Advertisement
ಆಡಳಿತ ಮತ್ತು ಅಭಿವೃದ್ಧಿ ಎರಡು ಚಕ್ರಗಳು ಸಮಬಲ ಮತ್ತು ಸಮವೇಗದಲ್ಲಿ ಚಲಿಸಬೇಕಾದರೆ ಚುನಾಯಿತ ಜನಪ್ರತಿಧಿಗಳ ಜತೆಗೆ ಅಧಿಕಾರಶಾಹಿಗಳ ಸಂಖ್ಯಾಬಲ ಸಹ ಸಮರ್ಪಕವಾಗಿರಬೇಕು. ಆಡಳಿತ ಯಂತ್ರದ ಜೀವಾಳ ಮತ್ತು ಸರಕಾರಿ ವ್ಯವಸ್ಥೆಯ “ಕಾಲಾಳುಗಳು’ ಈ ಅಧಿಕಾರಿ ಮತ್ತು ನೌಕರರು ಆಗಿರುತ್ತಾರೆ. ಪಂಚಾಯತ್‌ಗಳಲ್ಲಿ ಆಡಳಿತ ಯಂತ್ರ ಮುನ್ನಡೆಸಿ ಸರಕಾರದ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಜನರಿಗೆ ತಲುಪಿಸಬೇಕಾದ ಹೊಣೆಗಾರಿಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಕಾರ್ಯದರ್ಶಿ, ಲೆಕ್ಕ ಸಹಾಯಕರ ಮೇಲಿದೆ. ವಿಪರ್ಯಾಸವೆಂದರೆ ಪ್ರಸ್ತುತ ಗ್ರಾಮ ಪಂಚಾಯತ್‌ಗಳಲ್ಲಿ ಈ ಹುದ್ದೆಗಳು ಸಾಕಷ್ಟು ಸಂಖ್ಯೆಯಲ್ಲಿ ಖಾಲಿ ಇವೆ. 6,011 ಗ್ರಾಮ ಪಂಚಾಯತ್‌ಗಳಲ್ಲಿ 746 ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, 1,049 ಗ್ರಾ.ಪಂ ಕಾರ್ಯದರ್ಶಿ, 505 ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳು ಸೇರಿ ಒಟ್ಟಾರೆ 2,300 ಹುದ್ದೆಗಳು ಖಾಲಿ. ಕರ ವಸೂಲಿಗಾರರು, ಜಾಡ ಮಾಲಿ ಗಳು, ನೀರುಗಂಟಿಗಳು ಸೇರಿದಂತೆ 61 ಸಾವಿರ ಪಂಚಾಯತ್ ನೌಕರರು ಇದ್ದಾರೆ. ಇವರಲ್ಲಿ 20 ಸಾವಿರ ನೌಕರರು ವೇತನ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಪಂಚಾಯತ್‌ಗಳಲ್ಲಿ ನೇರವಾಗಿ ಆಡಳಿತ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ಸ್ವಂತ ಸಂಪನ್ಮೂಲ, ಕೇಂದ್ರದ 15ನೇ ಹಣಕಾಸು ಆಯೋಗ, ರಾಜ್ಯ ಹಣಕಾಸು ಆಯೋಗದ ಅನುದಾನ, ಶಾಸನಬದ್ಧ ಅನುದಾನಗಳು, ವಿಶೇಷ ಅನುದಾನ, ಉದ್ಯೋಗ ಖಾತರಿ, ಸ್ವತ್ಛ ಭಾರತ್ ಮುಂತಾದ ಸರಕಾರ ಪ್ರಾಯೋಜಕತ್ವದ ಯೋಜನೆಗಳ ಹಣ ಸೇರಿದಂತೆ ಒಂದು ವರ್ಷಕ್ಕೆ ಒಂದು ಪಂಚಾಯತ್‌ಗೆ ಕನಿಷ್ಠ 100 ಕೋಟಿ ರೂ. ಅನುದಾನ ಹರಿದು ಬರುತ್ತದೆ. ಇದರ ನಿರ್ವಹಣೆ, ರೂಪಿಸಲಾದ ಯೋಜನೆಗಳ ಅನುಷ್ಠಾನ, ಫಲಾನುಭವಿಗಳ ಆಯ್ಕೆ, ಗ್ರಾಮ ಸಭೆ ಆಯೋಜನೆ ಮತ್ತು ಇವುಗಳ ವರದಿಯನ್ನು ಮೇಲಿನ ಹಂತಕ್ಕೆ ಕಳುಹಿಸುವ ಕರ್ತವ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳ ಮೇಲಿರುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಯಾವುದೇ ನೇಮಕಾತಿಗಳು ನಡೆದಿಲ್ಲ. ಪಂಚಾಯತ್‌ಗಳ 2,300 ಹುದ್ದೆಗಳ ಜತೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಆಡಳಿತ ವಿಕೇಂದ್ರೀಕರಣದ ಕಲ್ಪನೆ ಮತ್ತು ಗ್ರಾಮ ಸ್ವರಾಜ್ಯದ ಆಶಯ ಪೂರ್ಣಗೊಳ್ಳಬೇಕಾದರೆ ಖಾಲಿ ಹುದ್ದೆ ಭರ್ತಿಗೆ ಆದ್ಯತೆ ನೀಡಬೇಕು. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಆರ್ಥಿಕ ಮಿತವ್ಯಯ ನಿರ್ಬಂಧದಿಂದ ವಿನಾಯಿತಿ ನೀಡಿ ಖಾಲಿ ಹುದ್ದೆ ಗಳ ಭರ್ತಿಗೆ ಸರಕಾರ ತ್ವರಿತವಾಗಿ ಕಾರ್ಯೋನ್ಮುಖವಾಗಬೇಕಿದೆ. Advertisement
ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ಶೀಘ್ರ ನೇಮಿಸಿ
01:35 AM Mar 17, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.