Advertisement
ಎಸ್ಟಿಮೇಟ್ ಮಾಡಿದಷ್ಟು ಹಣದಲ್ಲಿ ಮನೆ ನಿರ್ಮಾಣದ ಕೆಲಸವನ್ನೆಲ್ಲ ಮುಗಿಸಿ, ಗೃಹಪ್ರವೇಶ ಮಾಡಿಕೊಂಡವರು ವಿರಳ. ಎಷ್ಟೇ ಎಚ್ಚರ ವಹಿಸಿದರೂ, ಹೇಗಾದರೂ ಒಂದಷ್ಟು ಹಣ ಹೆಚ್ಚಿಗೇನೇ ಖರ್ಚಾಗಿ, ಕೊನೆಗೆ ಕಾಲಿ ಕೈಯಲ್ಲಿ ಉಳಿಯುವುದು ಇದ್ದದ್ದೇ. ಶುರುವಿನಲ್ಲಿ ಇಲ್ಲದ ಆಸೆ ಆಕಾಂಕ್ಷೆಗಳು ಹಂತಹಂತವಾಗಿ ನಮ್ಮನ್ನು ಆವರಿಸಿ ಕೊಳ್ಳುತ್ತವೆ. “ಜೀವನದಲ್ಲಿ ಮನೆ ಕಟ್ಟುವುದು ಒಮ್ಮೆ ತಾನೆ! ಸ್ವಲ್ಪ ಅದ್ದೂರಿಯಾಗೇ ಕಟ್ಟಿಸೋಣ.
Related Articles
Advertisement
ಮಾಮೂಲಿ ಬಾರ ಹೊರುವ ಗೋಡೆಗಳಿಗೆ ಹೋಲಿಸಿದರೆ, ಆರ್ ಸಿ ಸಿ ಕಾಲಂ ಸ್ಟ್ರಕ್ಚರ್ ದುಬಾರಿ. ಒಂದು ಬೀಮ್ ಹಾಗೂ ಫುಟಿಂಗ್ ಆಗುವ ಖರ್ಚಿನಲ್ಲಿ ಹತ್ತು ಅಡಿ ಇಟ್ಟಿಗೆ ಗೋಡೆ ಕಟ್ಟಬಹುದು. ನೀವು ಒಮ್ಮೆ ಕಾಲಂ ಹಾಕಿದರೂ ಅದರ ಮಧ್ಯೆ ಯಥಾಪ್ರಕಾರ ಇಟ್ಟಿಗೆ ಇಲ್ಲವೇ ಕಾಂಕ್ರಿಟ್ ಬ್ಲಾಕ್ ಗೊಡೆ ಕಟ್ಟಲೇ ಬೇಕಾಗುತ್ತದೆ. ಹಾಗಾಗಿ ಗೋಡೆಗಳ ಲೆಕ್ಕದಲ್ಲಿ, ಆರ್ ಸಿ ಸಿ ಕಾಲಂಗಳಿಗೆ ಮೊರೆ ಹೋದರೆ ನಾವು ಶುರುವಿನಲ್ಲೇ ಒಂದಕ್ಕೆ ಎರಡರಷ್ಟು ಬೆಲೆ ತೆರೆಬೇಕಾದೀತು.
ಆದರೆ ಇತ್ತೀಚಿನ ದಿನಗಳಲ್ಲಿ ನೆಲದ ದರ ಗಗನಕ್ಕೆ ಏರಿರುವುದರಿಂದ, ಇಂದಲ್ಲ ನಾಳೆ ಮೂರು ನಾಲ್ಕು ಮಹಡಿ ಕಟ್ಟುವಂತೆ ಇರಲಿ ಎಂದು ಕಾಲಂಗಳನ್ನು ಏರಿಸಿಯೇ ಬಿಡುತ್ತಾರೆ! ಮಣ್ಣು ದುರ್ಭಲವಾಗಿದ್ದರೆ, ಭೂಕಂಪ ಆಗುವ ಪ್ರದೇಶದಲ್ಲಿದ್ದರೆ ಆರ್‌ಸಿಸಿಗೆ ಮೊರೆ ಹೋಗುವುದು ಅನಿವಾರ್ಯ. ಆದರೆ ಭೂಮಿ ಗಟ್ಟಿಮುಟ್ಟಾಗಿರುವ ಪ್ರದೇಶದಲ್ಲಿ ಭಾರ ಹೊರುವ ಗೋಡೆಗಳನ್ನು ನುರಿತ ಆರ್ಕಿಟೆಕ್ಟ್ ಎಂಜಿನಿಯರ್‌ಗಳ ಸಹಾಯದಿಂದ ವಿನ್ಯಾಸ ಮಾಡಿಸಿಕೊಂಡರ, ಸಾಕಷ್ಟು ಹಣವನ್ನು ಉಳಿಸಬಹುದು.
