Advertisement

ಉದಯವಾಣಿ ಸಂದರ್ಶನ : ನಾನು ಮಾಸ್‌ ಲೀಡರ್‌ ಆಗಲು ಬಂದವನಲ್ಲ !

12:37 AM Oct 23, 2020 | mahesh |

ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಸಾಧಿಸಿದ ಭರ್ಜರಿ ಗೆಲುವಿನ ಓಟವನ್ನೇ ಈ ಉಪಚುನಾವಣೆಯಲ್ಲೂ ಮುಂದುವರಿಸುವ ಉಮೇದಿನಲ್ಲಿರುವ ಬಿಜೆಪಿಯು ರಾಜರಾಜೇಶ್ವರಿನಗರ ಮತ್ತು ಶಿರಾ ಕ್ಷೇತ್ರದಲ್ಲಿ ಗೆಲುವಿಗೆ ನಾನಾ ರೀತಿಯ ತಂತ್ರ- ಪ್ರತಿತಂತ್ರಗಳನ್ನು ಹೆಣೆದು ರಣೋತ್ಸಾಹದಲ್ಲಿ ಪ್ರಚಾರಕ್ಕಿಳಿದಿದೆ. ಗೆಲುವಿನ ಲೆಕ್ಕಾಚಾರ, ನಾಯಕತ್ವದ ಕುರಿತು ಸ್ಪಷ್ಟತೆ, ಸಂಘಟನೆಯ ಬದ್ಧತೆ, ಶಿಸ್ತು ಮೀರಿದವರಿಗೆ ಎಚ್ಚರಿಕೆ ಕುರಿತಂತೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್‌ ಕುಮಾರ್‌ ಕಟೀಲು ಅವರೊಂದಿಗೆ ನೇರಾ- ನೇರ ಮಾತು.

Advertisement

ನಳಿನ್‌ಕುಮಾರ್‌ ಒಬ್ಬ ಪ್ರಭಾವಿ ನಾಯಕ ಅಲ್ಲ ಎಂಬ ಮಾತು ನಿಮ್ಮ ಪಕ್ಷದೊಳಗೇ ಇದೆ…
ನಳಿನ್‌ ಕುಮಾರ್‌ ಮಾಸ್‌ ಲೀಡರ್‌ ಆಗಲು ಬಂದವನಲ್ಲ. ಮಾಸ್‌ ಲೀಡರ್‌ ಆಗಬೇಕೆಂಬ ಹುಚ್ಚಾ ಇಲ್ಲ. ಅಧಿಕಾರ ಹೋಗುತ್ತದೆ ಎಂಬ ಚಿಂತೆ ಇಲ್ಲ. ಸಂಘಟನೆ ಏನು ಹೇಳುತ್ತದೆಯೋ ಅದನ್ನು ಕೇಳುವುದಷ್ಟೆ ಗೊತ್ತು. ನಾಳೆ ವಿಶ್ವ ಹಿಂದೂ ಪರಿಷತ್‌ನಲ್ಲಿ ಕೆಲಸ ಮಾಡು, ಬಿಎಂಎಸ್‌ನಲ್ಲಿ ಕೆಲಸ ಮಾಡು ಅಂದರೆ ಅಲ್ಲಿಗೆ ಹೋಗುತ್ತೇನೆ. ನಾನೇನೂ ಇಲ್ಲಿ ರಾಜ್ಯಾಧ್ಯಕ್ಷರಾಗಿ ಇನ್ನೊಂದು ಹುದ್ದೆಗೆ ಹೋಗಬೇಕು ಎಂದು ಬಂದವನಲ್ಲ. ನಾವು ಬೆಳೆಯುವುದಲ್ಲ. ನಮಗೆ ಪಕ್ಷ ಮೊದಲು.

