ಯಾರೂ ಇಲ್ಲದಿದ್ದಾಗ ನನ್ನನ್ನು ಸಂತೈಸಿದ ಸಂತ ನೀನು. ದೂರದಲ್ಲಿ ನಿಂತು ಕಣ್ಣೀರು ಒರೆಸಿದ ಗೆಳೆಯ ನೀನು. ಸೋತಾಗ ಬಿಗಿದಪ್ಪಿದೆ, ಗೆದ್ದಾಗ ಮೈದಡವಿ ಹಾರೈಸಿದೆ. ನಿನ್ನ ಜೊತೆ ಎಲ್ಲವನ್ನೂ ಹಂಚಿಕೊಳ್ಳುವ ತುಡಿತ ನನ್ನದು. ಅದಕ್ಕೆಲ್ಲ ದನಿಯಾದ ಜೀವ ನಿನ್ನದು. ಯಾಕೋ ಇವೆಲ್ಲದರ ಮಧ್ಯೆ ನಮ್ಮಿಬ್ಬರ ಬದುಕು ಬದಲಾಯಿತು.
ಮುಸ್ಸಂಜೆಯ ವೇಳೆ ನಿನ್ನ ಆಗಮನವನ್ನೇ ಬಯಸುವ ಮನಕ್ಕೆ ಇಂದು ಒಂದು ರೀತಿಯ ಕಳವಳ. ತುಂಬಾ ಸಮಯದ ನಂತರ ನಮ್ಮಿಬ್ಬರ ಭೇಟಿ. ಅದೆಷ್ಟೋ ವರುಷಗಳೇ ಕಳೆದುಹೋಗಿವೆ. ನಿನಗಾಗಿ ಇಂದು ಮತ್ತೆ ಅದೇ ಉಸಿರು ಇಟ್ಟುಕೊಂಡು ಕಾಯುತ್ತ ಇದ್ದೀನಿ. ನಿನ್ನಲ್ಲೂ ಇದೇ ರೀತಿಯ ಭಾವನೆಗಳು ಇರಬಹುದೇ?
ಮೊದಲ ಬಾರಿಗೆ ನಾವಿಬ್ಬರೂ ಭೇಟಿ ಆದ ಆ ದಿನಗಳ ನೆನಪು ಇಂದು ಮತ್ತೂಮ್ಮೆ ಮನಸ್ಸನ್ನು ಮುದಗೊಳಿಸುತ್ತಿದೆ. ಇವತ್ತು ನಾವು ಆ ಹರೆಯವನ್ನು ದಾಟಿಕೊಂಡು ಬಂದಾಗಿದೆ. ನಮ್ಮ ಮಧ್ಯ ವಯಸ್ಸಿನ ಈ ಭೇಟಿ ಕೂಡ ನನ್ನೊಳಗಿನ ಹರೆಯವನ್ನು ಮತ್ತೆ ಚಿಗುರಿಸುತ್ತಿದೆ. ನೀನು ಹೇಗಿದ್ದೀಯೋ ಅನ್ನುವ ಕುತೂಹಲ ಮನಸ್ಸನ್ನು ಕಾಡುತ್ತಿದೆ. ಮೊದಲೇ ಮಾತು ಕಮ್ಮಿ ನಿನ್ನದು. ಆದರೆ ನಾನಿರೋವಷ್ಟು ಹೊತ್ತು ನಿನ್ನನ್ನು ಮಾತಿನಲ್ಲೇ ಕರಗಿಸುತ್ತಿದ್ದೆ. ನಿನ್ನ ಪ್ರತಿ ನಗು ಕೂಡ ನನ್ನೊಳಗೆ ಈಗಲೂ ಮಗುವಿನಂತಿದೆ. ನಿನ್ನ ಮುಗ್ಧತೆಯೇ ನನ್ನನ್ನು ನಿನ್ನತ್ತ ಸೆಳೆದಿದ್ದು. ಪ್ರತಿ ಬಾರಿಯೂ ನಿನ್ನ ಜೊತೆಯಲ್ಲೇ ಇರಬೇಕು ಅನ್ನುವ ಮಹದಾಸೆಯೊಂದು ಸದ್ದಿಲ್ಲದೆ ಹೃದಯ ಸೇರಿತ್ತು.
