Advertisement

ಪಾಂಬೂರು ಪರಿಚಯ ಪ್ರತಿಷ್ಠಾನ; ಚಿತ್ರ ಪರಿಚಯ; ನಿಸರ್ಗ ಚಿತ್ರಣ ಶೈಕ್ಷಣಿಕ ವಸತಿ ಶಿಬಿರ

02:10 PM Jan 09, 2024 | Team Udayavani |

ಶಿರ್ವ: ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟಿವಟಿಕೆಗಳನ್ನು ಆಯೋಜಿಸುವ ಪಡುಬೆಳ್ಳೆ ಪಾಂಬೂರಿನ ಪರಿಚಯ ಪ್ರತಿಷ್ಠಾನವು ಚಿತ್ರ ಪರಿಚಯ; ನಿಸರ್ಗ ಚಿತ್ರಣ ಶೈಕ್ಷಣಿಕ ಶಿಬಿರವನ್ನು ಜ. 11 ರಿಂದ 21ರ ವರೆಗೆ ಪಾಂಬೂರಿನ ರಂಗ ಪರಿಚಯದಲ್ಲಿ ಆಯೋಜಿಸಿದೆ ಎಂದು ಪಾಂಬೂರು ಪರಿಚಯ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಕಾಶ್‌ ನೊರೊನ್ಹಾ ಜ.8ರಂದು ಕಾಪು ಪ್ರಸ್‌ ಕ್ಲಬ್‌ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಜ. 11 ರಂದು ಸಂಜೆ 6 ಗಂಟೆಗೆ ಚಿತ್ರಕಲಾವಿದ ಹಾಗೂ ಶಿಕ್ಷಕ ರಮೇಶ್‌ ಬಂಟಕಲ್ಲು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಪಾಂಬೂರು ಹೋಲಿ ಕ್ರಾಸ್‌ ಚರ್ಚ್‌ನ ಧರ್ಮಗುರು ರೆ|ಫಾ| ಹೆನ್ರಿ ಮಸ್ಕರೇನಸ್‌ ಮತ್ತು ಮಂಗಳೂರು ಮಹಾಲಸಾ ದ್ರಶ್ಯಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಸೈಯದ್‌ ಆಸಿಫ್‌ ಆಲಿ ಉಪಸ್ಥಿತರಿರುವರು.

ಶಿಬಿರದಲ್ಲಿ ಮಂಗಳೂರು ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯದ 30 ವಿದ್ಯಾರ್ಥಿಗಳು ರಂಗ ಪರಿಚಯದಲ್ಲಿದ್ದು, ಹಗಲು ಹೊತ್ತು ವಿವಿಧ ಸ್ಥಳಗಳಲ್ಲಿ ಪ್ರಕೃತಿ ಚಿತ್ರಣ ನಿರತರಾಗಿದ್ದು, ಸಾಯಂಕಾಲ ರಂಗ ಪರಿಚಯದಲ್ಲಿ ಸಾಂಸðತಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಶಿಬಿರದ ಎಲ್ಲಾ ದಿನಗಳಲ್ಲಿ ರಂಗಪರಿಚಯದಲ್ಲಿ ವಿವಿಧ ಸಾಂಸðತಿಕ ಕಾರ್ಯಕ್ರಮಗಳು, ಉಪನ್ಯಾಸಗಳು ಹಾಗೂ ಸಿನೆಮಾ ಪ್ರದರ್ಶನ ಆಯೋಜಿಸಲಾಗಿದೆ.

