Advertisement

1990ರಲ್ಲಿ ಅಯೋಧ್ಯೆ ಪ್ರವೇಶಿಸಲು ಪಣತೊಟ್ಟ ಕನ್ನಡಿಗರು

12:05 AM Nov 10, 2019 | Lakshmi GovindaRaju |

ಬೆಂಗಳೂರು: ರಾಮರಥ ಯಾತ್ರೆಗೆ ಕರೆ ಕೊಟ್ಟ ಬೆನ್ನಲ್ಲೇ ದೇಶದ ಮೂಲೆ ಮೂಲೆಗಳಿಂದ ಸಹಸ್ರಾರು ಮಂದಿ ಗುಂಪು ಗುಂಪಾಗಿ ಯಾತ್ರೆಗೆ ಮುಂದಾಗಿದ್ದರು. ಈ ವೇಳೆ ರಾಜ್ಯದಿಂದಲೂ ಅಂದಿನ ಯುವಕರು ರಾಮಜನ್ಮಭೂಮಿಗಾಗಿ ಯಾತ್ರೆಗೆ ಕೈ ಜೋಡಿಸಿದ್ದರು. ರಾಮ ಜನ್ಮಭೂಮಿ ವಿವಾದ ತೀವ್ರತೆ ಪಡೆದುಕೊಳ್ಳುತಿದ್ದಂತೆ ದೇಶದೆಲ್ಲೆಡೆ ಕಟ್ಟೆಚ್ಚರ ವಹಿಸಲಾಯಿತು. ಹೀಗಾಗಿ, ಯಾತ್ರಿಗಳ ಗುಂಪುಗಳನ್ನು ಅಲ್ಲಲ್ಲೇ ತಡೆಯುವ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡಲಾಗುತಿತ್ತು.

Advertisement

1990ರ ಡಿ.25ಕ್ಕೆ ಅಂದಿನ ಬಿಜೆಪಿ ರಾಷ್ಟ್ರಾಧ್ಯಕ್ಷ ಲಾಲ್‌ಕೃಷ್ಣ ಅಡ್ವಾಣಿ ಅವರು ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ರಾಮ ಜನ್ಮಭೂಮಿ ರಥಯಾತ್ರೆಗೆ ಕರೆ ಕೊಟ್ಟರು. ಅದೇ ತಿಂಗಳ 28ರಂದು ರಾಜ್ಯದಿಂದ ಕೆಲ ತಂಡಗಳು ರಥಯಾತ್ರೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಯಿತು. ಈ ಹೊತ್ತಿಗಾಗಲೇ ಉತ್ತರ ಭಾರತದಲ್ಲಿ ರಥಯಾತ್ರೆಯ ಕಿಚ್ಚು ಉತ್ತುಂಗದಲ್ಲಿತ್ತು.

ಲಾಲೂ ಪ್ರಸಾದ್‌ ಯಾದವ್‌ ನೇತೃತ್ವದ ಬಿಹಾರ ಸರ್ಕಾರ ಅಡ್ವಾಣಿ ಅವರನ್ನು ಬಂಧಿಸಲು ಮುಂದಾಗಿತ್ತು. ಅದಾಗಲೇ ಒಂದೂವರೆ ಲಕ್ಷಕ್ಕೂ ಅಧಿಕ ಯುವಕರು ಮತ್ತು ವಿಎಚ್‌ಪಿ ಕರಸೇವಕರು ದೇಶದೆಲ್ಲೆಡೆ ಪಾದಯಾತ್ರೆ ಆರಂಭಿಸಿದ್ದರು. ದೇಶದ ಪ್ರಮುಖ ದೇವಾಲಯಗಳ ಸುತ್ತಮುತ್ತ ಪಾದಯಾತ್ರಿಗಳಿಗೆ ಉಳಿದುಕೊಳ್ಳಲು ಮತ್ತು ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವ್ಯವಸ್ಥೆಗಳನ್ನು ಕರಸೇವಕರು ಮತ್ತು ಸ್ವಯಂ ಸೇವಕರು ನೋಡಿಕೊಳ್ಳುತ್ತಿದ್ದರು.

