ಬೀದರ್ : ಗೋವುಗಳ ಸಂರಕ್ಷಣೆಗಾಗಿ ರಾಜ್ಯದ ಪ್ರತಿ ತಾಲೂಕಿಗೆ ಎರಡು ಗೋ ಶಾಲೆಗಳನ್ನು ಮಂಜೂರು ಮಾಡಲು ಚಿಂತನೆ ನಡೆದಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯ ಸರ್ಕಾರಿ ಮತ್ತು ಖಾಸಗಿ ಸೇರಿ ೧೬೪ ಗೋ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಗೋ ಹತ್ಯೆ ಕಾಯ್ದೆ ಜಾರಿ ಹಿನ್ನಲೆ ಗೋವುಗಳ ಸಂರಕ್ಷಣೆಗೆ ಅನುಕೂಲವಾಗುವಂತೆ ಗೋ ಶಾಲೆಗಳನ್ನು ಹೆಚ್ಚಿಸುವುದು ಮತ್ತು ಅಲ್ಲಿ ಮೂಲ ಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುತ್ತಿದೆ. ಜಾನುವಾರುಗಳ ಸಂರಕ್ಷಣೆ, ರೈತರು ಮತ್ತು ಜಾನುವಾರು ಸಾಕಣೆದಾರರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಇಲ್ಲಿಯವರೆಗೆ ಯಾವುದೇ ಹಕ್ಕಿ ಜ್ವರ ಪ್ರಕರಣಗಳು ಕಂಡು ಬಂದಿಲ್ಲ. ಆದರೂ ಎಚ್ಚರಿಕೆ ವಹಿಸುವಂತೆ ಪಶು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪ್ರಕರಣಗಳು ವರದಿಯಾದಲ್ಲಿ ಕೂಡಲೇ ರಕ್ತ ಪರೀಕ್ಷೆ ಸೇರಿದಂತೆ ರೋಗ ನಿಯಂತ್ರಣಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜತೆಗೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮುಂಜಾಗ್ರತೆ ವಹಿಸಲು ತಿಳಿಸಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:2ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿಗೆ ಆಧಾರ್ ಬೇಕಿಲ್ಲ;ವಿತ್ತ ಇಲಾಖೆ ಸ್ಪಷ್ಟನೆಯಲ್ಲೇನಿದೆ?
ಬೀದರ್ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನಶ್ಚೇತನ ಸಂಬಂಧ ಶೀಘ್ರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.