Advertisement

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

04:54 PM Sep 07, 2024 | Team Udayavani |

ಮುಧೋಳ: ಪಟ್ಟಣ ಪಂಚಾಯಿತಿಯಾಗಿ ವರ್ಷ ಕಳೆಯುತ್ತ ಬಂದರೂ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಯಂ ಮುಖ್ಯ ವೈದ್ಯಾಧಿಕಾರಿಯಿಲ್ಲದೆ ರೋಗಿಗಳು ಸೂಕ್ತ ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಲೋಕಾಪುರ‌ ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆಗೆ ಆಗಮಸುತ್ತಾರೆ. ಆದರೆ ಪ್ರಭಾರಿಯಲ್ಲಿರುವ ಮುಖ್ಯ ವೈದ್ಯಾಧಿಕಾರಿಗಳಿಂದ ಎರೆಡೆರಡು ಕಡೆಯಲ್ಲಿ ಸೇವೆ ಸಲ್ಲಿಸಬೇಕಾದ ಅನಿವಾರ್ಯತೆ ಇರುವುದರಿಂದ ದೊಡ್ಡ ಪಟ್ಟಣವಾಗಿರುವ ಲೋಕಾಪುರದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಎಂಬುದು ಗಗನಕುಸುಮವಾಗಿದೆ.

10ತಿಂಗಳಿಂದ ಪ್ರಭಾರ ಹುದ್ದೆ : ಲೋಕಾಪುರ ಪಟ್ಟಣದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಮುಖ್ಯವೈದ್ಯಾಧಿಕಾರಿ ಹುದ್ದೆಗೆ ಪ್ರಭಾರ ನೇಮಕ ಮಾಡಿ ಸರಿಸುಮಾರು 10ತಿಂಗಳುಗಳೇ ಗತಿಸಿವೆ. ಖಾಯಂ ಹುದ್ದೆಯಲ್ಲಿದ್ದ ಮುಖ್ಯ ವೈದ್ಯಾಧಿಕಾರಿ ಉನ್ನತ ವ್ಯಾಸಂಗಕ್ಕಾಗಿ ತೆರಳಿದ ಮೇಲೆ ತಾತ್ಕಾಲಿಕವಾಗಿ ಪ್ರಭಾರ ಹುದ್ದೆಯನ್ನು ಸೃಜಿಸಲಾಗಿತ್ತು. ಆದರೆ ಇಂದಿಗೂ ಸಹ ಖಾಯಂ ಮುಖ್ಯ ವೈದ್ಯಾಧಿಕಾರಿ ನೇಮಕ ಮಾಡಲಾರದ ಕಾರಣ ಸಾರ್ವಜನಿಕರು ಆಸ್ಪತ್ರೆಯಲ್ಲಿ ಗಂಟೆಗಟ್ಟಲೆ‌ ಸರದಿ‌ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆಯುವ ಅನಿವಾರ್ಯತೆ ಸೃಷ್ಠಿಯಾಗಿದೆ.

ಹುದ್ದೆಗಳೆಲ್ಲ ಖಾಲಿ ಖಾಲಿ : ಮುಖ್ಯ ವೈದ್ಯಾಧಿಕಾರಿ ಹೊರತುಪಡಿಸಿ ಪ್ರಾಥಮಿಕ‌‌ ಕೇಂದ್ರದಲ್ಲಿ ಇನ್ನು ಹಲವಾರು ಹುದ್ದೆಗಳು ಖಾಲಿ ಇವೆ. ಅನೇಕ ವರ್ಷಗಳಿಂದ ಖಾಲಿಯಿರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಅಧಿಕಾರಿಗಳು ಯಾವುದೇ ರೀತಿಯ ಕ್ರಮಕ್ಕೆ ಮುಂದಾಗಿಲ್ಲ‌. ಇದರಿಂದಾಗಿ ರೋಗಿಗಳು ಹಲವಾರು ಸಮಸ್ಯೆ ಅನುಭವಿಸುವುದರೊಂದಿಗೆ ಪ್ರಸ್ತುತ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹೆಚ್ಚಿನ ಕೆಲಸದೊತ್ತಡ ಉಂಟಾಗುತ್ತಿದೆ.