ಯಾರೂ ಇಲ್ಲದಿದ್ದಾಗ ನನ್ನನ್ನು ಸಂತೈಸಿದ ಸಂತ ನೀನು. ದೂರದಲ್ಲಿ ನಿಂತು ಕಣ್ಣೀರು ಒರೆಸಿದ ಗೆಳೆಯ ನೀನು. ಸೋತಾಗ ಬಿಗಿದಪ್ಪಿದೆ, ಗೆದ್ದಾಗ ಮೈದಡವಿ ಹಾರೈಸಿದೆ. ನಿನ್ನ ಜೊತೆ ಎಲ್ಲವನ್ನೂ ಹಂಚಿಕೊಳ್ಳುವ ತುಡಿತ ನನ್ನದು. ಅದಕ್ಕೆಲ್ಲ ದನಿಯಾದ ಜೀವ ನಿನ್ನದು. ಯಾಕೋ ಇವೆಲ್ಲದರ ಮಧ್ಯೆ ನಮ್ಮಿಬ್ಬರ ಬದುಕು ಬದಲಾಯಿತು. ನಿನ್ನದೇ ಬದುಕಿಗೆ ನೀನು ಹಿಂದಿರುಗಲೇಬೇಕಿತ್ತು.
ನಿನ್ನನ್ನು ನಿನ್ನ ಜೀವನಕ್ಕೆ ನಾನು ಬಿಟ್ಟುಕೊಡಬೇಕಿತ್ತು. ಅದೆಷ್ಟು ಕಷ್ಟ ಅಂತ ಗೊತ್ತಿದ್ದರೂ ಮನಸ್ಸನ್ನು ಗಟ್ಟಿ ಮಾಡಿಕೊಂಡು ನಿನ್ನ ಅಪ್ಪುಗೆಯಿಂದ ಬಿಡಿಸಿಕೊಂಡು ಬಂದುಬಿಟ್ಟೆ. ನಿನ್ನ ಆ ಮುಗ್ಧ ಮುಖ ಕಣ್ಮುಂದೆ ಇನ್ನೂ ಹಸಿರಾಗಿದೆ. ನನ್ನನ್ನು ಒಂಟಿಯಾಗಿ ಬಿಡಲು ಒಪ್ಪದ ನಿನ್ನ ಮನಸ್ಸನ್ನು ಅರಿತಿರುವೆ ನಾನು. ಬದುಕಲ್ಲಿ ಸೋತವಳನ್ನು ಪ್ರತಿಕ್ಷಣ ಹಿಡಿದೆತ್ತಿದವನು ನೀನಲ್ಲವೆ? ಹತಾಶೆಯ ನಿಟ್ಟುಸಿರಿಗೂ ಸಮಾಧಾನದ ಉಸಿರ ತಂದವನಲ್ಲವೆ? ಅದಕ್ಕೇ ನಿನಗೆ ನನ್ನ ಮೇಲೆ ಅತಿಯಾದ ಕಾಳಜಿ. ಬದುಕಲ್ಲಿ ನೀನು ಉತ್ತಮ ವ್ಯಕ್ತಿಯಾಗಬೇಕು, ನಿನ್ನ ಜೀವನ ಚೆನ್ನಾಗಿರಬೇಕು ಅಂತ ಕಾಣದ ದೇವರಿಗೆ ನಾನು ಕೈ ಮುಗಿದಿದ್ದೆ. ನೀನು ಹೋದ ಮೇಲೆ ನಾನು ಅಕ್ಷರಶಃ ಒಂಟಿಯಾಗಿ ಬಿಟ್ಟೆ. ಯಾರ ಜೊತೆಯಲ್ಲೂ ಮತ್ತೆ ನಿನ್ನ ಜತೆಗಿದ್ದಂಥ ಬಾಂಧವ್ಯ ಬೆಳೆಯಲೇ ಇಲ್ಲ. ಬೆಳೆಸುವುದೂ ಬೇಕಾಗಿರಲಿಲ್ಲ. ನಿನ್ನ ಜಾಗವನ್ನು ತುಂಬಿಸಲು ಯಾರಿಂದಲೂ ಸಾಧ್ಯವಿಲ್ಲ. ಮತ್ತೆ ನನ್ನ ಏಕಾಂತಕ್ಕೆ ಜೊತೆಯಾಗಿದ್ದು ಈ ಓದು, ಬರಹ. ಬದುಕನ್ನು ಪ್ರೀತಿಸಲು ನಮ್ಮ ಮುಂದೆ ಹಲವಾರು ದಾರಿಗಳಿವೆ ಎಂದು ನೀನಂದ ಮಾತುಗಳನ್ನು ತಪ್ಪದೇ ಪಾಲಿಸಿದ್ದೇನೆ. ನನ್ನೆಲ್ಲ ಜವಾಬ್ದಾರಿಯನ್ನು ಶಿಸ್ತಿನಿಂದ ಮುಗಿಸಿದ್ದೇನೆ. ಜೀವನಕ್ಕೆ ಚೈತನ್ಯವ ತುಂಬಿಸಿದ ಭಾವಜೀವಿ ನೀನು. ನಿನ್ನ ಸ್ನೇಹದಲ್ಲಿ ನಾನು ಪಡೆದುಕೊಂಡದ್ದು ಅಪಾರ.
ನನ್ನೆಲ್ಲ ಮನದ ಮಾತುಗಳನ್ನು ನಿನಗೆ ಇಂದು ಹೇಳಲೇಬೇಕಿದೆ. ನೀನು ಮತ್ತೆ ನನ್ನ ಮಾತುಗಳಿಗೆ ಕಿವಿಯಾಗಲೇಬೇಕು. ನನಗೆ ಗೊತ್ತು: ನೀನು ನನ್ನನ್ನು ನೋಡಲು ಅಷ್ಟೇ ಪ್ರೀತಿಯಿಂದ ಓಡಿ ಬರಲಿರುವೆ ಎಂದು. ನಮ್ಮಿಬ್ಬರ ಮುಂದೆ ಅದೆಷ್ಟೋ ಮಾತುಗಳಿವೆ. ಹೇಳದೆ ಉಳಿದಿರುವ ಮಾತುಗಳಿವೆ, ಮೌನವಿದೆ. ನಿನ್ನ ಬದುಕಿನ ಪ್ರತಿ ಮಜಲುಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ಬರ್ತಾ ಇದ್ದೀಯಾ ಅಲ್ವಾ? ಇಳಿಸಂಜೆಯಲ್ಲಿ ನಿನಗಾಗಿ ಒಂದು ಜೀವ ಕಾಯುತ್ತಿದೆ. ಬೆಳಗಿನ ಹರೆಯ ದಾಟಿ ಮುಸ್ಸಂಜೆಯ ಇಳಿವಯಸ್ಸಿನಲ್ಲಿ ಕಾಯುತ್ತಿದೆ ಈ ಉಸಿರು. ಭಾವನೆಗಳನ್ನು ಹಂಚಲು ವಯಸ್ಸಿನ ಭೇದವಿಲ್ಲ ಅನ್ನುವವನು ನೀನಲ್ಲವೆ? ಬೇಗ ಬಂದುಬಿಡು. ಕಾಯುತ್ತಿರುವೆ ನಾನಿಲ್ಲಿ, ಒಂಟಿಯಾಗಿ ತುದಿಗಾಲಲ್ಲಿ…
– ಪೂಜಾ ಗುಜರನ್