ನವದೆಹಲಿ: ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ಭಾರತದ ಮೇಲೆ ಒತ್ತಡ ಹೇರಲು ಯತ್ನಿಸಿ ವಿಫಲವಾಗಿದ್ದ ಪಾಕಿಸ್ತಾನ ಮತ್ತೂಂದು ಮುಖಭಂಗಕ್ಕೆ ಈಡಾಗಿದೆ.
ಸೌದಿ ಅರೇಬಿಯಾದ ಪ್ರಾಮುಖ್ಯತೆ ಇರುವ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೊ-ಆಪರೇಷನ್ (ಒಐಸಿ) ರಾಷ್ಟ್ರಗಳ ಸಹಾನುಭೂತಿಯನ್ನು ಪಡೆಯುವಲ್ಲಿಯೂ ಅದು ವಿಫಲವಾಗಿದೆ. ಅತ್ತ, ಸೌದಿ ಅರೇಬಿಯಾ, ಕಾಶ್ಮೀರ ವಿಚಾರದಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗೆ ಕೈ ಜೋಡಿಸುವುದಿಲ್ಲ ಎಂದು ಸೌದಿ ಖಡಾಖಂಡಿತವಾಗಿ ಹೇಳಿದ್ದು, ಈ ವಿಚಾರದಲ್ಲಿ ಸಹಾಯ ಮಾಡಲು ಪಾಕಿಸ್ತಾನದ ಆಪ್ತ ಮಿತ್ರ ಚೀನಾ ಕೂಡ ನಿರಾಕರಿಸಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳ ರಾಜನೀತಿಯಲ್ಲಿ ಮೂಗು ತೂರಿಸುವುದಿಲ್ಲ ಎಂದು ಡ್ರ್ಯಾಗನ್ ಹೇಳಿದ್ದು, ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಕ್ಷರಶಃ ಏಕಾಂಗಿಯನ್ನಾಗಿಸಿದೆ.
ಸೌದಿ ಜೊತೆ ವಿರಸ: ಕಾಶ್ಮೀರ ವಿಚಾರದಲ್ಲಿ ಇಸ್ಲಾಂ ದೇಶಗಳ ಸಹಾನುಭೂತಿ ಪಡೆಯಲು ಒಐಸಿ ಸದಸ್ಯ ರಾಷ್ಟ್ರಗಳ ಸಭೆ ಕರೆದು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡುವಂತೆ ಸೂಚಿಸಬೇಕು ಎಂದು ಆಗ್ರಹಿಸಿ, ಪಾಕಿಸ್ತಾನ, ಕೆಲವು ತಿಂಗಳುಗಳಿಂದ ಸೌದಿ ಅರೇಬಿಯಾ ಬೆನ್ನು ಬಿದ್ದಿತ್ತು. ಆದರೆ, ಸೌದಿ ಅದಕ್ಕೆ ಸೊಪ್ಪು ಹಾಕಲಿಲ್ಲ.
ಈ ಹಿನ್ನೆಲೆಯಲ್ಲಿ, ಇತ್ತೀಚೆಗೆ ಹೇಳಿಕೆ ನೀಡಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ, “”ಕಾಶ್ಮೀರದ ವಿಚಾರದಲ್ಲಿ ಸೌದಿ ಸರ್ಕಾರ ನಮಗೆ ಬೆಂಬಲ ನೀಡದಿದ್ದರೆ ಪಾಕಿಸ್ತಾನಕ್ಕೇನೂ ನಷ್ಟವಿಲ್ಲ. ಪಾಕಿಸ್ತಾನವೇ ಒಐಸಿ ರಾಷ್ಟ್ರಗಳ ಬೃಹತ್ ಸಮ್ಮೇಳನವನ್ನು ಆಯೋಜಿಸಿ, ಅವುಗಳ ಬೆಂಬಲ ಕೇಳಲಿದೆ” ಎಂದಿದ್ದರು. ಇದನ್ನು ಟೀಕಿಸಿದ ಪಾಕಿಸ್ತಾನದ ಅನೇಕ ರಾಜಕೀಯ ತಜ್ಞರು, “”ಸೌದಿಯನ್ನು ಎದುರು ಹಾಕಿಕೊಂಡರೆ ಮುಂದಾಗುವ ಅನಾ ಹುತಗಳ ಬಗ್ಗೆ ಖುರೇಷಿ ಆಲೋಚಿಸಬೇಕಿತ್ತು” ಎಂದರು.
ಖುರೇಷಿಯವರ ಹೇಳಿಕೆಯಿಂದ ಸಿಟ್ಟಿಗೆದ್ದಿರುವ ಸೌದಿ, ಇತ್ತೀಚೆಗೆ ಸೌದಿಯ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗ, ಪಾಕಿಸ್ತಾನಕ್ಕೆ 1.4 ಲಕ್ಷ ಕೋಟಿ ರೂ.ಗಳ ಸಹಾಯ ಧನ ನೀಡುವ ಬಗ್ಗೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಗೊಳಿಸಲು ಚಿಂತನೆ ನಡೆಸಿದೆ.
ಇದರಿಂದ ಎಚ್ಚೆತ್ತಿರುವ ಇಮ್ರಾನ್ ಖಾನ್ ಸರ್ಕಾರ, ಸೌದಿಯಿಂದ ತಾನು ಹಿಂದೆ ಪಡೆದಿದ್ದ ತೈಲ ಸಂಬಂಧಿ ಸಾಲದಲ್ಲಿ ಸುಮಾರು 7,400 ಕೋಟಿ ರೂ. ಹಣವನ್ನು ಅವಧಿ ಪೂರ್ವದಲ್ಲೇ ತೀರಿ ಸಿದೆ. ಆ ಮೂಲಕ ಸೌದಿ ಸರ್ಕಾರದ ಮೆಚ್ಚುಗೆ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿ ಸಿವೆ. ಅಂತೂ ಇಂತು ಕಾಶ್ಮೀರ ವಿಚಾರದಲ್ಲಿ ಎಡಬಿಡಂಗಿಯಂತೆ ವರ್ತಿಸಿ ಪಾಕಿಸ್ತಾನ ತನ್ನ ಸ್ವಧರ್ಮೀಯ ದೇಶಗಳಿಂದಲೇ ಇಕ್ಕಟ್ಟಿಗೆ ಸಿಲುಕಿರುವುದು ಸತ್ಯ.