ಉಪಚುನಾವಣೆಯಲ್ಲಿ ಒಳ ಒಪ್ಪಂದ ಏಕೆ ಬೇಕಾಯಿತು?
ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ಯಾರೊಂದಿಗೂ ಹೊಂದಾಣಿಕೆಯ ಅನಿವಾರ್ಯ ಇಲ್ಲ. ವಿಧಾನಸಭೆಯಲ್ಲಿ 117 ಸದಸ್ಯ ಬಲವಿದ್ದು, ಈ ಸ್ಥಾನಗಳು ಸರಕಾರವನ್ನು ನಿರ್ಣಯಿಸುವ ಸ್ಥಾನಗಳಲ್ಲ. ಪಕ್ಷವನ್ನು ಕಟ್ಟಿ ಬೆಳೆಸುವುದು ನಮ್ಮ ಉದ್ದೇಶ. ಒಪ್ಪಂದದ ಆಧಾರದಲ್ಲಿ ಪಕ್ಷ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ನಾವೇಕೆ ಒಳಒಪ್ಪಂದ ಮಾಡಿಕೊಳ್ಳಬೇಕು?

ಹಾಗಾದರೆ ಸಿಎಂ ಯಡಿಯೂರಪ್ಪ ಅವರನ್ನು ಕುಮಾರಸ್ವಾಮಿ ಮೂರು ಬಾರಿ ಭೇಟಿಯಾಗಿದ್ದೇಕೆ?
ಹಾಲಿ- ಮಾಜಿ ಸಿಎಂಗಳು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಯಾವಾಗ ಬೇಕಾದರೂ ಭೇಟಿಯಾಗಬಹುದು. ಇದರಿಂದ ಯಾವ ತಪ್ಪು ಸಂದೇಶವೂ ರವಾನೆಯಾಗದು. ನೋಡಿ, ರಾಜಕಾರಣದಲ್ಲಿ ದ್ವೇಷದಲ್ಲಿರಬೇಕು ಎಂದು ಎಲ್ಲಿದೆ? ವೈಚಾರಿಕ ವಿರೋಧವಿರಬೇಕೆ ವಿನಾ ವ್ಯಕ್ತಿಗತ ವಿರೋಧಗಳಿರಬಾರದು. ನಾನು ದಿನವೂ ಜನಾರ್ದನ ಪೂಜಾರಿಯವರ ಕಾಲು ಮುಟ್ಟಿ ನಮಸ್ಕರಿಸುತ್ತೇನೆ. ಹಾಗಾಗಿ ನಮ್ಮಿಬ್ಬರ ನಡುವೆ ಒಪ್ಪಂದವಿದೆ ಎಂದರ್ಥವೇ? ರಾಜ್ಯದ ಹಿತದೃಷ್ಟಿಯಿಂದ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಕುಮಾರಸ್ವಾಮಿ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ?

ಕರಾವಳಿ ಮಾದರಿಯಲ್ಲಿ ಪಕ್ಷ ಸಂಘಟಿಸುತ್ತೇವೆ ಎಂದು ಹೇಳಿದ್ದರ ಅರ್ಥ?
ನಾನು ರಾಜ್ಯಾಧ್ಯಕ್ಷನಾದಾಗ ಕರಾವಳಿ ಹಿನ್ನೆಲೆ ಎಂಬ ಕಾರಣಕ್ಕೆ “ಬೆಂಕಿ ಹಚ್ಚುವುದೇ ನಿಮ್ಮ ಕಾರ್ಯತಂತ್ರವೇ?’ ಎಂಬುದಾಗಿ ಕಾಂಗ್ರೆಸ್‌ನವರು ಕೇಳಿದ್ದರು. ಕರಾವಳಿಯಲ್ಲಿ ಅಳವಡಿಸಿಕೊಂಡ ಸಂಘಟನಾತ್ಮಕ ವ್ಯವಸ್ಥೆಯನ್ನು ಇಡೀ ರಾಜ್ಯದಲ್ಲಿ ಮಾಡುತ್ತೇವೆ. ಹಳೇ ಮೈಸೂರಿನಲ್ಲೂ ರೂಪಿಸುತ್ತೇವೆ.

