ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ರವಿವಾರ ಶ್ರೀಕೃಷ್ಣ ದೇವರ ದರ್ಶನ ಪಡೆದು ಪರ್ಯಾಯ ಶ್ರೀ ಪುತ್ತಿಗೆ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ತೀರ್ಥರು, ಅನಂತರ ಪೇಜಾವರ ಮಠಕ್ಕೆ ಭೇಟಿ ನೀಡಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಭೇಟಿಯಾಗಿ ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗಂಭೀರ ಸಮಾಲೋಚನೆ ನಡೆಸಿದರು.
ಕೆಲವು ರಾಜ್ಯಗಳಲ್ಲಿನ ಒಂದೊಂದು ಹಗರಣದ ಮೊತ್ತ ಕೋಟ್ಯಂತರ ರೂ.ಗಳಾಗಿವೆ. ರಾಜಕಾರಣಿಗಳು ಕಾಯ್ದೆ, ಕಾನೂನು, ಸಂವಿಧಾನಗಳೂ ತಮಗೆ ಸಂಬಂಧವೇ ಇಲ್ಲ ಎಂಬಂತೆ ದುರಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.
ಯುವ ಪೀಳಿಗೆಗೆ ದುರಾಸೆಯಿಂದ ದೂರವಿರಲು, ದೇಶಾಭಿಮಾನ ಹಾಗೂ ಮಾನವೀಯತೆಯ ಪಾಠ ಹೇಳಬೇಕಾಗಿದೆ ಎಂದರು.
ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ಹಗರಣವೊಂದರ ತನಿಖೆ ಮಾಡಿದ ಸಂದರ್ಭದಲ್ಲಿ ಅವರು ನನಗೆ ಕರೆ ಮಾಡಿ ಏರುಧ್ವನಿಯಿಂದ ಗದರಿಸಿದರು. ಆಗ ನಾನು ಹೇಳಿದೆ. ನಿಮ್ಮ ಏರುಧ್ವನಿಯ ಗದರಿಕೆ ಬೇಕಿಲ್ಲ. ಭೂ ಲೋಕದಲ್ಲಿ ನನಗೆ ಇರುವುದು ಒಂದೇ ಮನೆ, ಒಬ್ಬಳೇ ಹೆಂಡತಿ. ನಿಮ್ಮ ಅಪ್ಪನಂತೆಯೇ ನನ್ನ ತಂದೆಯವರೂ ರಾಜಕಾರಣಿಯಾಗಿದ್ದವರು. ಆದರೆ ಭ್ರಷ್ಟರಾಗಿರಲಿಲ್ಲ. ನನ್ನ ಊರು ನನ್ನ ಮನೆ ನನ್ನ ಶಾಲೆಗಳು ನನಗೆ ದುರಾಸೆ ಮತ್ತು ದೇಶದ ಸಂಪತ್ತನ್ನು ಲೂಟಿ ಹೊಡೆಯುವಂತೆ ಹೇಳಿ ಕೊಟ್ಟಿಲ್ಲ ಎಂದಿದ್ದೆ. ರಾಜ್ಯದ 1,836 ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ತಿಳಿ ಹೇಳುವ ಕೆಲಸ ಮಾಡುತ್ತಿದ್ದೇನೆ ಎಂದು ಸಂತೋಷ್ ಹೆಗ್ಡೆ ಹೇಳಿದರು.
ಯತಿತ್ರಯರು ಹೆಗ್ಡೆಯವರ ವಿಚಾರಗಳಿಗೆ ಸಹಮತ ವ್ಯಕ್ತಪಡಿಸಿ ಅವರಿಗೆ ಫಲ ಮಂತ್ರಾಕ್ಷತೆ ನೀಡಿ ಹರಸಿದರು.