ಮಹಾನಗರ: ಮಹಾಕಾಳಿ ಪಡ್ಪುವಿನಲ್ಲಿ ನಡೆಯುತ್ತಿರುವ ರೈಲ್ವೇ ಕೆಳ ಸೇತುವೆ ಕಾಮಗಾರಿ ವೇಗ ಪಡೆಯುತ್ತಿದ್ದು, ಬಹುನಿರೀಕ್ಷಿತ ಬಾಕ್ಸ್ ಪುಶ್ಶಿಂಗ್ ವ್ಯವಸ್ಥೆ ಕಾಮಗಾರಿ ಮಳೆಗಾಲದ ಬಳಿಕ ವಷ್ಟೇ ನಡೆಸಲು ಸ್ಮಾರ್ಟ್ ಸಿಟಿಯಿಂದ ನಿರ್ಧರಿಸಲಾಗಿದೆ.
ಮಹಾಕಾಳಿ ಪಡ್ಪುವಿನಲ್ಲಿ ಒಟ್ಟು ಎರಡು ರೈಲ್ವೇ ಕೆಳ ಸೇತುವೆ ನಿರ್ಮಾಣವಾಗುತ್ತಿದ್ದು, ಒಂದು ಕಡೆಯಲ್ಲಿ ಆಧುನಿಕ ಬಾಕ್ಸ್ ಪುಶ್ಶಿಂಗ್ ತಂತ್ರಜ್ಞಾನ ವಿಧಾನವನ್ನು ಅಳವಡಿಸಲಾಗುತ್ತಿದೆ. ಈ ಯೋಜನೆಯಂತೆ ಕಾಂಕ್ರೀಟಿನ ಬಾಕ್ಸ್‌ಗಳನ್ನು ಹೈಡ್ರಾಲಿಕ್ ವ್ಯವಸ್ಥೆಯ ಮೂಲಕ ಭೂಮಿಯೊಳಗೆ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೊರಗೆ ಬರುವಂತೆ ಮಾಡಬೇಕಾಗಿದೆ. ತುರ್ತಾಗಿ ಈ ಕಾಮಗಾರಿ ನಡೆಸಲು ಮಳೆಗಾಲ ಅಡ್ಡಿಯಾಗುವ ಸಾಧ್ಯತೆ ಇರುವ ಕಾರಣ ಬಳಿಕವೇ ಈ ವ್ಯವಸ್ಥೆ ಅಳವಡಿಸಲು ಮುಂದಾಗಿದೆ. ಆ ವರೆಗೆ ಇತರ ಬಾಕಿ ಕೆಲಸವನ್ನು ಪೂರ್ಣಗೊಳಿಲಸು ಸ್ಮಾರ್ಟ್ ಸಿಟಿ ಚಿಂತನೆ ನಡೆಸುತ್ತಿದೆ.
ಮಹಾಕಾಳಿ ಪಡ್ಪುವಿನಲ್ಲಿ ಆರ್‌ಯುಬಿ ಕಾಮಗಾರಿಗೆ ಈ ಹಿಂದೆಯೇ ಆರಂಭಗೊಳ್ಳಬೇಕಿತ್ತು. ಆದರೆ ಆ ವೇಳೆ ಅಲ್ಲೇ ಇದ್ದ ದೊಡ್ಡ ಬಂಡೆಕಲ್ಲು ಅಡ್ಡಿಯಾಗಿತ್ತು. ಇದರಿಂದ ಕಾಂಕ್ರೀಟ್ ಬಾಕ್ಸ್ ಹೊರಬರಲು ಕಷ್ಟವಾಗಿತ್ತು. ಇದೇ ಕಾರಣಕ್ಕೆ ಬಂಡೆ ಕಲ್ಲನ್ನು ಪುಡಿ ಮಾಡಬೇಕಾದ ಅನಿವಾರ್ಯ ಎದುರಾಗಿತ್ತು. ಈ ಕೆಲಸಕ್ಕೆ ಅನುಮತಿಗೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ರೈಲ್ವೇ ಇಲಾಖೆಯಿಂದ ಪತ್ರ ಬರೆದು ಇದೀಗ ಬಂಡೆಕಲ್ಲನ್ನು ಪುಡಿ ಮಾಡಲಾಗಿದೆ. ಇದರಿಂದಾಗಿ ಕಾಮಗಾರಿ ಸಲೀಸಲಾಗಿದೆ.