Advertisement

ಆಸ್ಪತ್ರೆಗೆ ಅವಶ್ಯವಿರುವ ಇಬ್ಬರು ಅಟೆಂಡರ್, ಓರ್ವ ಫಾರ್ಮಾಸಿಸ್ಟ್ ಹಾಗೂ ಓರ್ವ ಹಿರಿಯ ಆರೋಗ್ಯ ಸಹಾಯಕ‌ಹುದ್ದೆಗಳು ಹಲವಾರು ವರ್ಷಗಳಿಂದ ಖಾಲಿಯಿದ್ದು, ಈಗಿರುವ ಸಿಬ್ಬಂದಿಯೇ ಒತ್ತಡದಲ್ಲಿ ಚಿಕಿತ್ಸೆ ನೀಡುವಂತಾಗಿದೆ. ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಖಾಲಿಯಿರುವ ಹುದ್ದೆಗಳನ್ನು ಶೀಘ್ರ ಭರ್ತಿಮಾಡಿ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಬೇಕು ಎಂಬುದು ಜನರ ಆಗ್ರಹವಾಗಿದೆ.

200ಕ್ಕೂ ಅಧಿಕ ಒಪಿಡಿ : ಇತ್ತೀಚಿನ ವರ್ಷಗಳಲ್ಲಿ ಗ್ರಾಮ ಪಂಚಾಯತಿಹಿಂದ ಪಟ್ಟಣ ಪಂಚಾಯಿತಿಯಾಗಿ‌ ಮೇಲ್ದರ್ಜೆಗೇರಿರುವ ಲೋಕಾಪುರ ಪಟ್ಟಣ ವ್ಯಾಪಾರ, ವಹಿವಾಟು ದೃಷ್ಟಿಯಿಂದಲೂ ಹೆಚ್ಚು ಅಭಿವೃದ್ದಿ ಹೊಂದಿದೆ. ಪಟ್ಟಣಕ್ಕೆ ನಿತ್ಯ ಸಾವಿರಾರು ಜನರು ವಿವಿಧ ಕೆಲಸ ಕಾರ್ಯಗಳಿಗಾಗಿ ಆಗಮಿಸುತ್ತಾರೆ. ಅದೇರೀತಿ ಆರೋಗ್ಯ ಕೇಂದ್ರದಲ್ಲಿ ಹೊರರೋಗಿಗಳ ದಟ್ಟಣೆಯೂ ಹೆಚ್ಚಿದೆ. ಪ್ರತಿನಿತ್ಯ 200-300 ವರೆಗೆ ಹೊರರೋಗಿಗಳು ತಪಾಸಣೆಗೊಳಪಡುತ್ತಾರೆ‌. ಹೆಚ್ಚು ಜನದಟ್ಟಣೆಯಿರುವ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

50000 ಜನಸಂಖ್ಯೆ : ಲೋಕಾಪುರ ಆಸ್ಪತ್ರೆ ವ್ಯಾಪ್ತಿಯಲ್ಲಿ ಸರಿಸುಮಾರು 52000 ಜನಸಂಖ್ಯೆ ಇದೆ. ವರ್ಚಗಲ್ಲ, ಭಂಟನೂರ, ಚಿಕ್ಕೂರ, ಚಿಕ್ಕೂರ ತಾಂಡಾ, ಚಿತ್ರಭಾನುಕೋಟಿ, ದಾದನಟ್ಟಿ, ಮುದ್ದಾಪುರ, ಜುನ್ನೂರ, ಚವಡಾಪುರ, ಲೋಕಾಪುರ ಸೇರಿದಂತೆ ಇನ್ನೂ ಹಲವಾರು ಹಳ್ಳಿಗಳು ಇದೇ ಆಸ್ಪತ್ರೆ ವ್ಯಾಪ್ತಿಗೊಳಪಡುತ್ತವೆ. ಇಷ್ಟೊಂದು ಜನಸಂಖ್ಯಾ ವ್ಯಾಪ್ತಿಯನ್ನು ಹೊಂದಿರುವ ಆಸ್ಪತ್ರೆಯಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯುವುದು ಕಷ್ಟಸಾಧ್ಯವೆನಿಸಿದೆ.

