Advertisement

ಚಂಡಮಾರುತದ ಪರಿಣಾಮ: ತಾಜಾ ಮೀನು ಕೊರತೆ

01:01 AM Jun 15, 2023 | Team Udayavani |

ಮಂಗಳೂರು: ಜೂನ್‌ ಮೊದಲ ದಿನದಿಂದಲೇ ಕಡಲಿಗೆ ಇಳಿಯಬೇಕಿದ್ದ ನಾಡದೋಣಿಗಳು ಈ ಬಾರಿ 14 ದಿನವಾದರೂ ದಡದಲ್ಲೇ ಉಳಿದಿವೆ.

Advertisement

ಪ್ರತೀ ಬಾರಿಯೂ ಮೀನುಗಾರರ ಕಾರ್ಯನಿರ್ವಹಣೆಗೆ ಅಡ್ಡಿ ಯುಂಟು ಮಾಡುವ ತೂಫಾನ್‌ ಈ ಬಾರಿ ಆರಂಭದಲ್ಲೇ ಕಾಣಿಸಿಕೊಂಡಿದೆ. ಬಿಪರ್‌ಜಾಯ್‌ ಚಂಡಮಾರುತದ ಪ್ರಭಾವದಿಂದಾಗಿ ಜೂನ್‌ 1ಕ್ಕೆ ಸಮುದ್ರ ಅಬ್ಬರಿಸಲು ಆರಂಭಿಸಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯಲು ಅವಕಾಶ ನೀಡಿಲ್ಲ. ದ.ಕ. ಹಾಗೂ ಉಡುಪಿ ಜಿಲ್ಲೆಗಳ 5,400ರಷ್ಟು ನಾಡದೋಣಿಗಳು ದಡದಲ್ಲೇ ಉಳಿದಿವೆ. ಅವುಗಳಲ್ಲಿ ನೇರ ಮತ್ತು ಪರೋಕ್ಷವಾಗಿ ದುಡಿಯುವ ಸಾವಿರಾರು ಮಂದಿಗೆ ನಿರುದ್ಯೋಗ ಸಮಸ್ಯೆ ಎದುರಾಗಿದೆ. ಇನ್ನೊಂದೆಡೆ ತಾಜಾ ಮೀನಿಗಾಗಿ ಗ್ರಾಹಕರು ಹಪಹಪಿಸತೊಡಗಿದ್ದಾರೆ. ಏನಿದ್ದರೂ ಡೀಪ್‌ ಫ್ರೀಜ್‌ ಆಗಿ ಪೂರ್ವ ಕರಾವಳಿಯಿಂದ ಬರುವ ಮೀನನ್ನೇ ಖರೀದಿಸಬೇಕಾಗುತ್ತದೆ.

ಜೂನ್‌ 1ರಿಂದ ಜುಲೈ 30ರ ವರೆಗೆ ಯಾಂತ್ರೀಕೃತ ದೋಣಿಗಳು ನಡೆಸುವ ಆಳಸಮುದ್ರದಲ್ಲಿ ನಡೆಸುವ ಮೀನುಗಾರಿಕೆಗೆ ನಿಷೇಧ ಇರುವುದರಿಂದ ಈ ಅವಧಿಯಲ್ಲಿ ನಾಡದೋಣಿ ಮೀನುಗಾರರ ಮೀನಿಗೆ ಹೆಚ್ಚಿನ ಮಹತ್ವ. ಹಾಗಾಗಿ ನಾಡದೋಣಿಯವರು 10 ಎಚ್‌ಪಿಗಿಂತ ಕಡಿಮೆ ಸಾಮರ್ಥ್ಯದ ಔಟ್‌ಬೋರ್ಡ್‌ ಎಂಜಿನ್‌ ಬಳಸಿ ಮೀನುಗಾರಿಕೆ ನಡೆಸಿ ಅದೇ ದಿನ ತೀರಕ್ಕೆ ಬರುತ್ತಾರೆ. ಆಳಸಮುದ್ರ ಮೀನುಗಾರರಂತೆ ಕ್ಯಾಬಿನ್‌ನಲ್ಲಿ ಮಂಜುಗಡ್ಡೆ ಮಿಶ್ರ ಮಾಡುವುದಿಲ್ಲ. ಗ್ರಾಹಕರಿಗೆ ಆಯಾ ದಿನದ ತಾಜಾ ಮೀನು ಸಿಗುತ್ತದೆ. ಇದಕ್ಕೆ ದರ ಹೆಚ್ಚಾದರೂ ಬೇಡಿಕೆಯೂ ಅಷ್ಟೇ ಜಾಸ್ತಿ.