ಹೀಗಿದ್ದರೂ ರಾಜ್ಯದ ನಾಲ್ಕು ಯುವಕರು ಏನೇ ಆದರೂ ನಾವು ರಾಮ ಜನ್ಮಭೂಮಿಗೆ ಪ್ರವೇಶಿಸುವ ಯಾತ್ರೆಯಲ್ಲಿ ಭಾಗವಾಗಬೇಕೆಂದು ಪಣತೊಟ್ಟು ಅಯೋಧ್ಯೆ ರೈಲು ಹತ್ತಿ ಹೊರಟರು. ಎಚ್‌ಎಎಲ್‌ ಮ್ಯಾನೇಜರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬೆಂಗಳೂರಿನ ಬಿ.ಎಲ್‌.ಮೂರ್ತಿ, ಕೊಡಗು ಮೂಲದ ಸೋಮೇಶ್‌, ಹೊಸಕೋಟೆಯ ಶಂಕರ್‌ ನಿಕಮ್‌, ಕೆಎಸ್‌ಆರ್‌ಟಿಸಿಯಲ್ಲಿ ಕಾರ್ಯ ನಿರ್ವಹಿಸುತಿದ್ದ ಸೂರ್ಯನಾರಾಯಣ ಒಂದು ತಂಡವಾಗಿ 1990ರ ಡಿಸೆಂಬರ್‌ 28ಕ್ಕೆ ರಥಯಾತ್ರೆಗೆ ಹೊರಡುತ್ತಾರೆ. 30ನೇ ತಾರೀಕು ಈ ತಂಡ ನೇರವಾಗಿ ಹೋರಾಟದ ಕೇಂದ್ರ ಸ್ಥಳ ಅಯೋಧ್ಯೆಗೆ ತಲುಪಿ, ಅಶೋಕ್‌ ಸಿಂಘಾಲ್‌ ಅವರನ್ನು ಭೇಟಿಯಾದ ದಿನಗಳನ್ನು ನೆನಪು ಬಿ.ಎಲ್‌. ಮೂರ್ತಿ “ಉದಯವಾಣಿ’ ಜತೆ ನೆನಪಿಸಿಕೊಂಡರು.

“ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಇಡೀ ಅಯೋಧ್ಯೆಗೆ ಪೊಲೀಸ್‌ ಸರ್ಪಗಾವಲು ನಿಯೋಜನೆ ಮಾಡಿದ್ದರು. ಹೀಗಾಗಿ, ಗೋರಖ್‌ ಪುರದಿಂದ ಅಲಹಾಬಾದ್‌( ಇಂದಿನ ಪ್ರಯಾಗ್‌ರಾಜ್‌) ರಸ್ತೆಯುದ್ದಕ್ಕೂ ಒಂದು ಕಡೆ, ಪೊಲೀಸ್‌ ಇನ್ನೊಂದು ಕಡೆ ಕರಸೇವಕರು ನಿಂತಿದ್ದರು. ಈ ವೇಳೆ ಶತಾಯ ಗತಾಯ ರಾಮ ಜನ್ಮಭೂಮಿ ಪ್ರವೇಶಿಸಬೇಕು ಎಂದು ಪಣತೊಟ್ಟಿದ್ದ ಅಶೋಕ್‌ ಸಿಂಘಾಲ್‌ ನೇತೃತ್ವದ 10 ಸಾವಿರಕ್ಕೂ ಅಧಿಕ ಯುವಕರ ತಂಡ ಕೆಲ ನಿಮಿಷಗಳ ಕಾಲ ದಿಕ್ಕು ತೋಚದ ಪರಿಸ್ಥಿತಿಗೆ ಸಿಲುಕಿದ್ದರು’ ಎಂದರು ಮೂರ್ತಿ.

Advertisement

ಕೆಲ ನಿಮಿಷಗಳ ಕಾಲ ಯೋಜನೆ ರೂಪಿಸಿದ ಅಶೋಕ್‌ ಸಿಂಘಾಲ್‌ ಪಡೆ, ಏಕಾಏಕಿ ಮಂದಿರ ಪ್ರವೇಶಕ್ಕೆ ಮುಂದಾಗಲು ತೀರ್ಮಾನ ಮಾಡಿತು. ಯೋಜನೆಯಂತೆ ಕಾರ್ಯೋನ್ಮುಖರಾದ ವಿಶ್ವ ಹಿಂದು ಪರಿಷತ್‌ನ ತಂಡ ಮಂದಿರ ಪ್ರವೇಶಕ್ಕೆ ಮುಂದಾಗುತಿದ್ದಂತೆ ಪೊಲೀಸ್‌ ಮತ್ತು ಪ್ಯಾರಾ ಮಿಲಿಟರಿ ಫೋರ್ಸ್‌ ಲಾಠಿ ಬೀಸಿದರು. ಪೊಲೀಸರು ಬೀಸಿದ ಲಾಠಿ ಏಟು ಅಶೋಕ್‌ ಸಿಂಘಾಲ್‌ ತಲೆಗೆ ಬೀಳುತ್ತಿದ್ದಂತೆ ರೊಚ್ಚಿಗೆದ್ದ ಕೊಡಗಿನ ಸೋಮೇಶ್‌ ಪೊಲೀಸರ ವಿರುದ್ಧ ವಾಗ್ವಾದಕ್ಕೆ ಇಳಿದ ಸಂಗತಿಯನ್ನು ಬಿ.ಎಲ್‌.ಮೂರ್ತಿ ಹಂಚಿಕೊಂಡರು.