Advertisement

ಹಾಗಾದರೆ, ನಿಮ್ಮನ್ನು ಕರಾವಳಿಗಷ್ಟೇ ಸೀಮಿತ ಗೊಳಿಸಲಾಗುತ್ತಿದೆಯೇ?
ಹಾಗೇನಿಲ್ಲ. ನನ್ನನ್ನು ಇಡೀ ರಾಜ್ಯದಲ್ಲಿ ಒಪ್ಪಿಕೊಂಡಿದ್ದಾರೆ. ನನಗೇ ಆಶ್ಚರ್ಯವಾಗುತ್ತದೆ. ನೆರೆ, ಪರಿಷತ್‌ ಚುನಾವಣೆ, ಪೂರ್ವ ಸಿದ್ಧತೆ ಮತ್ತಿತರ ಕಾರಣಕ್ಕೆ 15 ದಿನದಲ್ಲಿ ಎರಡು ಬಾರಿ ಉತ್ತರ ಕರ್ನಾಟಕ ಪ್ರವಾಸ ಮಾಡಿದ್ದೇನೆ. ಕೋವಿಡ್‌, ನಿರ್ಬಂಧದ ನಡುವೆಯೂ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಸ್ವಾಗತಿಸಿದ್ದಾರೆ. ಇಡೀ ರಾಜ್ಯದಲ್ಲಿ ಯಾವ ಕಾರ್ಯಕರ್ತರಲ್ಲೂ ಆ ಭಾವನೆ ಇಲ್ಲ.

ಚಿಹ್ನೆ ನೋಡಿ ಮತ ಹಾಕುವಂತೆ ಪ್ರಚಾರ ನಡೆಯುತ್ತಿದೆ. ಅಭ್ಯರ್ಥಿಗಳು ಲೆಕ್ಕಕ್ಕಿಲ್ಲವೆ?
ನಾವು ಎಲ್ಲ ಕಡೆ ಅಭ್ಯರ್ಥಿ ಬದಲಿಗೆ ಪಕ್ಷಕ್ಕೆ ಮತ ಹಾಕುವಂತೆಯೇ ಹೇಳುತ್ತೇವೆ. ವ್ಯಕ್ತಿಯೂ ಬೇಕು. ಆದರೆ ಕಮಲ ಚಿಹ್ನೆಯೇ ಪ್ರಮುಖ. ಬಿಜೆಪಿಯೇ ಇರಬೇಕು. ಇದರಿಂದ ಅಭ್ಯರ್ಥಿ ಘೋಷಣೆಯಾಗದಿದ್ದರೂ ಚಿಹ್ನೆ ಆಧಾರದಲ್ಲಿ ಸಂಘಟನೆ, ಪ್ರಚಾರ ಮುಂದುವರಿಯಲಿದೆ. ಬಿಜೆಪಿಯನ್ನು ಮತದಾರರ ಮನಸ್ಸಿನಲ್ಲಿ ಗಟ್ಟಿಗೊಳಿಸಿದರೆ ಮೂರ್‍ನಾಲ್ಕು ಲೀಡರ್‌ಗಳು ಬಿಟ್ಟು ಹೋದರೂ ಪಕ್ಷಕ್ಕೆ ಏನೂ ಆಗುವುದಿಲ್ಲ.

ವಲಸಿಗರಿಗಷ್ಟೇ ಪ್ರಭಾವಿ ಖಾತೆ, ಮೂಲ ಬಿಜೆಪಿ ಸಚಿವರ ಕಡೆಗಣನೆ ಅನ್ನಿಸುವುದಿಲ್ಲವೇ?
ಮೂಲ- ವಲಸಿಗರೆಂಬ ವ್ಯತ್ಯಾಸವೇ ಇಲ್ಲ. ಬಂದ ಮೇಲೆ ಎಲ್ಲರನ್ನೂ ಸ್ವೀಕರಿಸುವುದೇ ಪಕ್ಷದ ವಿಶೇಷ. ಒಂದೊಮ್ಮೆ ಸೆಟ್‌ ಆಗದಿದ್ದರೆ ಅವರು ಹೋಗುತ್ತಾರೆ. ಪಕ್ಷಕ್ಕೆ ಬಂದ 17 ಮಂದಿ ಪಕ್ಷದ ಹಿರಿಯ ನಾಯಕರು ಹೇಗೆ ಕೆಲಸ ಮಾಡುತ್ತಾರೋ ಅದಕ್ಕಿಂತಲೂ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಮೂಲ ಗೀಲ ಏನೂ ಇಲ್ಲ. ನಮ್ಮಲ್ಲಿ ಒಂದೇ ನಾಗಮಂಡಲ. ನೀವು ಸ್ವಲ್ಪ ಕೆಣಕುವುದಕ್ಕೆ ನೋಡುತ್ತೀರಿ. ಬೆಂಕಿ ಹಾಕಲು ಪ್ರಯತ್ನಿಸುತ್ತೀರಿ. ಅದಕ್ಕೆ ತುಪ್ಪ ಸುರಿಯಲು ನೋಡುತ್ತೀರಿ. ಆದರೆ ನಮ್ಮಲ್ಲಿ ಹಾಗೇನೂ ಇಲ್ಲ. “ಸಮಾಜ ಕಲ್ಯಾಣ ಖಾತೆಯನ್ನು ವರ್ಷದ ಹಿಂದೆಯೇ ಕೇಳಿದ್ದೆ. ಆಗ ಸಿಗದಿದ್ದಾಗ ದುಃಖವಾಗಿತ್ತು. ಈಗ ಖುಷಿಯಾಗಿದ್ದೇನೆ’ ಎಂದು ಸ್ವತಃ ಸಚಿವ ಶ್ರೀರಾಮುಲು ಹೇಳಿದ್ದಾರೆ. ಅವರಿಗೆ ಅಸಮಾಧಾನ ಎಲ್ಲಿದೆ?