ಜಪ್ಪು ಮಹಾಕಾಳಿ ಪಡ್ಪುವಿನಲ್ಲಿ ಈ ಮೊದಲು ಚತುಷ್ಪಥ ರಸ್ತೆ ಹಾಗೂ ರೈಲ್ವೇ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಉದ್ದೇಶಿಸ ಲಾಗಿತ್ತು. ಇದಕ್ಕಾಗಿ ಪಾಲಿಕೆಯಿಂದ 24 ಕೋ.ರೂ. ಗಳ ಪ್ರಸ್ತಾವನೆ ಸಿದ್ಧಪಡಿಸಿ, ರೈಲ್ವೇ ಇಲಾಖೆಗೆ ಕಳುಹಿಸಲಾಗಿತ್ತು.
ಶೇ.50:50ರಂತೆ ಪಾಲಿಕೆ ಹಾಗೂ ರೈಲ್ವೇಯು ಹಣ ಜೋಡಿಸಲು ಉದ್ದೇಶಿಸಲಾಗಿತ್ತು. ಆದರೆ ಪೂರ್ಣ ಹಣವನ್ನು ಪಾಲಿಕೆಯೇ ಭರಿಸಬೇಕು ಎಂದು ಪ್ರಸ್ತಾವನೆಯನ್ನು ರೈಲ್ವೇ ಇಲಾಖೆ ವಾಪಾಸ್ ಕಳುಹಿಸಿತ್ತು. ಪಾಲಿಕೆಯು ಪ್ರಸ್ತಾವನೆ ಬದಲಿಸಿ, 10 ಕೋ.ರೂ. ವೆಚ್ಚದಲ್ಲಿ ಅಂಡರ್‌ಪಾಸ್, ರಸ್ತೆ ಅಭಿವೃದ್ಧಿಗೆ ಉದ್ದೇಶಿಸಲಾಗಿತ್ತು. ರೈಲ್ವೇ ಕೆಳ ಸೇತುವೆ ಹಾಗೂ ಸಂಪರ್ಕ ರಸ್ತೆ ಅತ್ಯಗತ್ಯ ಎಂಬ ವ್ಯಾಪಕ ಬೇಡಿಕೆ-ಒತ್ತಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊನೆಗೂ ಕೆಲಸ ಆರಂಭಗೊಂಡಿದೆ. ಠೇವಣಿ ವಂತಿಗೆ ಆಧಾರಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ 30.7 ಕೋ.ರೂ. ಮೊತ್ತವನ್ನು ರೈಲ್ವೇ ಇಲಾಖೆಗೆ ಪಾವತಿ ಮಾಡಿದೆ. ರೈಲ್ವೇ ಇಲಾಖೆಯಿಂದಲೇ ಟೆಂಡರ್ ಕರೆದು ಕಾಮಗಾರಿ ನಡೆಸಲಾಗುತ್ತಿದೆ. 17.6 ಕೋ.ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಿದೆ. ಮುಂದಿನ ವರ್ಷದ ಮಾರ್ಚ್ ತಿಂಗಳ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಕಾಮಗಾರಿಗೆ ವೇಗ
ಮಹಾಕಾಳಿ ಪಡ್ಪುವಿನಲ್ಲಿ ಉದ್ದೇಶಿತ ರೈಲ್ವೇ ಕೆಳ ಸೇತುವೆ (ಆರ್‌ಯುಬಿ)ಯ ಕಾಮಗಾರಿಗೆ ವೇಗ ನೀಡಲಾಗಿದೆ. ಬಹು ನಿರೀಕ್ಷಿತ ಬಾಕ್ಸ್ ಪುಶ್ಶಿಂಗ್ ವ್ಯವಸ್ಥೆ ಕಾಮಗಾರಿ ಮಳೆಗಾಲದ ಬಳಿಕ ಆರಂಭಗೊಳ್ಳಲಿದೆ. ಆ ವರೆಗೆ ಇತರ ಉಳಿದ ಕಾಮಗಾರಿಗಳು ನಡೆಯಲಿದೆ. ಮಾರ್ಚ್ ತಿಂಗಳ ವೇಳೆಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
-ಅರುಣ್‌ಪ್ರಭ, ಸ್ಮಾರ್ಟ್‌ಸಿಟಿ ಜನರಲ್ ಮ್ಯಾನೇಜರ್