ನನಸಾಗುತ್ತಿಲ್ಲ ಸಮುದಾಯ ಆರೋಗ್ಯ ಕೇಂದ್ರ ಕನಸು : ಜನಸಂಖ್ಯೆ, ಹೊರರೋಗಿಗಳ ಜನದಟ್ಟಣೆ,‌ ಪಟ್ಟಣದ ವ್ಯಾಪಾರ ವಹಿವಾಟು ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಲು ಇರುವ ಎಲ್ಲ ಮಾನದಂಡಗಳಿದ್ದರೂ ಜನಪ್ರತಿನಿಧಿಗಳ ನಿರ್ಲಕ್ಷ ಮೇಲಧಿಕಾರಿಗಳ‌ ಇಚ್ಛಾಶಕ್ತಿ ಕೊರತೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಇದೂವರೆಗೂ ಸಮಯದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೇಗೇರಿಲ್ಲ. ಸ್ಥಳೀಯ ಪ್ರಜ್ಞಾವಂತರು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿಗಳು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಮೇಲ್ದರ್ಜೆಗೇರಿದರೆ ಉಪಯೋಗವೇನು : ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿದರೆ ಹತ್ತಾರು ಅನುಕೂಲಗಳಾಗುತ್ತವೆ. ಸದ್ಯ 8 ಬೆಡ್ ವ್ಯವಸ್ಥೆಯಿರುವ ಆಸ್ಪತ್ರೆ 30ಬೆಡ್ ಗೆ ಪರಿವರ್ತನೆಯಾಗಲಿದೆ. ಸ್ತೀರೋಗ, ಮಕ್ಕಳ ತಜ್ಞರು, ಹೆರಿಗೆ ತಜ್ಞರು ಸೇರಿದಂತೆ ನುರಿತ ವೈದ್ಯರ ಹುದ್ದೆಗಳು ಸೃಷ್ಟಿಯಾಗಲಿವೆ. ಸ್ಟಾಪ್ ನರ್ಸ್ಗಳ ಸಂಖ್ಯೆ ಹೆಚ್ಚಳ ಹಾಗೂ ಆಸ್ಪತ್ರೆಯಲ್ಲಿ ಹಲವಾರು ಮಾರ್ಪಾಡುಗಳುಂಟಾಗುತ್ತವೆ. ಇದರಿಂದ ಈ ಭಾಗದ ಜನರಿಗೆ ಹೆಚ್ಚು ನರವಾಗಲಿದೆ ಎಂಬುದು ಸ್ಥಳೀಯರ ಮಾತು.

ಶೀಘ್ರದಲ್ಲಿಯೇ ವೈದ್ಯಾಧಿಕಾರಿಗಳ ಮೌಖಿಕ ಸಂದರ್ಶನವಾಗುತ್ತಿದ್ದು, ನೇಮಕವಾದ ಕೂಡಲೇ ಲೋಕಾಪುರ ಆಸ್ಪತ್ರೆಗೆ ಖಾಯಂ ವೈದ್ಯಾಧಿಕಾರಿಗಳ ನೇಮಕಾತಿ ಮಾಡಲಾಗುವುದು.
– ಡಾ.ವೆಂಕಟೇಶ ಮಲಘಾಣ ತಾಲೂಕು ಆರೋಗ್ಯಾಧಿಕಾರಿ‌ ಮುಧೋಳ

ಲೋಕಾಪುರ ಪಟ್ಟಣ ನಾಗಾಲೋಟದಿಂದ ಬೆಳೆಯುತ್ತಿದೆ. ಇಲ್ಲಿನ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು. ಅದಕ್ಕೂ ಮುನ್ನ ಮುಖ್ಯ ವೈದ್ಯಾಧಿಕಾರಿ ನೇಮಕ ಮಾಡಿ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು.
– ಪ್ರಕಾಶ ಚುಳಕಿ

Advertisement

Udayavani is now on Telegram. Click here to join our channel and stay updated with the latest news.