ಕಾರ್ಯಕ್ರಮಗಳು

ಜ. 12ರಂದು ನಾದ ಮಣಿನಾಲ್ಕೂರು ತಂಡದಿಂದ ಕತ್ತಲೆ ಹಾಡು, ಜ. 13 ರಂದು ಖ್ಯಾತ ವೈದ್ಯ ಹಾಗೂ ಸಂಗೀತ ಕಲಾವಿದ ಡಾ| ಆರ್‌.ಎನ್‌.ಭಟ್‌ ಅವರಿಂದ ಉಪನ್ಯಾಸ, ಸಂವಾದ ಮತ್ತು ಸಂಗೀತ ಪ್ರಸ್ತುತಿ, ಜ. 14 ರಂದು ಖ್ಯಾತ ವಿನೋದ ಭಾಷಣಗಾರ್ತಿ ಸಂಧ್ಯಾ ಶೆಣೈ ಅವರಿಂದ ಹಾಸ್ಯದೊಂದಿಗೆ ಜೀವನ ಮೌಲ್ಯಗಳು, ಜ. 15ರಂದು ಹವ್ಯಾಸಿ ಪಕ್ಷಿ ವೀಕ್ಷಕ ಮತ್ತು ವನ್ಯ ಜೀವಿ ಅಧ್ಯಯನಕಾರ ಅರವಿಂದ ಕುಡ್ಲ ಅವರಿಂದ ಪಕ್ಷಿಲೋಕದ ಸಾಕ್ಷ್ಯಚಿತ್ರ ಮತ್ತು ಸಂವಾದ-ಹಕ್ಕಿ ಪರಿಚಯ, ಜ.16 ರಂದು ಖ್ಯಾತ ಕಲಾವಿದರಿಂದ ತಾಳಮದ್ದಳೆ ಪಾದುಕಾ ಪ್ರದಾನ, ಜ. 17ರಂದು ಮಂಗಳೂರು ಸಂತ ಎಲೋಸಿಯಸ್‌ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಕನ್ನಡ ನಾಟಕ ಹ್ಯಾಂಗ್‌ ಆನ್‌, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪುರಸðತ ಕನ್ನಡ ಸಿನೆಮಾಗಳ ಪ್ರದರ್ಶನ, ಜ. 18ರಂದು ಚಂಪಾ ಪಿ. ಶೆಟ್ಟಿ ನಿರ್ದೇಶನದ ಕೋಳಿ ಎಸ್ರು, ಜ. 19ರಂದು ಉತ್ಸವ್‌ ಗೋನವಾರ ನಿರ್ದೆಶನದ ಫೋಟೋ, ಜ. 20 ರಂದು ಉಮೇಶ್‌ ಬಡಿಗೇರ್‌ ನಿರ್ದೇಶನದ ದಿ ಗಾರ್ಡ್‌ ಪ್ರದರ್ಶನಗೊಳ್ಳಲಿದೆ. ಜ. 21ರಂದು ಮಧ್ಯಾಹ್ನ 3 ಗಂಟೆಯಿಂದ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿದ್ದು, ಸಂಜೆ 6. 30 ರಿಂದ ಶಿಬಿರ ಸಮಾರೋಪಗೊಳ್ಳಲಿದೆ.

Advertisement

ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್‌. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಖ್ಯಾತ ಚಿತ್ರ ಹಾಗೂ ಶಿಲ್ಪ ಕಲಾವಿದ ಬೆಂಗಳೂರಿನ ಸುದೇಶ್‌ ಮಹಾನ್‌ ಸಮಾರೋಪ ಸಂದೇಶ ನೀಡಲಿದ್ದಾರೆ.

ಎಲ್ಲಾ ಕಾರ್ಯಕ್ರಮಗಳು ಪ್ರತಿದಿನ ಸಂಜೆ 6.30ಕ್ಕೆ ಸರಿಯಾಗಿ ಆರಂಭಗೊಳ್ಳಲಿದ್ದು, ಕಲಾಸಕ್ತರಿಗೆ ಉಚಿತ ಪ್ರವೇಶವಿದೆ ಎಂದು ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪಾಂಬೂರು ಪರಿಚಯ ಪ್ರತಿಷ್ಠಾನದ ಟ್ರಸ್ಟಿಗಳಾದ ವಿಲ್ಸನ್‌ ಡಿಸೋಜಾ, ಪೀಟರ್‌ ಓಸ್ತಾ ಮತ್ತು  ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಪುಂಡಲೀಕ ಮರಾಠೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next