Advertisement

ಐಎಂಎ: ರೋಷನ್‌ ಬೇಗ್‌ ಮತ್ತೊಮ್ಮೆ ವಿಚಾರಣೆಗೆ ಗೈರು

01:06 AM Aug 14, 2019 | Lakshmi GovindaRaj |

ಬೆಂಗಳೂರು: ಅನರ್ಹಗೊಂಡಿರುವ ಶಾಸಕ ಆರ್‌.ರೋಷನ್‌ ಬೇಗ್‌ ಬಹುಕೋಟಿ ಐಎಂಎ ವಂಚನೆ ಪ್ರಕರಣ ತನಿಖೆ ಮಂಗಳವಾರ ಮತ್ತೊಮ್ಮೆ ವಿಚಾರಣೆಗೆ ಗೈರಾಗಿದ್ದಾರೆ. ಪ್ರಕರಣ ಸಂಬಂಧ ಎಸ್‌ಐಟಿ ಜು. 31ರಂದು ನೋಟಿಸ್‌ ಜಾರಿ ಆ.13ರಂದು ಹಾಜರಾಗುವಂತೆ ಸೂಚಿಸಿತ್ತು. ಆದರೆ, ರೋಷನ್‌ ಬೇಗ್‌ ಗೈರಾಗಿದ್ದಾರೆ. ಹೀಗಾಗಿ ಮುಂದಿನ ದಿನಾಂಕವನ್ನು ಸದ್ಯದಲ್ಲೇ ನಿಗದಿ ಪಡಿಸಲಾಗುವುದು ಎಂದು ಎಸ್‌ಐಟಿ ತಿಳಿಸಿದೆ.

Advertisement

ರೋಷನ್‌ ಬೇಗ್‌ ಅವರಿಗೆ 400 ಕೋಟಿ ರೂ. ಕೊಟ್ಟಿರುವುದಾಗಿ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ ತಾನೇ ಬಿಡುಗಡೆ ಮಾಡಿದ ಆಡಿಯೋ ಮತ್ತು ವಿಡಿಯೋಗಳಲ್ಲಿ ಆರೋಪಿಸಿದ್ದ. ಈ ಸಂಬಂಧ ಎಸ್‌ಐಟಿ ಜು. 9ರಂದು ಮೊದಲ ಬಾರಿಗೆ ನೋಟಿಸ್‌ ಕೊಟ್ಟು, 11ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಆದರೆ, ಅನಾರೋಗ್ಯ ಸಮಸ್ಯೆ, ಹಜ್‌ ಯಾತ್ರೆ ಕಾರಣ ಹೇಳಿ ಗೈರಾಗಿದ್ದರು. ಹೀಗಾಗಿ ಎರಡನೇ ಬಾರಿ ನೋಟಿಸ್‌ ಜಾರಿ ಮಾಡಿ ಜು.17ಕ್ಕೆ ಸಮಯ ನಿಗದಿ ಮಾಡಿತ್ತು.

ಜು. 16ರ ತಡರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು, ಒಂದು ದಿನ ವಿಚಾರಣೆ ನಡೆಸಿ, ಮೂರನೇ ನೋಟಿಸ್‌ ಕೊಟ್ಟು ಜು. 19ಕ್ಕೆ ಬರಲು ಸೂಚಿಸಿದ್ದರು. ಅಂದೂ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ನಾಲ್ಕನೇ ನೋಟಿಸ್‌ ಕೊಟ್ಟ ಜು.29ಕ್ಕೆ ಹಾಜರಲು ಸೂಚಿಸಿತ್ತು. ಆದರೆ, ಬಿ.ಎಸ್‌.ಯಡಿಯೂರಪ್ಪ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಎರಡು ದಿನಗಳ ವಿನಾಯಿತಿ ನೀಡಿದ್ದ ಎಸ್‌ಐಟಿ ಜುಲೈ 31ರಂದು ಹಾಜರಾಗವಂತೆ ಹೇಳಿತ್ತು. ಆದರೆ, ಈ ವೇಳೆ ಅನಾರೋಗ್ಯ ಕಾರಣ ಹೇಳಿ ಗೈರಾಗಿದ್ದ ರೋಷನ್‌ ಬೇಗ್‌ ಎರಡು ವಾರಗಳ ಗಡುವು ಕೇಳಿದ್ದರು. ಐದನೇ ಬಾರಿಗೆ ನೋಟಿಸ್‌ ಜಾರಿ ಮಾಡಿ ಆ.13ರಕ್ಕೆ ನಿಗದಿ ಮಾಡಿತ್ತು. ಆದರೂ ಗೈರಾಗಿದ್ದಾರೆ ಎಂದು ಎಸ್‌ಐಟಿ ತಿಳಿಸಿದೆ.