25 ಸಂಸದರಿದ್ದರೂ ನೆರೆ ಪರಿಹಾರ ವಿಚಾರಗಳಲ್ಲಿ ಪ್ರಧಾನಿ ಬಳಿ ಮಾತಾಡಲು ಧೈರ್ಯ ಇಲ್ಲ ಎನ್ನುವ ಮಾತಿದೆಯಲ್ಲ?
ಈಗಾಗಲೇ ಪ್ರಧಾನಿ ಮೋದಿಯವರು ಏನು ಬೇಕೋ ಅದನ್ನು ಮಾಡುವುದಾಗಿ ಘೋಷಿಸಿದ್ದಾರೆ. ಹೀಗಿರುವಾಗ ಮತ್ತೇನು ಒತ್ತಾಯ ಮಾಡಬೇಕು? ಸಿದ್ದರಾಮಣ್ಣ ಮುಖ್ಯಮಂತ್ರಿಯಾಗಿದ್ದಾಗ ನೆರೆ ಬಂದು ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಮುಳುಗಿತ್ತು. ಆಗ ಸಿದ್ದರಾಮಣ್ಣ ಬರಲಿಲ್ಲ, ಒಂದು ರೂಪಾಯಿ ಕೊಡಲಿಲ್ಲ. ಕಳೆದ ವರ್ಷ ನೆರೆ ಬಂದಾಗ ಯಡಿಯೂರಪ್ಪನವರು ಸಂತ್ರಸ್ತರಿಗೆ ಪರಿಹಾರ ಕೊಟ್ಟರು. ಸಿದ್ದರಾಮಯ್ಯ ಯೋಗ್ಯತೆಗೆ ಕೇಂದ್ರದ ಮಾಜಿ ಹಣಕಾಸು ಸಚಿವ ಚಿದಂಬರಂ ಅವರ ಎದುರು ನಿಲ್ಲುವ ಶಕ್ತಿ ಇರಲಿಲ್ಲ. ಮೋದಿ ಬಿಡಿ. ಜೈಲಿಗೆ ಹೋಗಿ ಬಂದವರ ಮುಂದೆ ನಿಂತು ಮಾತನಾಡುವ ಶಕ್ತಿ ಸಿದ್ದರಾಮಯ್ಯಗೆ ಇರಲಿಲ್ಲ. ಧಮ್ಮಿದ್ದರೆ ಸಿದ್ದರಾಮಯ್ಯನವರು ಚಿದಂಬರಂ ಎದುರು ನಿಂತು ಮಾತನಾಡಬೇಕಿತ್ತು. ರಾಜ್ಯಕ್ಕೆ ಅವರು ಎಷ್ಟು ಹಣ ತಂದಿದ್ದಾರೆ ಎಂದು ಅಂಕಿಸಂಖ್ಯೆ ನೀಡಲಿ. ನಾನು ಚರ್ಚೆಗೆ ಬರುತ್ತೇನೆ.