ಸೀಮೆ ಎಣ್ಣೆ ಸಮಸ್ಯೆ
ನಾಡದೋಣಿಗಳ ಎಂಜಿನ್‌ಗೆ ಹೆಚ್ಚಾಗಿ ಬಳಸುವುದು ಸೀಮೆ ಎಣ್ಣೆಯನ್ನು. ಆದರೆ ಪ್ರಸ್ತುತ ರಿಯಾಯಿತಿ ದರದ ಸೀಮೆ ಎಣ್ಣೆ ಸರಿಯಾಗಿ ಸಿಗುತ್ತಿಲ್ಲ. ಸೀಸನ್‌ ಇದ್ದರೆ ಒಂದು ಬೋಟ್‌ಗೆ ಸಾಮಾನ್ಯವಾಗಿ 1 ಸಾವಿರ ಲೀಟರ್‌ ಬೇಕಾಗುತ್ತದೆ. ಆದರೆ 100 ಲೀಟರ್‌ ಕೂಡ ಲಭ್ಯವಾಗುತ್ತಿಲ್ಲ. ಡೀಸೆಲ್‌, ಪೆಟ್ರೋಲ್‌ ಎಂಜಿನ್‌ಗಳಿಗೆ ಬದಲಾಗುವಂತೆ ಸರಕಾರ ಹೇಳುತ್ತಿದೆಯಾದರೂ ಅದು ದುಬಾರಿಯಾಗುತ್ತದೆ ಎನ್ನುವುದು ಮೀನು ಗಾರರ ಅಳಲು.

ಹೊರಗಿನ ಮೀನೂ ಬರುತ್ತಿಲ್ಲ
ಮೀನು ತಿನ್ನುವವರಿಗೆ ಸದ್ಯ ಪೂರ್ವ ಕರಾವಳಿಯ ಮೀನೇ ಗತಿ. ಆದರೆ ಇನ್ನೂ ಆ ಭಾಗದ ಮೀನು ಪೂರೈಕೆ ಆರಂಭವಾಗಿಲ್ಲ, ಸದ್ಯ ಆಂಧ್ರಪ್ರದೇಶದಿಂದ ಸ್ವಲ್ಪ ಮೀನು ಬಂದಿದೆ. ಇನ್ನು ಕೆಲದಿನಗಳಲ್ಲಿ ಆಂಧ್ರ, ತಮಿಳುನಾಡು ಕಡೆಯಿಂದ ಬರುವ ಡೀಪ್‌ ಫ್ರೀಜ್‌ ಆದ ಮೀನು ಇನ್ಸುಲೇಟೆಡ್‌ ಲಾರಿಗಳಲ್ಲಿ ಬರಲಿದೆ.

Advertisement

ನಷ್ಟದ ಭೀತಿ
“2021ಕ್ಕೆ ಹೋಲಿಸಿದರೆ 2022ರಲ್ಲಿ ಒಟ್ಟು ಆದಾಯ, ಮೀನು ಬೇಟೆ ಪ್ರಮಾಣ ಕಡಿಮೆ ಇತ್ತು. ಈ ಬಾರಿ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದೆವು. ಆದರೆ ಆರಂಭದಲ್ಲೇ ಚಂಡಮಾರುತ ಹೊಡೆತ ಕೊಟ್ಟಿದೆ. ಇನ್ನೂ ಕೆಲವು ದಿನ ಸಮುದ್ರಕ್ಕೆ ಇಳಿಯುವ ಸಾಧ್ಯತೆ ಕಾಣುತ್ತಿಲ್ಲ’ ಎನ್ನುತ್ತಾರೆ ಕರಾವಳಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ವಾಸುದೇವ ಕರ್ಕೇರ.

ಚಂಡಮಾರುತದಿಂದಾಗಿ ಮುನ್ನೆಚ್ಚರಿಕೆ ಇರುವ ಕಾರಣ ನಾಡದೋಣಿಯವರೂ ಈ ಬಾರಿ ಕಡಲಿಗೆ ಇಳಿದಿಲ್ಲ. ಎರಡೂ ಜಿಲ್ಲೆಗಳಲ್ಲಿ ಇದೇ ಸ್ಥಿತಿ ಇದೆ.
– ಹರೀಶ್‌,
ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ, ದ.ಕ.

– ವೇಣು ವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next