ಮನ್ಸೂರ್‌ ಖಾನ್‌ಗೆ ಚಿಕಿತ್ಸೆ: ಮನ್ಸೂರ್‌ ಖಾನ್‌ ಆ.16ರವರೆಗೆ ಎಸ್‌ಐಟಿ ವಶದಲ್ಲಿದ್ದು, ಆತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅಗತ್ಯ ಚಿಕಿತ್ಸೆ ಕೊಡಿಸಬೇಕಾಗಿದೆ. ಹೀಗಾಗಿ ಜಯದೇವ ಹೃದ್ರೋಗ ಆಸ್ಪತ್ರೆಯ ಹಿರಿಯ ವೈದ್ಯರನ್ನು ನೇಮಿಸಲಾಗಿದ್ದು, ಪ್ರತಿನಿತ್ಯ ಆತನಿಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಜತೆಗೆ ಒಬ್ಬ ವೈದ್ಯರನ್ನು ಆತನ ಬಳಿಯೇ ಇರಿಸಿಕೊಳ್ಳಲಾಗಿದೆ ಎಂದು ಎಸ್‌ಐಟಿ ಪೊಲೀಸರು ಹೇಳಿದರು.

ಐಎಂಎ ಉದ್ಯೋಗಿಗಳಿಗೆ ದಾಖಲೆಗಳ ವಿತರಣೆ: ಐಎಂಎ ಸಂಸ್ಥೆಯ ಶಿವಾಜಿನಗರ, ಜಯನಗರ ಸೇರಿ ವಿವಿಧ ಶಾಖೆಗಳಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಮಂದಿ ನೌಕರರ ಅಂಕಪಟ್ಟಿ ಸೇರಿ ಕೆಲ ಮೂಲ ದಾಖಲೆಗಳನ್ನು ಆರೋಪಿ ಮನ್ಸೂರ್‌ ಖಾನ್‌ ತನ್ನ ಬಳಿಯೇ ಇಟ್ಟುಕೊಂಡಿದ್ದ. ಪ್ರಕರಣ ಬೆಳಕಿಗೆ ಬಂದ ನಂತರ ಸಂಸ್ಥೆಯ ಕಚೇರಿಗಳ ಮೇಲೆ ದಾಳಿ ನಡೆಸಿದ ಎಸ್‌ಐಟಿ ಅಧಿಕಾರಿಗಳು ಎಲ್ಲ ನೌಕರರ ದಾಖಲೆಗಳನ್ನು ಜಪ್ತಿ ಮಾಡಿತ್ತು.

Advertisement

ಈ ವೇಳೆ ತಮ್ಮ ಮುಂದಿನ ಭವಿಷ್ಯಕ್ಕಾಗಿ ದಾಖಲೆಗಳನ್ನು ಹಿಂದಿರುಗಿಸುವಂತೆ ಸಂಸ್ಥೆಯ ಸಿಬ್ಬಂದಿ ತನಿಖಾಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್‌ ಅನುಮತಿ ಪಡೆದು, ಎಲ್ಲ ಸಿಬ್ಬಂದಿಯ ಅಂಕಪಟ್ಟಿ ಹಾಗೂ ಇತರೆ ಮೂಲ ದಾಖಲೆಗಳನ್ನು ವಾಪಸ್‌ ಕೊಡಲಾಗುತ್ತಿದೆ. ಅದಕ್ಕಾಗಿ ಡಿವೈಎಸ್‌ಪಿ ದರ್ಜೆಯ ಅಧಿಕಾರಿಯೊಬ್ಬರನ್ನು ನೇಮಿಸಿದ್ದು, ದೃಢೀಕೃತ ದಾಖಲೆ ಪರಿಶೀಲಿಸಿ ವಿತರಣೆ ಮಾಡಲಾಗುತ್ತಿದೆ ಎಸ್‌ಐಟಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next