ಹೊಸದಿಲ್ಲಿ: ಭಾರತ 19 ನಾಯಕನಾಗಿ ವಿಶ್ವಕಪ್ ಗೆದ್ದಿದ್ದ ಯಶ್ ಧುಲ್ (Yash Dhull) ಅವರು ಹೃದಯ ಶಸ್ತ್ರಚಿಕಿತ್ಸೆಯ ಬಳಿಕ ಇದೀಗ ಮತ್ತೆ ವೃತ್ತಿಪರ ಕ್ರಿಕೆಟ್ ಗೆ ಆಗಮಿಸಿದ್ದಾರೆ.
ಯಶ್ ಧುಲ್ ಅವರ ಹೃದಯದಲ್ಲಿ ಸಣ್ಣ ಪ್ರಮಾಣದ ರಂಧ್ರ ಇರುವುದು ಪತ್ತೆಯಾಗಿತ್ತು. ಇದೀಗ ಇದರ ಶಸ್ತ್ರ ಚಿಕಿತ್ಸೆ ಮುಗಿದು ಆಡಲು ಬಂದಿದ್ದಾರೆ. ಸದ್ಯ ಯಶ್ ಧುಲ್ ಅವರು ಡೆಲ್ಲಿ ಪ್ರೀಮಿಯರ್ ಲೀಗ್ ನಲ್ಲಿ ಆಡುತ್ತಿದ್ದಾರೆ.
ಭಾರತ ಅಂಡರ್ 23 ತಂಡಕ್ಕಾಗಿ ಬೆಂಗಳೂರಿನ ಎನ್ ಸಿಎ (NCA) ಕ್ಯಾಂಪ್ ನಲ್ಲಿದ್ದ ವೇಳೆ ಯಶ್ ಧುಲ್ ಅವರ ಹೃದಯದ ಸಮಸ್ಯೆ ಬಗ್ಗೆ ತಿಳಿದುಬಂದಿದೆ. ಬಳಿಕ ಶಸ್ತ್ರಚಿಕಿತ್ಸೆಗೆ ಯುವ ಆಟಗಾರ ಒಳಗಾಗಿದ್ದಾರೆ.
ಕಳೆದೊಂದು ದಶಕದಿಂದ ಧುಲ್ ಅವರ ಕೋಚ್ ಆಗಿರುವ ರಾಜೇಶ್ ನಾಗರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. “ಇದು ದೊಡ್ಡ ಶಸ್ತ್ರಚಿಕಿತ್ಸೆಯಾಗಿರಲಿಲ್ಲ. ಅವರು ಚೇತರಿಸಿಕೊಳ್ಳಲು ಸುಮಾರು 10 ರಿಂದ 15 ದಿನಗಳನ್ನು ತೆಗೆದುಕೊಂಡರು. ಅವರ ಆಟ ಮತ್ತು ಫಿಟ್ನೆಸ್ ವಿಷಯದಲ್ಲಿ ಅವರು ಪ್ರಸ್ತುತ ಶೇ.100 ರಷ್ಟು ಫಿಟ್ ಆಗಿಲ್ಲ, ಅವರು ಸುಮಾರು 80 ಪ್ರತಿಶತ ಆಗಿದ್ದಾರೆ. ಆದರೆ ಸಾಕಷ್ಟು ಗುಣಮುಖವಾಗಿದ್ದಾರೆ ಎಂದು ನಾನು ಹೇಳುತ್ತೇನೆ” ಎಂದು ನಾಗರ್ ಹೇಳಿದರು.
ಹೃದಯದಲ್ಲಿನ ರಂಧ್ರವು ಸಾಮಾನ್ಯವಾಗಿ ಜನ್ಮತಃ ಪತ್ತೆಯಾಗುತ್ತದೆ. ಆದರೆ ಧುಲ್ ಪ್ರಕರಣದಲ್ಲಿ ಜೂನ್-ಜುಲೈನಲ್ಲಿ ಎನ್ ಸಿಎ ಯಲ್ಲಿದ್ದಾಗ ಇದು ಪತ್ತೆಯಾಗಿದೆ.
“ಇದು ಒಂದು ಸಣ್ಣ ರಂಧ್ರವಾಗಿತ್ತು. ಹುಟ್ಟಿನಿಂದಲೂ ಇದೆ ಆದರೆ ಅದು ಈಗ ಪತ್ತೆಯಾಗಿದೆ. ಅವನು ಶೀಘ್ರದಲ್ಲೇ ತನ್ನ ಉತ್ತಮ ಸ್ಥಿತಿಗೆ ಮರಳುತ್ತಾನೆ” ಎಂದು ನಾಗರ್ ಹೇಳಿದರು.
ಯಶ್ ಧುಲ್ ಪ್ರಸ್ತುತ ಡೆಲ್ಲಿ ಪ್ರೀಮಿಯರ್ ಲೀಗ್ ನಲ್ಲಿ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಪರ ಆಡುತ್ತಿದ್ದಾರೆ. ಐದು ಇನ್ನಿಂಗ್ಸ್‌ಗಳಲ್ಲಿ, ಅವರು 113.41 ಸ್ಟ್ರೈಕ್ ರೇಟ್‌ನಲ್ಲಿ 93 ರನ್ ಗಳಿಸಿದ್ದಾರೆ.