ನವದೆಹಲಿ:ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ದಾಳಿ ನಡೆಸಿ 40 ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದ ಘಟನೆ ಬಗ್ಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಯಾವ ಹೇಳಿಕೆಯನ್ನೂ ನೀಡದೆ ತೆಪ್ಪಗೆ ಕುಳಿತಿದ್ದು ಯಾಕೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಶ್ನಿಸಿದ್ದಾರೆ.
ಪುಲ್ವಾಮಾದಲ್ಲಿ ನಡೆಸಿದ ಭಯೋತ್ಪಾದನಾ ಘಟನೆಯನ್ನು ಯಾಕೆ ಖಂಡಿಸಲಿಲ್ಲ ಎಂಬುದರ ಬಗ್ಗೆ ಇಮ್ರಾನ್ ವಿವರಣೆ ನೀಡಬೇಕು ಎಂದು ಶಾ ಒತ್ತಾಯಿಸಿದ್ದಾರೆ.
ಇಮ್ರಾನ್ ಖಾನ್ ಹೇಳಿಕೆಯ ಪ್ರಕಾರ, ಭಾರತದ ಜೊತೆ ಶಾಂತಿ ಮಾತುಕತೆಗೆ ತಯಾರಾಗಿದ್ದರಂತೆ. ಒಂದು ವೇಳೆ ಭಾರತ ಸೂಕ್ತ ಸಾಕ್ಷ್ಯವನ್ನು ಕೊಟ್ಟರೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಂದು ತಿಳಿಸಿದ್ದರು. ಆದರೆ ನಾನು ಒಂದು ಮಾತನ್ನು ಹೇಳುತ್ತೇನೆ, ಸಾಕ್ಷ್ಯ ನೀಡಿಕೆ ಬಗ್ಗೆ ನಂತರ ಮಾತನಾಡುವ, ಆದರೆ ಪುಲ್ವಾಮಾ ದಾಳಿ ಬಗ್ಗೆ ಎರಡು ಶಬ್ದವನ್ನೂ ಕೂಡಾ ಖಾನ್ ಯಾಕೆ ಮಾತನಾಡಿಲ್ಲ ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.
ಉಗ್ರರ ದಾಳಿಯನ್ನು ಖಂಡಿಸದ, ತಮ್ಮದೇ ನೆಲದಲ್ಲಿ ಅಟ್ಟಹಾಸಗೈಯುತ್ತಿರುವ ಉಗ್ರರ ಬಗ್ಗೆ ಕ್ರಮ ಕೈಗೊಳ್ಳದ ಪಾಕ್ ಪ್ರಧಾನಿ ಖಾನ್ ಮಾತನ್ನು ಹೇಗೆ ನಂಬುವುದು? ಅವರು ಮಾತನಾಡುವುದನ್ನು ನಾವು ಸುಮ್ಮನೆ ಕೇಳಿಸಿಕೊಳ್ಳಬೇಕೆ? ನಾವು ಕೂಡಾ ಅವರ ದೃಷ್ಟಿಕೋನವನ್ನು ವಿಮರ್ಶಿಸುವುದು ಬೇಡವೇ ಎಂದು ಶಾ ಖಡಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.