ಸುಮಾರು 3-4 ಗಂಟೆಗಳ ಕಾಲ ನಡೆದ ಈ ಸಂಘರ್ಷದಲ್ಲಿ ಉತ್ತರ ಪ್ರದೇಶದ ಸರ್ಕಾರ ಮೇಲುಗೈ ಸಾಧಿಸಿತ್ತು. ಮೊದಲ ಯತ್ನದಲ್ಲೇ ವಿಫ‌ಲವಾದ ತಂಡ ಪಟ್ಟು ಬಿಡದೆ ಅಯೋಧ್ಯೆ ನಗರದಲ್ಲೇ ಬೀಡು ಬಿಟ್ಟರು. ಈ ವೇಳೆ ಅಲ್ಲಿನ ಸರ್ಕಾರ ರಥಯಾತ್ರಿಗಳನ್ನು ವಾಪಸ್ಸು ತಮ್ಮ ಊರುಗಳಿಗೆ ತೆರಳಲು ಮನವಿ ಮಾಡಿದರೂ, ನಾವು ರಾಮಲಲ್ಲಾ ಸ್ಥಳವನ್ನು ಪ್ರವೇಶಿಸದೇ ಅಯೋಧ್ಯೆ ಬಿಟ್ಟು ಹೋಗುವುದಿಲ್ಲ ಎಂದು ಪಣ ತೊಟ್ಟಿದ್ದರು.

ರಣಚಳಿಗೆ ಸ್ಪಂದಿಸಿದ ದಾನಿಗಳು: ಆ ಸ್ಥಳದಲ್ಲಿ ಪ್ರವೇಶ ವಿಫ‌ಲವಾದರೂ ಒಂದು ವಾರಗಳ ಕಾಲ ಅಯೋಧ್ಯೆಯಲ್ಲಿ ಕಳೆದ ಅನುಭವವನ್ನು ಹಂಚಿಕೊಂಡ ಮೂರ್ತಿ, ಅಯೋಧ್ಯೆ ನಗರದ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಯಾತ್ರಿಗಳಿಗೆ ವಸತಿ ಮತ್ತು ಊಟಕ್ಕಾಗಿ ವಿಶೇಷ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ, ಯಾತ್ರೆಯಲ್ಲಿ ಪಾಲ್ಗೊಳ್ಳಲು ಬಂದಿದ್ದವರ ಬಳಿ ಹೊದಿಕೆಗಳು ಮತ್ತು ಹೆಚ್ಚಿನ ಬಟ್ಟೆಗಳಿರಲಿಲ್ಲ. ಈ ವಿಷಯ ಅಲ್ಲಿನ ಕರಸೇವಕರಿಗೆ ತಿಳಿಸುತಿದ್ದಂತೆ ದಾನಿಗಳು 3-4 ಟ್ರಕ್‌ಗಳಲ್ಲಿ ಸ್ವೆಟರ್‌ ಮತ್ತು ಹೊದಿಕೆಗಳನ್ನು ಪೂರೈಕೆ ಮಾಡಿದರು. ಇನ್ನು ಸಾಕಷ್ಟು ಯಾತ್ರಿಗಳಿಗೆ ಕೆಮ್ಮು ಹೆಚ್ಚಾಗಿ ಕಾಣಿಸಿಕೊಂಡಿತ್ತು. ಕೂಡಲೇ ಎರಡು ಡ್ರಮ್‌ ಗಳ ತುಂಬಾ ಕೆಮ್ಮಿನ ಸಿರಪ್‌ ಪೂರೈಕೆ ಮಾಡಿದ್ದನ್ನು ನೆನಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next