Advertisement

ಸಾಕುನಾಯಿಗಳಿಗೆ ಪರವಾನಗಿ ಜತೆಗೆ ಮೈಕ್ರೊಚಿಪ್‌ ಅಳವಡಿಕೆ

11:53 AM Apr 15, 2017 | |

ಬೆಂಗಳೂರು: ರಾಜಧಾನಿ ಬೆಂಗಳೂರಿನ ನಾಗರಿಕರು ಇನ್ಮುಂದೆ  ತಮ್ಮ ಮನೆಗಳಲ್ಲಿ ನಾಯಿ ಸಾಕಲು ಬಿಬಿಎಂಪಿ ಪರವಾನಗಿ ಪಡೆಯುವುದು ಕಡ್ಡಾಯವಾಗಲಿದ್ದು, ಈ ಕುರಿತ ಪಾಲಿಕೆ ಪ್ರಸ್ತಾ­ವನೆಗೆ ನಗರಾಭಿವೃದ್ಧಿ ಇಲಾಖೆಯಿಂದ ಸದ್ಯದಲ್ಲೇ ಅನುಮತಿ ದೊರೆಯುವ ಸಾಧ್ಯತೆಯಿದೆ. 

Advertisement

ಪಾಲಿಕೆಯ ಪಶುಪಾಲನಾ ಇಲಾಖೆ ಅಧಿಕಾರಿ­ಗಳು ಕೆಲ ತಿಂಗಳ ಹಿಂದೆ ನಾಯಿ ಸಾಕುವ ಸಂಬಂಧ ನಿಯಮಾವಳಿ ರೂಪಿಸಿ, ಸರ್ಕಾರದ ಅನುಮೋದನೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದರು. ನಗರಾ­ಭಿವೃದ್ಧಿ ಇಲಾಖೆಯಿಂದ ಅಧಿಸೂಚನೆ ಹೊರಡಿಸಿದ ಕೂಡಲೇ ನಾಯಿ ಸಾಕಲು ಪರ­ವಾನಗಿ ಪಡೆಯುವುದು ಕಡ್ಡಾಯ­ವಾಗಲಿದೆ.

2013ರಲ್ಲಿಯೇ ನಾಯಿ ಸಾಕಲು ಪರವಾನಗಿ ನೀಡುವ ಸಂಬಂಧ ನಿಯಮ ರೂಪಿಸಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿತ್ತು. ಆದರೆ, ಅದು ಸಮರ್ಪಕವಾಗಿಲ್ಲವೆಂದು ತಿರಸ್ಕೃತ­ಗೊಂಡಿತ್ತು. ಅಧಿಕಾರಿಗಳು ಆ ಪ್ರಸ್ತಾವನೆ ಪರಿಷ್ಕರಿಸಿ ಮತ್ತೂಮ್ಮೆ ಸಲ್ಲಿಸಿದ್ದರು. 

ಪರವಾನಗಿ ಶುಲ್ಕ 250 ರೂ: ಮಾಲೀಕರು ನಾಯಿ ಸಾಕಲು ಪರವಾನಗಿ ಪಡೆಯಲು ಬಿಬಿಎಂಪಿಗೆ 250 ರೂ. ಶುಲ್ಕ ಪಾವತಿಸಬೇಕು. ಅಪಾರ್ಟ್‌ಮೆಂಟ್‌ಗಳಲ್ಲಿ ಒಂದು ಫ್ಲ್ಯಾಟ್‌ಗೆ ಒಂದು ನಾಯಿ ಮತ್ತು ಪ್ರತ್ಯೇಕ ಮನೆಗಳಲ್ಲಿ 2 ಅಥವಾ3 ನಾಯಿ ಸಾಕಲು ಮಾತ್ರ ಅವಕಾಶ ನೀಡ­ಲಾಗುತ್ತದೆ. ಜತೆಗೆ ಅತಿ ದೊಡ್ಡದಾದ ಅಥವಾ ಆಕ್ರಮಣಕಾರಿ ವರ್ತನೆ ತೋರುವ ತಳಿಯ ನಾಯಿ ಸಾಕಲು ಅನುಮತಿ ಸಿಗುವುದಿಲ್ಲ.  

ಸಾರ್ವಜನಿಕ ಸ್ಥಳಗಳಲ್ಲಿ ಸಾಕು ನಾಯಿ ಮಲ, ಮೂತ್ರ ವಿಸರ್ಜಿಸುವುದು ಕಂಡುಬಂದರೆ ಮೊದಲ ಬಾರಿಗೆ 100 ರೂ. ಮತ್ತು ಎರಡನೇ ಬಾರಿ ಪುನರಾವರ್ತನೆಯಾದರೆ ದಂಡದ ಮೊತ್ತ ದ್ವಿಗುಣಗೊಳ್ಳಲಿದೆ. ಜತೆಗೆ ಪ್ರತಿವರ್ಷ ನಾಯಿ ಸಾಕಲು ಪರವಾನಗಿ ನವೀಕರಿಸಿಕೊಳ್ಳುವುದು ಕಡ್ಡಾಯವಾಗಿರು­ತ್ತದೆ. 

Advertisement

ಮೈಕ್ರೋಚಿಪ್‌ ಕಡ್ಡಾಯ
ನಾಯಿ ಸಾಕುವವರು ಕಡ್ಡಾಯವಾಗಿ ನಾಯಿಗಳಿಗೆ ಮೈಕ್ರೋಚಿಪ್‌ ಅಳವಡಿಕೆ ಮಾಡಬೇಕೆಂಬ ನಿಯಮವನ್ನು ಪ್ರಸ್ತಾವನೆಯಲ್ಲಿ ಸೇರಿಸಲಾಗಿದ್ದು,  ಚಿಪ್‌ನಲ್ಲಿ ನಾಯಿ ಹಾಗೂ ಮಾಲೀಕರ ಕುರಿತ ಸಂಪೂರ್ಣ ಮಾಹಿತಿ ಹಾಕಬೇಕು. ಚಿಪ್‌ ಅಳವಡಿಕೆಯಿಂದ ನಾಯಿಯ ವಯಸ್ಸು, ತಳಿ, ರೇಬಿಸ್‌ ಲಸಿಕೆ ಹಾಕಿಸಲಾಗಿದೆಯೇ, ನಾಯಿಯ ಮಾಲೀಕರ ವಿವರ ಇರಲಿದೆ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಾಯಿಗಳನ್ನು ಸಾಕಲು ಕಡ್ಡಾಯವಾಗಿ ಪರವಾನಗಿ ಪಡೆಯುವುದು ಸೇರಿ ಹಲವು ನಿಯಮಗಳ ಜಾರಿಗೆ ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಶೀಘ್ರದಲ್ಲಿಯೇ ಅನುಮೋದನೆ ದೊರೆಯುವ ವಿಶ್ವಾಸವಿದ್ದು, ಸರ್ಕಾರದಿಂದ ಅಧಿಸೂಚನೆ ಹೊರಡಿಸಿದ ಕೂಡಲೇ ಪರವಾನಗಿ ಕಡ್ಡಾಯಗೊಳಿಸ ಲಾಗುವುದು.
-ಆನಂದ್‌, ಪಾಲಿಕೆಯ ಪಶುಪಾಲನೆ ಇಲಾಖೆಯ ಜಂಟಿ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next