಷನ್ಸ್ ಕೂಡ ಇದೆ. ಬಹುತೇಕ ಹೊಸಬರೇ ಇಲ್ಲಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಸುಜಯ್ ಹೆಗಡೆ, ವನಿತಾ, ನಂದಿನಿ, ಶಾಂತಾ ಆಚಾರ್ಯ, ಚರಣ ನಾಗರತ್ನ ಭಾಗ್ಯಶ್ರೀ,ಕೆಂಪೇಗೌಡ, ಗಿರೀಶ್ ಜತ್ತಿ, ನಾರಾಯಣ ಸ್ವಾಮಿ, ಗಣೇಶರಾವ್, ಶಿವಕುಮಾರ ಆರಾಧ್ಯ, ಬೆಂಗಳೂರು ನಾಗೇಶ, ಶ್ರೀನಿವಾಸಗೌಡ್ರು, ರಂಗಸ್ವಾಮಿ, ನಿರಂಜನ್ ನಟಿಸಿದ್ದಾರೆ. ಗಿರೀಶ್ ಕುಮಾರ್ ಸಂಕಲನವಿದೆ. ತ್ರಿಭುವನ್ ನೃತ್ಯ ಮಾಡಿದ್ದಾರೆ.