Advertisement

ಏ.1ರಿಂದ ಸರಳೀಕೃತ ರಿಟರ್ನ್ಸ್ ನಮೂನೆ ಬಳಕೆ ಜಾರಿ

10:10 AM Dec 25, 2019 | Lakshmi GovindaRaj |

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ಸರಳೀಕೃತ ರಿಟರ್ನ್ಸ್ ನಮೂನೆಗಳು (ಸಹಜ್‌, ಸುಗಮ್‌, ನಾರ್ಮಲ್‌) ಬಳಕೆ ವ್ಯವಸ್ಥೆ ಮುಂದಿನ ಏ. 1ರಿಂದ ಜಾರಿಯಾಗಲಿದೆ.

Advertisement

ಹಾಗೆಯೇ 500 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವ ಹಾಗೂ ಏ.1ರಿಂದ 100 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವ ವ್ಯಾಪಾರ- ವ್ಯವಹಾರಸ್ಥರಿಗೆ “ಎಲೆಕ್ಟ್ರಾನಿಕ್‌- ಇನ್‌ವಾಯ್ಸ್’ ವ್ಯವಸ್ಥೆ ಐಚ್ಛಿಕ ಮತ್ತು ಪ್ರಯೋಗಾರ್ಥ ಅಳವಡಿಕೆಗೆ ಅವಕಾಶ ನೀಡಲಾಗುತ್ತದೆ ಎಂದು ಜಿಎಸ್‌ಟಿ ನೆಟ್‌ವರ್ಕ್‌ ಸಚಿವರ ತಂಡ ಮುಖ್ಯಸ್ಥರಾದ ಬಿಹಾರ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಹೇಳಿದರು.

ನಗರದಲ್ಲಿ ಸೋಮವಾರ ಜಿಎಸ್‌ಟಿ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವ್ಯಾಪಾರ- ವ್ಯವಹಾರಾಸ್ಥರ ಅನುಕೂಲಕ್ಕಾಗಿ ಜಿಎಸ್‌ಟಿ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಣಗೊಳಿಸುವ ಪ್ರಯತ್ನ ನಡೆದಿದೆ. ಅದಕ್ಕೆ ಪೂರಕವಾಗಿ ಸಹಜ್‌, ಸುಗಮ್‌, ನಾರ್ಮಲ್‌ ರಿಟರ್ನ್ಸ್ ನಮೂನೆ ಬಳಕೆ ಏ.1ರಿಂದ ಜಾರಿಯಾಗಲಿದೆ.

ಹೊಸ ವ್ಯವಸ್ಥೆ ಅಳವಡಿಕೆಗೆ ಈಗಾಗಲೇ ಒಂದು ಲಕ್ಷ ವ್ಯಾಪಾರ- ವ್ಯವಹಾರಸ್ಥರಿಗೆ ಜಾಗೃತಿ ಮೂಡಿಸಲಾಗಿದ್ದು, ಮಾರ್ಚ್‌ ವೇಳೆಗೆ 10 ಲಕ್ಷ ವ್ಯಾಪಾರ- ವ್ಯವಹಾರಸ್ಥರಿಗೆ ಅರಿವು ಮೂಡಿಸುವ ಉದ್ದೇಶವಿದೆ. ತೆರಿಗೆ ಪಾವತಿ, ರಿಟರ್ನ್ಸ್ ಸಲ್ಲಿಕೆ ಇತರೆ ಪಾವತಿ ಪ್ರಕ್ರಿಯೆ ಸುಗಮಗೊಳಿಸಲು ಪೂರಕವಾಗಿ 600 ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು.

ಇ- ಇನ್‌ವಾಯ್ಸ್: ನೂತನ ಇ- ಇನ್‌ವಾಯ್ಸ್ ವ್ಯವಸ್ಥೆಯನ್ನು ಜನವರಿಯಿಂದ ಜಾರಿಗೊಳಿಸಲಾಗುತ್ತಿದೆ. ವಾರ್ಷಿಕ 500 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವವರು ಜ.1ರಿಂದ ಇ-ಇನ್‌ವಾಯ್ಸ್ ವ್ಯವಸ್ಥೆಯನ್ನು ಐಚ್ಛಿಕ ಮತ್ತು ಪ್ರಯೋಗಾರ್ಥ ಜಾರಿಯಾಗಲಿದೆ. ವಾರ್ಷಿಕ 100 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವವರು ಏ.1ರಿಂದ ಇ- ಇನ್‌ವಾಯ್ಸ್ ಸಲ್ಲಿಸುವುದು ಐಚ್ಛಿಕ ಮತ್ತು ಪ್ರಯೋಗಾರ್ಥವಾಗಿರಲಿದೆ. ಈ ವ್ಯವಸ್ಥೆಯಿಂದ ಮಾಸಿಕ 3ಬಿ ರಿಟರ್ನ್ಸ್ ಸಲ್ಲಿಸುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದರು.