ಗೋಡೆ ದಪ್ಪ ಕಡಿಮೆ ಮಾಡಿ: ಒಮ್ಮೆ ಅನಿವಾರ್ಯ ಕಾರಣಗಳಿಂದ ದುಬಾರಿ ಆರ್‌ಸಿಸಿ ಕಾಲಂ ಹಾಕಲು ನಿರ್ಧರಿಸಿದ ಮೇಲೆ, ಗೋಡೆಗಳನ್ನೂ ದಪ್ಪ ದಪ್ಪನಾಗಿ, ಭಾರ ಹೊರುವ ರೀತಿಯಲ್ಲಿ ಹಾಕುವ ಅಗತ್ಯ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಒಂಭತ್ತು ಇಂಚಿನ ಇಟ್ಟಿಗೆಯ ಹೊರಗಿನ ಗೋಡೆಗಳಿಗೆ ಬದಲಾಗಿ ಆರು ಇಂಚಿನ ಕಾಂಕ್ರಿಟ್ ಬ್ಲಾಕ್ ಗೋಡೆಗಳು ಜನಪ್ರಿಯವಾಗುತ್ತಿವೆ. ಇವು ಇಟ್ಟಿಗೆ ಗೋಡೆಗಳಿಗಿಂತ ಅಗ್ಗವಾಗಿದ್ದು, ಸರಿಯಾಗಿ ಗುಣ ಮಟ್ಟ ಕಾಯ್ದುಕೊಂಡರೆ ನಮಗೆ ಉತ್ತಮ ಉಳಿತಾಯವನ್ನು ನೀಡಬಲ್ಲವು.
ಆದರೆ ಕಾಂಕ್ರಿಟ್ ಬ್ಲಾಕ್‌ಗಳನ್ನು ಹೊರಗಿನ ಗೋಡೆಗಳಿಗೆ ಬಳಸುವಾಗ ಅವು ಉತ್ತಮ ಗುಣಮಟ್ಟ ಹೊಂದಿದೆಯೇ ಎಂದು ಪರಿಶೀಲಿಸುವುದು ಅತ್ಯಗತ್ಯ. ಇಟ್ಟಿಗೆ ಗೋಡೆಗಳನ್ನು ಕಟ್ಟುವಾಗ ಅವುಗಳನ್ನು ನೆನೆಸಿಯೇ ಕಟ್ಟುವುದರಿಂದ ಅವುಗಳ ಕ್ಯೂರಿಂಗ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ. ಆದರೆ ಕಾಂಕ್ರಿಟ್ ಬ್ಲಾಕ್‌ಗಳನ್ನು ಸಾಮಾನ್ಯವಾಗಿ ನೀರಿನಲ್ಲಿ ನೆನೆಸದೆ ಕಟ್ಟುವುದರಿಂದ, ಅದಕ್ಕೆ ಬಳಸುವ ಸಿಮೆಂಟ್ ಗಾರೆಯಲ್ಲಿನ ನೀರನ್ನೆಲ್ಲ ಬ್ಲಾಕ್ ಕುಡಿದು ಒಣಗಿದರೆ,
ವರಸೆಗೆ ಬಳಸುವ ಗಾರೆ ಕ್ಯೂರಿಂಗ್ ಕಡಿಮೆಯಾಗಿ ಮಳೆಗಾಲದಲ್ಲಿ ಮನೆಯೊಳಗೆ ತೇವ ಬರುವಂತೆ ಆಗಬಹುದು. ಆದುದರಿಂದ ನಾವು ಕಾಂಕ್ರಿಟ್ ಬ್ಲಾಕ್ ಗೋಡೆಗಳನ್ನೂ ಕೂಡ ವಿಶೇಷ ಕಾಳಜಿ ವಹಿಸಿ ಕ್ಯೂರಿಂಗ್ ಮಾಡಬೇಕು. ಹಾಗೆಯೇ ಈ ಗೋಡೆಗಳು ಚೆನ್ನಾಗಿ ಕ್ಯೂರ್ ಆದಮೇಲೆಯೇ ಅವುಗಳ ಮೇಲೆ ಪ್ಲಾಸ್ಟರ್ ಮಾಡಬೇಕು. ಇಲ್ಲದಿದ್ದರೆ, ಗೋಡೆಗಳಿಗೂ ಸರಿಯಾಗಿ ಕ್ಯೂರಿಂಗ್ ಆಗುವುದಿಲ್ಲ. ಪ್ಲಾಸ್ಟರ್ ಕೂಡ ದುರ್ಬಲ ಆಗುವ ಸಾಧ್ಯತೆ ಇರುತ್ತದೆ.