ಸಿಎಂ ಬದಲಾಗಲಿದ್ದಾರೆಯೇ? ಬಸನಗೌಡ ಯತ್ನಾಳ್‌ ಹೇಳಿಕೆ ಮುನ್ಸೂಚನೆಯೇ?
ಯಾವುದೇ ಕಾರಣಕ್ಕೂ ನಾಯಕತ್ವದಲ್ಲಿ ಬದಲಾವಣೆ ಇಲ್ಲ. ಯಡಿಯೂರಪ್ಪ ಸರ್ವಾನುಮತ ನಾಯಕರು. ಏನಾದರೂ ನೋವುಗಳಿದ್ದರೆ ಪಕ್ಷದ ವೇದಿಕೆಯಲ್ಲಿ ಮಾತನಾಡಿಕೊಳ್ಳಬಹುದು. ಈ ರೀತಿಯ ಹೇಳಿಕೆಯನ್ನು ಯಾವುದೇ ಶಾಸಕರು ನೀಡಿದರೆ ಅನಿವಾರ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ಅವರು ಕನಸು ಬಿದ್ದ ಹಾಗೆ ಮಾತನಾಡುತ್ತಾರೆ. ಯತ್ನಾಳ್‌ ಯಾರು ಮುನ್ಸೂಚನೆ ಕೊಡಲು?

ಬಿಜೆಪಿಗೂ ಹೈಕಮಾಂಡ್‌ ಸಂಸ್ಕೃತಿ ಆವರಿಸಿದಂತಿದೆ?
ನಮ್ಮ ಪಕ್ಷದಲ್ಲಿ ಹೈಕಮಾಂಡ್‌ ಸಂಸ್ಕೃತಿ ಇಲ್ಲ. ಸಂಸದೀಯ ಮಂಡಳಿ, ರಾಷ್ಟ್ರೀಯ ಕೋರ್‌ ಕಮಿಟಿ ಮತ್ತು ಪಕ್ಷದ ಸಮಿತಿ ಇದೆ. ಅಲ್ಲಿ ಎಲ್ಲವನ್ನೂ ಅಳೆದು ತೂಗಿ ಸಾಮೂಹಿಕ ನಿರ್ಧಾರ ಕೈಗೊಳ್ಳುತ್ತಾರೆ. ನಮಗಿಂತ ಮೇಲಿರುವವರು ಎನ್ನುವುದು ಏಕೆಂದರೆ ಅವರು ನಮಗಿಂತಲೂ ಹೆಚ್ಚು ಶಕ್ತಿಯುಳ್ಳವರು.

ರಾಜ್ಯದಲ್ಲಿರುವುದು ಬಿಜೆಪಿ ಸರಕಾರವೋ, ಬಿಎಸ್‌ವೈ ಸರಕಾರವೋ?
ನಿಮಗೇಕೆ ಸಂಶಯ? ಅವರು ನಮಗೆ ಸರ್ವಾನುಮತದ ನಾಯಕರು. ಅವರ ನೇತೃತ್ವದಲ್ಲಿ ಸರಕಾರವಿದೆ. ಅವರು ಪಕ್ಷದ ಒಬ್ಬ ಸರ್ವಾನುಮತದ ನಾಯಕ. ಹಾಗಾಗಿ ಎರಡೂ ಒಂದೇ ಆಯಿತಲ್ಲ.

ಸದ್ಯದ ಪರಿ ಷತ್‌ ಚುನಾವಣೆ, ಉಪಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲಲಿದೆ?
ಪರಿಷತ್‌ನ ನಾಲ್ಕೂ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಶಿರಾ ಕ್ಷೇತ್ರದಲ್ಲಿ ಎಲ್ಲರ ಎಣಿಕೆ ಮೀರಿ ಬಿಜೆಪಿ ಜಯ ಗಳಿಸಲಿದೆ. ಜೆಡಿಎಸ್‌ನ ಕುಟುಂಬ ರಾಜಕಾರಣದಿಂದ ಜನ ಬೇಸತ್ತಿದ್ದು, ಜೆಡಿಎಸ್‌ ಮತಗಳೂ ಬಿಜೆಪಿಗೆ ವರ್ಗಾವಣೆಯಾಗುತ್ತಿವೆ. ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರ ಮೇಲೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಇನ್ನು ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಗೆಲುವಿನ ಹಂತ ದಾಟಿ ಮುಂದೆ ಹೋಗಿದೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮುನಿರತ್ನ, ರಾಮಚಂದ್ರ, ತುಳಸಿ ಮುನಿರಾಜುಗೌಡ ಮೂವರು ಈಗ ಬಿಜೆಪಿಯಲ್ಲಿದ್ದು, ಬಲ ಹೆಚ್ಚಿದೆ.

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next