Advertisement

ಆಧಾರ್‌ ಕಡ್ಡಾಯ: ನಕಲಿ ಇನ್‌ವಾಯ್ಸ್ ಸೃಷ್ಟಿಸಿ ವಂಚಿಸುವುದನ್ನು ತಪ್ಪಿಸಲು ಆಧಾರ್‌ ಜೋಡಣೆ ಕಡ್ಡಾಯಗೊಳಿಸಲಾಗುತ್ತಿದೆ. ಜ. 1ರಿಂದ ಆಧಾರ್‌ ಜೋಡಣೆ ವ್ಯವಸ್ಥೆ ಜಾರಿಯಾಗಲಿದೆ. ಹೊಸದಾಗಿ ಜಿಎಸ್‌ಟಿ ನೋಂದಣಿ ಪಡೆಯುವವರು ಆಧಾರ್‌ ವಿವರ ಸಲ್ಲಿಸುವುದು ಕಡ್ಡಾಯ. ಈಗಾಗಲೇ ನೋಂದಣಿಯಾಗಿರುವವರು ಆಧಾರ್‌ ಜೋಡಣೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಈಗಾಗಲೇ ತೆಲಂಗಾಣ, ಆಂಧ್ರಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಧಾರ್‌ ಜೋಡಣೆ ಕಾರ್ಯವನ್ನು ಭೌತಿಕವಾಗಿ ನಡೆಸಲಾಗುತ್ತಿದೆ. ಇದರಿಂದ ವಂಚನೆ ತಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.‌ ಸತತ ಎರಡು ತಿಂಗಳ ಕಾಲ 3ಬಿ ರಿಟರ್ನ್ಸ್ ಸಲ್ಲಿಸದಿದ್ದರೆ “ಇ-ವೇ’ ಬಿಲ್‌ ವ್ಯವಸ್ಥೆ ರದ್ದಾಗಲಿದೆ. ಆರು ತಿಂಗಳ ಕಾಲ ರಿಟರ್ನ್ಸ್ ಸಲ್ಲಿಸದಿದ್ದರೆ ಜಿಎಸ್‌ಟಿ ನೋಂದಣಿ ರದ್ಧಾಗಲಿದ್ದು, ಅದರಂತೆ ರದ್ಧತಿ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ರಾಜ್ಯಕ್ಕೆ ಅಕ್ಟೋಬರ್‌, ನವೆಂಬರ್‌ ತಿಂಗಳ ಜಿಎಸ್‌ಟಿ ಪರಿಹಾರ ಮೊತ್ತವನ್ನಷ್ಟೇ ಪಾವತಿಸಬೇಕಿದ್ದು, ಮಾಸಾಂತ್ಯದೊಳಗೆ ಬಾಕಿ ಪರಿಹಾರ ಬಿಡುಗಡೆಯಾಗಲಿದೆ. ಆರ್ಥಿಕ ಹಿಂಜರಿಕೆಗೆ ಇರುವ ಕಾರಣ ಜಿಎಸ್‌ಟಿ ದರ ಏರಿಕೆ ಮಾಡುವ ಪ್ರಸ್ತಾವ ಇಲ್ಲ. ಜಿಎಸ್‌ಟಿ ತೆರಿಗೆ ಪ್ರಮಾಣ ಏರಿಕೆ ಮಾಡಲಾಗುತ್ತದೆ ಎಂಬುದು ಊಹಾಪೋಹವಷ್ಟೇ. ಮಾಸಿಕ ಒಂದು ಲಕ್ಷ ಕೋಟಿ ರೂ.ಗಿಂತ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದು, ಎರಡು ತಿಂಗಳಿನಿಂದ ಆರ್ಥಿಕ ಹಿಂಜರಿಕೆ ಕಾರಣಕ್ಕೆ ಆದಾಯದಲ್ಲಿ ತುಸು ಇಳಿಕೆಯಾಗಿದೆ. ಇದು ತಾತ್ಕಾಲಿಕವಾಗಿದ್ದು, ಮುಂದೆ ತೆರಿಗೆ ಆದಾಯ ಹೆಚ್ಚಾಗುವ ನಿರೀಕ್ಷೆ ಇದೆ.
-ಸುಶೀಲ್‌ ಕುಮಾರ್‌ ಮೋದಿ, ಜಿಎಸ್‌ಟಿ ನೆಟ್‌ವರ್ಕ್‌ ಸಚಿವರ ತಂಡ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next