ಸ್ಟೀಲ್ ಹೆಚ್ಚು ಬಳಸಬೇಕೋ ಕಾಂಕ್ರೆಟ್ ಬಳಸಬೇಕೋ…: ಸಾಮಾನ್ಯವಾಗಿ ನಾನಾ ಕಾರಣಗಳಿಂದಾಗಿ ಸ್ಟೀಲ್ ಹಾಗೂ ಸಿಮೆಂಟ್ ಹೆಚ್ಚಾ ಕಡಿಮೆ ಸಮಭಾರ ಹೊರುವಂತೆ ಮಾಡಲಾಗುತ್ತದೆ. ಅನೇಕ ಬಾರಿ ಹೆಚ್ಚು ಉಕ್ಕು ಬಳಸಿದ ಮಾತ್ರಕ್ಕೆ ನಮ್ಮ ಮನೆ ಹೆಚ್ಚು ಸಧೃಢ ಎಂದೇನೂ ಇಲ್ಲ. ಹಾಗಾಗಿ ಸರಿಯಾಗಿ ಭಾರದ ಲೆಕ್ಕಾಚಾರ ಮಾಡಿ, ಎಷ್ಟು ಉಕ್ಕು ಹಾಗೂ ಸಿಮೆಂಟ್ ಇರಬೇಕು ಎಂದು ನಿರ್ಧರಿಸಿದರೆ, ಅನಗತ್ಯವಾಗಿ ದುಬಾರಿ ವಸ್ತು ಹಾಳಾಗುವುದನ್ನು ತಪ್ಪಿಸಬಹುದು. ಬ್ಯಾಲನ್ಸ್‌ಡ್ ಡಿಸೈನ್ ನಿಂದ ಮನೆ ಹೆಚ್ಚು ಗಟ್ಟಿಮುಟ್ಟಾಗಿರುವುದರ ಜೊತೆಗೆ ಬಿರುಕು ಮೂಡುವ ಕಿರಿಕಿರಿ ಕಡಿಮೆ ಆಗುತ್ತದೆ. ಈ ಲೆಕ್ಕಾಚಾರ ಸೂರಿನಲ್ಲಿ ಹೆಚ್ಚು ರುತ್ತದೆ. ಕಾಂಕ್ರಿಟ್ ದಪ್ಪ ಹೆಚ್ಚಿರಬೇಕೋ ಇಲ್ಲವೇ ಹೆಚ್ಚು ಉಕ್ಕು ಹಾಕಿ ಸಣ್ಣನೆಯ ಸ್ಲಾಬ್ ಹಾಕಬೇಕೋ ಎಂಬುದನ್ನೂ ಇದೇ ನಿರ್ಧರಿಸುತ್ತದೆ.
ಹೆಚ್ಚಿನ ಮಾತಿಗೆ ಫೋನ್ 98441 32826
* ಆರ್ಕಿಟೆಕ್ಟ್ ಕೆ. ಜಯರಾಮ್