ವಾಷಿಂಗ್ಟನ್ : ಏಳು ಮುಸ್ಲಿಂ ದೇಶಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶಿಸುವುದಕ್ಕೆ ನಿಷೇಧ ಹೇರಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ತಾನು ತಾತ್ಕಾಲಿಕ ತಡೆಯಾಜ್ಞೆ ನೀಡುವುದಾಗಿ ವಾಷಿಂಗ್ಟನ್ ನ ಫೆಡರಲ್ ಜಡ್ಜ್ ಓರ್ವರು ಹೇಳಿದ್ದು ಅವರ ಈ ಹೇಳಿಕೆಯು ಅಧ್ಯಕ್ಷ ಟ್ರಂಪ್ ಅವರನ್ನು ತೀವ್ರವಾಗಿ ಕೆಣಕಿದೆ.
ಈಚೆಗಷ್ಟೇ ತನ್ನ ಅಮೆರಿಕ ಪ್ರವೇಶ ನಿಷೇಧಾಜ್ಞೆಯನ್ನು ಧಿಕ್ಕರಿಸಿದ ಕಾರಣಕ್ಕೆ ದೇಶದ ಅಟಾರ್ನಿ ಜನರಲ್ ರನ್ನು ವಜಾಗೊಳಿಸಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇದೀಗ ದೇಶದ ನ್ಯಾಯಾಂಗದ ಮೂಲಕ ಇನ್ನೊಂದು ತಡೆ ಎದುರಾದಂತಾಗಿದೆ.
ನ್ಯಾಯಾಧೀಶರ ತಾತ್ಕಾಲಿಕ ತಡೆಯಾಜ್ಞೆಯ ನೆಲೆಯಲ್ಲಿ, ಟ್ರಂಪ್ ಆದೇಶದಿಂದ ಅಮೆರಿಕ ಪ್ರವೇಶಿಸಲಾಗದ ಮಂದಿಗೆ ಈಗ ಅನುಮತಿ ನೀಡುವುದಕ್ಕೆ ಟ್ರಂಪ್ ಆಡಳಿತದ ಅಧಿಕಾರಿಗಳು ಮುಂದಾಗಿರುವುದಾಗಿ ವಿಪರ್ಯಾಸಕರವಾಗಿದೆ ಎಂದು ತಿಳಿಯಲಾಗಿದೆ.
ಅಮೆರಿಕ ಪ್ರವೇಶ ನಿರ್ಬಂಧಿಸುವ ಅಧ್ಯಕ್ಷ ಟ್ರಂಪ್ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡುತ್ತಿರುವುದಾಗಿ ನ್ಯಾಯಾಧೀಶ ಜೇಮ್ಸ್ ರಾಬರ್ಟ್ ಹೇಳಿರುವ ಬೆನ್ನಿಗೇ ಅಮೆರಿಕದ ಅಧಿಕಾರಿಗಳು ವಲಸಿಗರನ್ನು ಕರೆತರುವ ವಿಮಾನಯಾನ ಸಂಸ್ಥೆಗಳನ್ನು ಈ ಕೂಡಲೇ ಸಂಪರ್ಕಿಸುತ್ತಿದ್ದಾರೆ.
ಆದರೆ ಇದೇ ವೇಳೆ ಶ್ವೇತ ಭವನವು ಒಂದು ಹೇಳಿಕೆಯನ್ನು ಹೊರಡಿಸಿ, “ನ್ಯಾಯಾಂಗ ವ್ಯವಹಾರಗಳ ಇಲಾಖೆಯು ಸಾಧ್ಯವಿರುವಷ್ಟು ಬೇಗನೆ ನ್ಯಾಯಾಧೀಶರ ಜೇಮ್ಸ್ ರಾಬರ್ಟ್ ಅವರ ಪ್ರಚೋದನಕಾರಿ ತೀರ್ಪಿಗೆ ತುರ್ತು ತಡೆ ಕೋರುವ ಅರ್ಜಿಯನ್ನು ಸಲ್ಲಿಸಲಿದೆ’ ಎಂದು ಹೇಳಿದೆ. ಈ ಹೇಳಿಕೆ ಹೊರಡಿಸಿದ ಕೆಲವೇ ಕ್ಷಣಗಳಲ್ಲಿ ಶ್ವೇತಭವನವು ತನ್ನ ಹೇಳಿಕೆಯಲ್ಲಿನ “ಪ್ರಚೋದನಕಾರಿ’ ಪದವನ್ನು ಕಿತ್ತು ಹಾಕಿದೆ.